ಮೂಢ ನಂಬಿಕೆಗೆ ಬಲಿಯಾಗದಿರಿ: ಡಿಸಿ

ನಗರ ದೇವತೆ ದುಗ್ಗಮ್ಮ, ಚೌಡೇಶ್ವರಿ ಜಾತ್ರೆಗಳ ನಾಗರಿಕ ಸೌಹಾರ್ದ ಸಭೆ

ದಾವಣಗೆರೆ, ಮಾ,6-  ನಗರ ದೇವತೆ ದುಗ್ಗಮ್ಮ ಜಾತ್ರೆ, ವಿನೋಬ ನಗರದ ಚೌಡೇಶ್ವರಿ ಜಾತ್ರೆ ಹಾಗೂ ಹೋಳಿ ಹಬ್ಬಗಳನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸುವ ಮೂಲಕ ಹಬ್ಬಗಳ ಹೆಸರಿನಲ್ಲಿ ನಡೆಯುವ ಕೆಲ ಮೂಢನಂಬಿಕೆಗಳನ್ನು ಧಿಕ್ಕರಿಸುವ ಮೂಲಕ ಹೊಸತನಕ್ಕೆ  ಹೊಂದಿಕೊಳ್ಳೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು,  ಪ್ರಾಣಿಬಲಿ ನಿಷೇಧ ಕಾಯಿದೆಯು ಅತ್ಯಂತ ಕಠಿಣವಾಗಿದ್ದು, ಯಾರಾದರು ಕಾನೂನು ಮೀರಿ ವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ, ಕೆಲ ಸಂದರ್ಭಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ, ಅಂತಹದಕ್ಕೆ ಯಾರೂ ಅವಕಾಶ ಮಾಡಿಕೊಡಬಾರದು. ಇದರಿಂದ ದೇವಸ್ಥಾನದ ಆಡಳಿತ ಮಂಡಳಿಗೂ ತೊಂದರೆಯಾಗುತ್ತದೆ. ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಜಾತ್ರಾ ಯಶಸ್ಸಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದೆಂದರು.

ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ ಮಾತನಾಡಿ, ಜಾತ್ರೆಗಳು ಸುಗಮವಾಗಿ ನಡೆಯಲು ಪಾಲಿಕೆ ವತಿಯಿಂದ ಎಲ್ಲಾ ನೆರವು ನೀಡಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಟ್ರಾಫಿಕ್ ಸಮಸ್ಯೆಯಾಗದಂತೆ ಹಾಗೂ ಪಾರ್ಕಿಂಗ್ ಸಂಬಂಧಿಸಿದಂತೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗುವುದು. 280 ಸಿಸಿಟಿವಿ ಕ್ಯಾಮರಾಗಳನ್ನು ಹಾಕಲಾಗುವುದು ಮತ್ತು ಡ್ರೋಣ್ ಕ್ಯಾಮರಾಗಳು ಕಣ್ಗಾವಲು ಇರಲಿವೆ. ದೇವಸ್ಥಾನದ ವತಿಯಿಂದ ಹೆಚ್ಚು ಸ್ವಯಂ ಸೇವಕರನ್ನು ನೀಡಿ ಹಾಗು ಅವರಿಗೆ ಐ.ಡಿ ಕಾರ್ಡ್‍ಗಳನ್ನು ನೀಡಿ ಎಂದರು.

