ಹರಪನಹಳ್ಳಿ, ಜು. 27- ಪಟ್ಟಣದಲ್ಲಿ ಇತ್ತಿಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ವತಿಯಿಂದ ವಿವಿಧ ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಪುರಸಭೆ ವತಿಯಿಂದಲೂ ಎರಡು ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಪುರಸಭೆ ಒಪ್ಪಿಗೆ ಸೂಚಿಸಿದೆ.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ಮಂಜುನಾಥ ಇಜಂತ್ಕರ್ ಅಧ್ಯಕ್ಷತೆ ಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಎಂ.ವಿ.ಅಂಜಿನಪ್ಪ, ಅಬ್ದುಲ್ ರಹಿಮಾನ್, ವೆಂಕಟೇಶ್, ಗೊಂಗಡಿ ನಾಗರಾಜ, ಉದ್ದಾರ ಗಣೇಶ್ ಸಿಸಿ ಕ್ಯಾಮೆರಾ ಅಳವಡಿಕೆಗೆ ಒತ್ತಾಯಿಸಿದಾಗ ಸಭೆ ಒಪ್ಪಿಗೆ ನೀಡಿತು.
ಸದಸ್ಯ ಎಂ.ವಿ. ಅಂಜಿನಪ್ಪ ಅವರು ಪಟ್ಟಣ ವ್ಯಾಪ್ತಿಯಲ್ಲಿ ಸಿಎ ಸೈಟುಗಳಿಗೆ ಡೋರ್ ನಂಬರ್ ನೀಡಿ, ಮಾರಾಟ ಮಾಡಿ ದ್ದಾರೆ ಎಂಬ ಮಾಹಿತಿ ಇದೆ. ಕೂಲಂಕುಶ ವಾಗಿ ಪರಿಶೀಲಿಸಿ ಸ್ಥಳ ಸಮೇತ ಪಟ್ಟಿ ಮಾಡಿ ಮಾಹಿತಿ ಕೊಡಿ ಎಂದು ಹೇಳಿದರು.
ಆಗ ಸದಸ್ಯರಾದ ಡಿ. ಅಬ್ದುಲ್‍ರ ಹಿಮಾನ್, ಟಿ.ವೆಂಕಟೇಶ್, ಗೊಂಗಡಿ ನಾಗರಾಜ್, ಲಾಟಿ ದಾದಾಪೀರ್, ಉದ್ದಾರ ಗಣೇಶ್ ಸಹ ಬೆಂಬಲಿಸಿ ಮಾತನಾಡಿದಾಗ, ಪರಿಶೀಲಿಸಿ ಪಟ್ಟಿ ಮಾಡಿ ಪೆನ್ಸಿಂಗ್ ಹಾಕಲು ತೀರ್ಮಾನಿಸಲಾಯಿತು. ಕೋವಿಡ್ 3ನೇ ಅಲೆ ಎದುರಿಸಲು ಫಾಗಿಂಗ್ ಯಂತ್ರ, ಬ್ಲೀಚಿಂಗ್ ಪೌಡರ್ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಸಕಲ ಸಿದ್ದತೆ ಮಾಡಿಕೊಳ್ಳಬೇಕು ಎಂದು ಎಂ.ವಿ.ಅಂಜಿನಪ್ಪ ಹೇಳಿದರು.
ಪಟ್ಟಣದಲ್ಲಿರುವ ಅನಧಿಕೃತ ನಳಗಳನ್ನು ಸಕ್ರಮಗೊಳಿಸಲು ನಾಮನಿರ್ದೇಶಿತ ಸದಸ್ಯ ರುದ್ರಪ್ಪ ನವರ ಪ್ರಶ್ನೆಗೆ ಅಧ್ಯಕ್ಷ ಮಂಜುನಾಥ ಇಜಂತ್ಕರ್ ಹಾಗೂ ಮುಖ್ಯಾಧಿಕಾರಿ ನಾಗರಾಜನಾಯ್ಕ ಒಪ್ಪಿಗೆ ಸೂಚಿಸಿದರು.
ಪಟ್ಟಣದಲ್ಲಿ ಸಾಕಷ್ಟು ಡೋರ್ ನಂಬರುಗಳನ್ನು ರದ್ದು ಮಾಡಲಾಗಿದೆ. ಜನಸಾಮಾನ್ಯರಿಗೆ ಹೊರೆಯಾಗದಂತೆ ರದ್ದಾದವುಗಳನ್ನು ಪರಿಶೀಲಿಸಿ ನಿಯಮಾನು ಸಾರ ಡೋರ್ ನಂಬರ್ ನೀಡಿ ಎಂದು ಅಬ್ದುಲ್‍ರಹಿಮಾನ್ ಒತ್ತಾಯಿಸಿದರು.
ಪುರಸಭೆಗೆ ಖಾತಾ ಬದಲಾವಣೆ, ಈ ಸ್ವತ್ತು ಸೇರಿದಂತೆ ಎಷ್ಟು ಅರ್ಜಿಗಳು ಬಂದಿವೆ? ಎಷ್ಟು ವಿಲೇವಾರಿ ಮಾಡಲಾಗಿದೆ ಮಾಹಿತಿ ಕೊಡಿ ಎಂದು ಎಂ.ವಿ.ಅಂಜಿನಪ್ಪ ಕೋರಿದಾಗ, ಸಂಬಂಧ ಪಟ್ಟ ಅಧಿಕಾರಿಗಳಿಂದ ನಿರುತ್ತರ ಬಂತು. ಮುಂದೆ ಆ ರೀತಿ ಆಗದಂತೆ ಮಾಹಿತಿ ಪುಸ್ತಕ ನಿರ್ವಹಣೆ ಮಾಡಿ ಎಂದು ಹೇಳಿದರು.
ಪಟ್ಟಣದ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ 94 ಸಿ ಮತ್ತು 94 ಸಿಸಿ ಅಡಿಯಲ್ಲಿ ನಿರ್ಮಿಸಿಕೊಂಡಿರುವ ಅಕ್ರಮ ಮನೆಗಳನ್ನು ನಿರ್ದಿಷ್ಟವಾದ ಶುಲ್ಕ ತುಂಬಿಸಿ ಕೊಂಡು ಸಕ್ರಮ ಮಾಡಿಕೊಂಡು ಅವುಗಳಿಗೆ ಡೋರ್ ನಂಬರ್ ನೀಡಿ ಎಂದು ಸದಸ್ಯ ಲಾಟಿ ದಾದಾಪೀರ್ ಸಲಹೆ ನೀಡಿದರು.
ಪುರಸಭೆ ಉಪಾಧ್ಯಕ್ಷರಾದ ನಿಟ್ಟೂರು ಭೀಮವ್ವ, ಸದಸ್ಯರುಗಳಾದ ಎಚ್. ಕೊಟ್ರೇಶ್, ನಾಮನಿರ್ದೇಶನ ಸದಸ್ಯರುಗಳಾದ ಕೆಂಗಳ್ಳಿ ಪ್ರಕಾಶ್, ರಾಘವೇಂದ್ರ ಶೆಟ್ಟಿ. ಬಿದ್ದಪ್ಪ, ಮುಖ್ಯಾಧಿಕಾರಿ ನಾಗರಾಜನಾಯ್ಕ್, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ, ಕಚೇರಿ ವ್ಯವಸ್ಥಾಪಕ ಅಶೋಕ್ , ಕಂದಾಯ ಅಧಿಕಾರಿ ಸವಿತಾ ಇತರರು ಸಭೆಯಲ್ಲಿ ಹಾಜರಿದ್ದರು.