ದಿ. ಎಂ.ಪಿ. ಪ್ರಕಾಶ್ ಯುವ ರಾಜಕಾರಣಿಗಳಿಗೆ ಮಾದರಿ

ಹರಪನಹಳ್ಳಿ, ಫೆ. 9- ರಾಜಕೀಯದೊಂದಿಗೆ ಸಾಹಿತ್ಯ, ಸಾಂಸ್ಕೃತಿಕ, ಕಲೆಗಳನ್ನು ರೂಢಿಸಿಕೊಂಡಿದ್ದ ಮಾಜಿ ಉಪ ಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ್ ಅವರು ಇಂದಿನ ಯುವ ರಾಜಕಾರಣಿಗಳಿಗೆ ಮಾದರಿ ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ. ಲತಾ ಹೇಳಿದರು.

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಎಂ.ಪಿ. ಪ್ರಕಾಶ್ ಅವರ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ರಾಜ್ಯ ಕಂಡ ಸಜ್ಜನ ರಾಜಕಾರಣಿಗಳಲ್ಲಿ ಎಂ.ಪಿ. ಪ್ರಕಾಶ್ ಪ್ರಮುಖ ರಾಜಕಾರಣಿಯಾಗಿದ್ದರೂ ಅವರಲ್ಲೊಬ್ಬ ಕಲಾವಿದ, ರಂಗಕರ್ಮಿ, ಓದುಗ ಹಾಗೂ ಸದಭಿರುಚಿಯ ಪ್ರೇಕ್ಷಕನಿದ್ದ. ಅವರೊಬ್ಬ ಸಾಂಸ್ಕೃತಿಕ ರಾಯಭಾರಿಯಾಗಿಯೂ ಆಗಿದ್ದರು ಎಂದರು.

ಸರಳತೆ ಮತ್ತು ಸಜ್ಜನಿಕೆ ಎಂ.ಪಿ.ಪಿ. ಗುರುತಾಗಿತ್ತು. ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಯಾವಾಗಲೂ ಸರಳತೆ ಕಾಪಾಡಿಕೊಂಡು ಬಂದಿದ್ದರು. ವಿಧಾನಸೌಧದ ಮೆಟ್ಟಿಲು ಹತ್ತಿದರೂ ಸಾಂಸ್ಕೃತಿಕ ಸಂಬಂಧವನ್ನು ಅವರು ತೊರೆದಿರಲಿಲ್ಲ. ವಿನಯವಂತೂ ಅವರ ಜೀವನ ಶೈಲಿಯಾಗಿತ್ತು. ಈ ಎಲ್ಲ ಗುಣಗಳಿಂದ ಇತರೆ ರಾಜಕಾರ ಣಿಗಳಿಗಿಂತ ಭಿನ್ನವಾಗಿದ್ದರು ಎಂದು ಹೇಳಿದರು.

ರಾಜಕಾರಣದಲ್ಲಿ ಸೋತಾಗಲೆಲ್ಲ ಸಾಂಸ್ಕೃತಿಕ ಲೋಕಕ್ಕೆ ತಮ್ಮನ್ನು ಅರ್ಪಿಸಿಕೊಂಡು ಅದನ್ನು ಬೆಳೆಸುವುದರ ಜೊತೆಗೆ ತಾವೂ ಬೆಳೆದರು. ಎಂಪಿಪಿ ಕುಟುಂಬ ಎಂದಿಗೂ ಜನಮಾನಸದ ನಡುವಯೇ ಇದೆ. ನಾನು ಕೂಡ ನಮ್ಮ ತಂದೆಯ ಹಾದಿಯಲ್ಲಿಯೇ ಸಾಗುತ್ತಿದ್ದೇನೆ ಎಂದು ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಂ. ಬಸವರಾಜಯ್ಯ, ನಂದಿಬೇವೂರು ಗ್ರಾ.ಪಂ. ಉಪಾಧ್ಯಕ್ಷೆ ಲಕ್ಷ್ಮಿ ಚಂದ್ರಶೇಖರ್, ಹಲವಾಗಲು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ರತ್ನಮ್ಮ ಸೋಮಲಿಂಗಪ್ಪ, ಮುಖಂಡರಾದ ಕಾನಹಳ್ಳಿ ಪಿ.ರುದ್ರಪ್ಪ, ಕಂಚಿಕೇರಿ ಜಯಲಕ್ಷ್ಮಿ, ಗುಂಡಗತ್ತಿ ನೇತ್ರಾವತಿ, ಹುಲಿಕಟ್ಟಿ ಚಂದ್ರಪ್ಪ, ಎಂ.ವಿ. ಶ್ರೀಕಾಂತ, ಮೈದೂರು ಪಿ. ರಾಮಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್, ಹರಿಯಮ್ಮನಹಳ್ಳಿ ಶಿವರಾಜ, ಉದಯಶಂಕರ್, ಕಣಿವಿಹಳ್ಳಿ ಚಂದ್ರಶೇಖರ್, ಉಮಾ ಶಂಕರ್, ಅಲಮರಸಿಕೇರಿ ಮಂಜುನಾಥ್, ತಿಮ್ಮಲಾಪುರ ಈಶ, ಮುನೀರ್, ಶಮಿವುಲ್ಲಾ,  ಯು. ಹನುಮಂತ, ಎಲ್. ಮಂಜಾನಾಯ್ಕ ಮತ್ತಿತರರಿದ್ದರು. 

error: Content is protected !!