ರಂಗಮಂದಿರ – ಥೀಮ್‌ ಪಾರ್ಕ್‌ ನಿರ್ಮಾಣ ಬೇಡ

ದೃಶ್ಯಕಲಾ ವಿದ್ಯಾಲಯದ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಒತ್ತಾಯ

ದಾವಣಗೆರೆ, ಜ. 25 – ದೃಶ್ಯಕಲಾ ವಿದ್ಯಾಲಯದ ಆವರಣದಲ್ಲಿ ಬಯಲುರಂಗ ಮಂದಿರ ಹಾಗೂ ಥೀಮ್ ಪಾರ್ಕ್‌ ನಿರ್ಮಿಸುವುದನ್ನು ದಾವಣಗೆರೆ ಕಲಾ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘ ವಿರೋಧಿಸಿದೆ.

ರಂಗ ಮಂದಿರ ಹಾಗೂ ಥೀಮ್‌ ಪಾರ್ಕ್‌ ನಿರ್ಮಿಸಲು ಒಂದೂವರೆ ಎಕರೆ ಜಾಗ ನೀಡಿರುವುದು ಸೂಕ್ತವಲ್ಲ. ಇದರಿಂದ ಕಲಾ ಶಾಲೆಯ ಪ್ರಶಾಂತತೆ ಕೆಡುತ್ತದೆ. ದೃಶ್ಯಕಲಾ ಕ್ಷೇತ್ರ ಹಲವಾರು ಸಮಸ್ಯೆಗಳನ್ನು ಎದುರಿಸುವ ಸಂದರ್ಭದಲ್ಲೇ, ರಂಗಭೂಮಿ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಿರುವುದು ಸರಿಯಲ್ಲ ಎಂದು ಸಂಘ ತಿಳಿಸಿದೆ.

ಸಾಹಿತ್ಯ, ಸಾಂಸ್ಕೃತಿಕ ಹಾಗೂ ರಂಗ ಚಟುವಟಿಕೆಗಳಿಗೆಂದು ಕನ್ನಡ ಸಾಹಿತ್ಯ ಪರಿಷತ್ತಿಗೆ ಜಾಗ ಕೊಡಲಾಗಿದೆ. ಅಲ್ಲಿ ನಿರಂತರ ಚಟುವಟಿಕೆಗಳು ನಡೆಯುತ್ತಿವೆ. ಹೀಗಿರುವಾಗ ದಾವಣಗೆರೆ ವಿಶ್ವವಿದ್ಯಾನಿಲಯ ಜಾಗ ನೀಡಲು ಮುಂದಾಗಿರುವುದು ಸರಿಯಲ್ಲ ಎಂದು ಸಂಘ ಹೇಳಿದೆ.

ರಂಗ ಮಂದಿರ ಹಾಗೂ ಥೀಮ್‌ ಪಾರ್ಕ್‌ಗಳಿಗಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಬಾರದು. ಮುಂದೊಂದು ದಿನ ರಂಗ ಚಟುವಟಿಕೆಗಳಿಂದ ದೃಶ್ಯಕಲೆಗೆ ಮಾರಕವಾಗುವ ಅಪಾಯ ತಪ್ಪಿಸಬೇಕು ಎಂದು ಸಂಘ ಒತ್ತಾಯಿಸಿದೆ.

ಇಲ್ಲಿರುವ ಜಾಗದಲ್ಲಿ ಚಿತ್ರಕಲಾ ಉದ್ದೇಶಕ್ಕಾಗಿ ಕಟ್ಟಡ, ಸ್ಟುಡಿಯೋಗಳನ್ನು ನಿರ್ಮಿಸಬೇಕಿದೆ. ಸಾರ್ವಜನಿಕರ ಮನರಂಜನೆಯ ಉದ್ದೇಶದ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಈಗಾಗಲೇ ನೀಡಲಾಗಿರುವ ಒಂದೂವರೆ ಎಕರೆ ಜಾಗ ರದ್ದುಗೊಳಿಸಬೇಕು.

ರದ್ದತಿ ಕ್ರಮ ತೆಗೆದುಕೊಳ್ಳದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿಯೂ ಸಂಘದ ಸದಸ್ಯರಾದ ಶಂಕರ್, ಜೆ.ಆರ್. ರಾಜೇಶ್, ಮಹಾದೇವಪ್ಪ, ಡಿ. ಪುನೀತ್ ಕುಮಾರ್, ಎಸ್. ಶಕೀಲ್ ಅಹಮದ್ ಮತ್ತಿತರರು ತಿಳಿಸಿದ್ದಾರೆ.

error: Content is protected !!