ಈ ಬಾರಿಯೂ ಕೊನೆ ಭಾಗದ ರೈತರಿಗೆ ನೀರಿನ ತೊಂದರೆಯಾಗದಂತೆ ಕ್ರಮ

ಮಲೇಬೆನ್ನೂರು, ಫೆ. 17- ಕೊನೆ ಭಾಗದ ರೈತರಿಗೆ ಈ ಬಾರಿಯೂ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಭದ್ರಾ ಕಾಡಾ ಅಧ್ಯಕ್ಷೆ ಶ್ರೀಮತಿ ಪವಿತ್ರ ರಾಮಯ್ಯ ಭರವಸೆ ನೀಡಿದರು.

ಅವರು ಮಂಗಳವಾರ ಇಲ್ಲಿನ ಭದ್ರಾ ನಾಲಾ ನಂ.3 ವಿಭಾಗದ ಕಾರ್ಯಪಾಲಕ ಅಭಿಯಂತರ ಕಚೇರಿಗೆ ಭೇಟಿ ನೀಡಿ ಕೊನೆ ಭಾಗದ ರೈತರೊಂದಿಗೆ ನೀರಿನ ಸಮಸ್ಯೆ ಕುರಿತು ಚರ್ಚಿಸಿದರು.

ಕಳೆದ 4 ದಿನಗಳಿಂದ ಹಿಂದೆ ಮುಖ್ಯ ಕಾಲುವೆಯಲ್ಲಿ ಯುವಕನೊಬ್ಬ ಬಿದ್ದು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶವದ ಹುಡುಕಾಟಕ್ಕಾಗಿ ಕಾಲುವೆಯಲ್ಲಿ ನೀರು ನಿಲ್ಲಿಸಲಾಗಿತ್ತು. ಇದರಿಂದಾಗಿ ಕೊನೆ ಭಾಗದ ರೈತರಿಗೆ ತೊಂದರೆ ಆಗಿದ್ದು, ನೀರಿನ ರೊಟೇಷನ್ ಪದ್ಧತಿಯಲ್ಲಿ ಮಲೇಬೆನ್ನೂರು ಮತ್ತು ಬಸವಾಪಟ್ಟಣ ಉಪವಿಭಾಗದ ಕೊನೆ ಭಾಗದ ರೈತರಿಗೆ 10 ದಿನಗಳ ಜೊತೆಗೆ 2 ದಿನ ಹೆಚ್ಚಾಗಿ ನೀರು ಹರಿಸುವಂತೆ ಪವಿತ್ರಾ ರಾಮಯ್ಯ ಅವರು ಎಇಇ ಗಳಾದ ಸಂತೋಷ್ ಮತ್ತು ಧನಂಜಯ ಅವರಿಗೆ ಸೂಚಿಸಿದರು.

ಈ ರೈತ ಸಂಘದ ಕೆ.ಎನ್. ಹಳ್ಳಿ ಪ್ರಭುಗೌಡ, ನಂದಿತಾವರೆ ಮುರುಗೇಂದ್ರಯ್ಯ, ಮಂಜುಳಮ್ಮ ಅವರು ಮೇಲ್ಭಾಗದಲ್ಲಿರುವ ಅಕ್ರಮ ಪಂಪ್‌ಸೆಟ್‌ಗಳ ತೆರವಿಗೆ ವಿಷಯ ಪ್ರಸ್ತಾಪಿಸಿದಾಗ ಪವಿತ್ರಾ ರಾಮಯ್ಯ ಅವರು ಅಧಿಕಾರಿಗಳು ಬಡವರ ಅಕ್ರಮ ಪಂಪ್‌ಸೆಟ್ ತೆರವು ಮಾಡಿಸಿ ಪೋಟೋ , ವಿಡಿಯೋ ತೆಗೆಸಿಕೊಂಡು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಬಲಾಢ್ಯರ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವು ಮಾಡಿಸುವ ತಾಕತ್ತು ಯಾರಿಗೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಬಿ. ವೀರಯ್ಯ, ಜಿಗಳಿಯ ಬಿಳಸನೂರು ಚಂದ್ರಪ್ಪ, ಭಾನುವಳ್ಳಿಯ ಹೆಚ್. ನಾರಾಯಣಪ್ಪ, ಪವಾಡಿ ಬಸವರಾಜಪ್ಪ, ಟಿ. ರಂಗನಾಥ್, ಕುಂಬಾರ ಬಸವರಾಜ್, ಕೆಂಚಪ್ಪ, ಚಂದ್ರಪ್ಪ, ಕುಮಾರ್, ನಿಟ್ಟೂರಿನ ಧನಂಜಯ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.

error: Content is protected !!