ವರ್ಷಾಂತ್ಯದಲ್ಲಿ ಕೇಂದ್ರ ಮಾದರಿ ವೇತನ

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ವಿಶ್ವಾಸ

ದಾವಣಗೆರೆ, ಮಾ. 7 – ಈ ವರ್ಷದ ಅಂತ್ಯದೊಳಗೆ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ  ಮಾದರಿಯ ವೇತನ ಸಿಗಲಿದೆ ಎಂದಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಯಾವುದೇ ಹೋರಾಟದ ಅಗತ್ಯ ಬರದೇ ಈ ಸೌಲಭ್ಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಶಾಖೆ ವತಿಯಿಂದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಗಳ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.  ರಾಜಸ್ಥಾನದಲ್ಲಿ ಈಗಾಗಲೇ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ರಾಜ್ಯದಲ್ಲೂ ನೂತನ ಪಿಂಚಣಿ ಯೋಜನೆಯನ್ನು ನಿಲ್ಲಿಸಿ ಹಿಂದಿನ ಪಿಂಚಣಿ ಯೋಜನೆಯನ್ನೇ ಜಾರಿಗೆ ತರುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ ಎಂದ ಅವರು, ಸಂಘದ ನಿರಂತರ ಪ್ರಯತ್ನದಿಂದಾಗಿ ನೌಕರರಿಗೆ ಹೆಚ್ಚಿನ ಸೌಲಭ್ಯಗಳು ಸಿಗುತ್ತಿವೆ ಎಂದರು.

ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದವರ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ  ಸಂಘ ಒತ್ತಾಯಿಸಿದ್ದು, ಈ ಬಗ್ಗೆ  ಸರ್ಕಾರ ಪರಿಶೀಲಿಸುತ್ತಿದೆ. ಮುಂದಿನ ತಿಂಗಳು ಎಲ್ಲಾ ನೌಕರರಿಗೆ ನಗದು ರಹಿತ ಚಿಕಿತ್ಸೆ ಸಿಗಲಿದೆ. ಕೆ.ಜಿ.ಐ.ಡಿ. ವಿವರಗಳು ಆನ್‌ಲೈನ್ ಮೂಲಕ ಲಭ್ಯವಾಗಲಿವೆ ಹಾಗೂ ವೇತನದ ವಿವರ ಮೊಬೈಲ್‌ಗೇ ಬರಲಿದೆ ಎಂದು ಷಡಾಕ್ಷರಿ ತಿಳಿಸಿದರು.

ಬಜೆಟ್ ಮಂಡನೆ ವೇಳೆಯೇ ನೂತನ ವೇತನ ಆಯೋಗದ ಪ್ರಕಟಣೆ ಬರಲಿಲ್ಲ ಎಂಬ ಬಗ್ಗೆ ಕೆಲವರಿಗೆ ನಿರಾಸೆಯಾಗಿರಬಹುದು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಸೆಂಬರ್ ಒಳಗೆ ಕೇಂದ್ರ ಮಾದರಿ ವೇತನ ನೀಡುವುದಾಗಿ ಭರವಸೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ  ಯಡಿಯೂರಪ್ಪ ಈ ಬಗ್ಗೆ ಬೊಮ್ಮಾಯಿ ಜೊತೆ ಮಾತನಾಡಿದ್ದಾರೆ ಎಂದು ಷಡಕ್ಷರಿ ಹೇಳಿದರು.

ಜಿಲ್ಲಾ ಸಂಘದ ವೆಬ್ ಸೈಟ್ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ನೌಕರರ ಸಂಘ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ನೌಕರರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಕೆಳ ಹಂತದ ಉದ್ಯೋಗಿಗಳಿಗೆ ನೆರವಿನ ಅಗತ್ಯ ಹೆಚ್ಚಾಗಿರುವುದರಿಂದ, ಸಂಘದ ಸಹಾಯ ಮಹತ್ವ ಪಡೆದಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ. ಪಾಲಾಕ್ಷಿ, ತಾವು ಅಧ್ಯಕ್ಷರಾದ ನಂತರ ಸರ್ಕಾರಿ ನೌಕರರ ಸಮುದಾಯ ಭವನದ ಬಾಕಿ ಇದ್ದ 15 ಲಕ್ಷ ರೂ.ಗಳ ತೆರಿಗೆ ಪಾವತಿಸಿರುವುದಾಗಿ ಮತ್ತು 45 ಲಕ್ಷ ರೂ.ಗಳ ವೆಚ್ಚದಲ್ಲಿ ಭೋಜನಾಲಯ ಮತ್ತು ಮನರಂಜನಾ ಕೇಂದ್ರ ನಿರ್ಮಿಸಿರುವುದಾಗಿ ಹೇಳಿದರು.

ಇದಕ್ಕೂ ಮಂಚೆ ಭೋಜನಾಲಯ ಮತ್ತು ಮನರಂಜನಾ ಕೇಂದ್ರವನ್ನು ಉದ್ಘಾಟಿಸಲಾಯಿತು ಮತ್ತು ರಜತ ಮಹೋತ್ಸವ ಕಟ್ಟದ ಶಂಕುಸ್ಥಾಪನೆ ನೆರವೇರಿಸಲಾಯಿತು.

ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಸಾಧನೆ ಮಾಡಿರುವ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. 2020-21ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ನೆರವೇರಿಸಲಾಯಿತು.

ಸಭೆಯಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ರೇಷ್ಮ ಕೌಸರ್, ತಹಶೀಲ್ದಾರ್ ಬಿ.ಎನ್. ಗಿರೀಶ್, ನೌಕರ ಸಂಘದ ಜಿಲ್ಲಾ ಕಾರ್ಯದರ್ಶಿ ಸಿ.ಗುರುಮೂರ್ತಿ, ಖಜಾಂಚಿ ಎಸ್. ಕಲ್ಲೇಶಪ್ಪ, ರಾಜ್ಯ ಪರಿಷತ್ ಸದಸ್ಯ ಡಾ. ಎಸ್. ರಂಗನಾಥ್, ಗೌರವಾಧ್ಯಕ್ಷ ಡಾ. ಡಿ. ಉಮೇಶ್, ತಾಲ್ಲೂಕು ಅಧ್ಯಕ್ಷರಾದ ರೇವಣಸಿದ್ದಪ್ಪ ಅಂಗಡಿ. ಬಿ. ಕುಮಾರ್, ಜಿ.ಬಿ. ವಿಜಯ್ ಕುಮಾರ್, ಎಂ.ಕೆ. ಶಶಿಧರ್‌, ರವಿಕುಮಾರ್, ರಾಜ್ಯ ಉಪಾಧ್ಯಕ್ಷ ಮೋಹನ್, ಮಾಜಿ ಜಿಲ್ಲಾ ಅಧ್ಯಕ್ಷ ಹೆಚ್.ಎಂ. ರೇವಣಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!