ಮುಖಂಡರಾದ ಗೌಡ್ರು ಚನ್ನಬಸಪ್ಪ ಮಾತನಾಡಿ, ಜಾತ್ರೆಗೆ ಜಿಲ್ಲಾಡಳಿತ ಸಂಪೂರ್ಣವಾಗಿ ಸಹಕಾರ ನೀಡಿದ್ದು, ಕೊರೋನಾ ಮಾರ್ಗಸೂಚಿಗಳಂತೆ ಜಾತ್ರೆ ಆಚರಿಸೋಣ, ಹೊರ ಜಿಲ್ಲೆ, ರಾಜ್ಯಗಳಿಂದ ಭಕ್ತರು ಆಗಮಿಸಲಿದ್ದು, ಅವರಿಗೆ ಎಲ್ಲಾ ವ್ಯವಸ್ಥಗಳನ್ನು ಮಾಡಿಕೊಡಬೇಕೆಂದರು, ಮಹಾನಗರ ಪಾಲಿಕೆ ಕಟ್ಟಡಗಳಿಗೆ ಸುಣ್ಣ ಬಣ್ಣ, ಉತ್ತಮ ರಸ್ತೆ, ನೀರಿನ ವ್ಯವಸ್ಥೆ ಮಾಡಲಿ ಎಂದರು.

ಮುಖಂಡರಾದ ಶ್ರೀನಿವಾಸ್ ದಾಸ ಕರಿಯಪ್ಪ ಮಾತನಾಡಿ,  ಜಿಲ್ಲಾಡಳಿತದ ಆದೇಶದಂತೆ ಜಾತ್ರೆ ಮಾಡಲು ನಮ್ಮ ಸಮ್ಮತಿ ಇದೆ, ಜಾತ್ರೆ ಯಶಸ್ಸಿನಲ್ಲಿ ಪಾಲಿಕೆಯ ಪಾತ್ರ ಬಹಳಷ್ಟಿದೆ ಎಂದರು. ಮುಖಂಡರಾದ ಸಾಧಿಕ್ ಪೈಲ್ವಾನ್ ಮಾತನಾಡಿ,  ದಾವಣಗೆರೆಯಲ್ಲಿ ಯಾವುದೇ ಹಬ್ಬ, ಜಾತ್ರೆಗಳು ಸೌಹಾರ್ದತೆಯಿಂದ ನಡೆಯುತ್ತವೆ, ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದರು.

ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಮಾತನಾಡಿ, ಎಲ್ಲಾ ಕೋಮಿನವರೂ ಅತ್ಯಂತ ಅನ್ಯೋನ್ಯವಾಗಿ ಜಾತ್ರೆ ಆಚರಿಸುತ್ತೇವೆ. ಆದರೂ ಎಲ್ಲಾ ಕೋಮಿನಲ್ಲೂ ಕಿಡಿಗೇಡಿಗಳಿರುತ್ತಾರೆ. ಅಂತಹವರಿಗೆ ಎಚ್ಚರಿಕೆ ನೀಡಿ ಎಂದರು.

ಮುಖಂಡರಾದ ಸೈಯದ್ ಚಾರ್ಲಿ ಮಾತನಾಡಿ, ಎಲ್ಲಾ ಧರ್ಮದ ಹಬ್ಬಗಳೂ ಸೌಹಾರ್ದತೆಯಿಂದ ನಡೆಯಲಿ ಎಂದರು. ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಕುರಿ ಕಾಳಗವನ್ನು ನಿಗದಿತ ದೇವರಾಜ ಅರಸು ಬಡಾವಣೆಯಲ್ಲಿಯೇ ನಡೆಸಲು ಅವಕಾಶ ನೀಡಿ ಎಂದರು. ಮುಖಂಡರುಗಳಾದ, ಅವರಗೆರೆ ಉಮೇಶ್, ಹೆಚ್. ಮಲ್ಲೇಶ್, ಅಮಾನಲ್ಲಾ ಖಾನ್, ಹೆಗ್ಗೆರೆ ರಂಗಪ್ಪ ಮಾತನಾಡಿದರು. ಉಪ ಮೇಯರ್ ಗಾಯತ್ರಿ ಬಾಯಿ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‍ಒ ನಾಗರಾಜು, ಡಾ. ಚಂದ್ರಶೇಖರ್ ಸುಂಕದ್, ಪೊಲೀಸ್ ಅಧಿಕಾರಿಗಳು, ವಿವಿಧ ಸಮಾಜಗಳ ಮುಖಂಡರು ಹಾಜರಿದ್ದರು.

error: Content is protected !!