ಜೆಡಿಎಸ್‌ನಿಂದ 120 ಟಾರ್ಗೆಟ್

ಜೆಡಿಎಸ್ ಜಲಧಾರೆ ಯಾತ್ರೆ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್

ದಾವಣಗೆರೆ, ಮೇ 8-  ಜನತಾ ಜಲಧಾರೆ ಮೂಲಕ ಜೆಡಿಎಸ್ ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್ ಹೇಳಿದರು.

ಭಾನುವಾರ ನಗರದ ಶ್ರೀ ಜಯದೇವ ವೃತ್ತದಲ್ಲಿ  ಹಮ್ಮಿಕೊಳ್ಳಲಾಗಿದ್ದ ಜನತಾ ಜಲಧಾರೆ ಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳಿಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಮೇಲ್ದರ್ಜೆಗೇರಿ ಸುವ ಕಾರ್ಯಕ್ರಮವನ್ನೂ ಒಳಗೊಳ್ಳಲಾಗಿದೆ ಎಂದರು.

ದಾವಣಗೆರೆಗೆ 15 ಕಿ.ಮೀ. ದೂರದಲ್ಲಿ ತುಂಗಭದ್ರಾ ನದಿ ಹರಿಯುತ್ತಿದ್ದರೂ ನಗರದ ಜನತೆಗೆ ಎಂಟು ದಿನಗಳಿಗೊಮ್ಮೆ ನೀರು ಕೊಡ ಲಾಗುತ್ತಿದೆ. ಜನತೆ ನೀರಿಗಾಗಿ ಪರಿತಪಿಸಬೇಕಾಗಿದೆ. ಆದರೆ ಜೆಡಿಎಸ್‌ನಿಂದ ನಗರಕ್ಕೆ  ಸಮೃದ್ಧ ನೀರು ಪೂರೈಸುವ ಬೃಹತ್ ಯೋಜನೆ ಕೈಗೆತ್ತಿಕೊಳ್ಳಲಾ ಗುವುದು ಎಂದರು.

ಜೆಡಿಎಸ್ ಉತ್ತರ ಅಧ್ಯಕ್ಷ ಬಾತಿ ಶಂಕರ್ ಮಾತನಾಡಿ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ನೀಡಿದ್ದ ಭರವಸೆಗಳು ಹುಸಿಯಾಗಿವೆ. ಆದರೆ ನೆನೆಗುದಿಗೆ ಬಿದ್ದಿರುವ ಅನೇಕ ನೀರಾವರಿ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವ ಮೂಲಕ ನೆಲ, ಜಲ, ಸಂಸ್ಕೃತಿ, ಜನರ ಭಾವನೆಗಳನ್ನು ರಕ್ಷಿಸುವ ಕೆಲಸವನ್ನು ಜೆಡಿಎಸ್ ಮಾಡಲಿದೆ ಎಂದರು.

ರೈತರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ರಾಜ್ಯವ್ಯಾಪಿ ಜನತಾ ಜಲಧಾರೆ ಯಾತ್ರೆ ಕೈಗೊಳ್ಳಲಾಗಿದೆ. 2023ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರುವ ಜೊತೆಗೆ ಪೂರ್ಣಾವಧಿ ಆಡಳಿತ ನೀಡಲಿದೆ. ನೆನೆಗುದಿಗೆ ಬಿದ್ದ ನೀರಾವರಿ ಯೋಜನೆಗಳಿಗಾಗಿ ಪಂಚತಂತ್ರ ಯೋಜನೆ ರೂಪಿಸಲಿದೆ ಎಂದು ಹೇಳಿದರು.

ಮೇ 13ಕ್ಕೆ ಬೆಂಗಳೂರಿನ ನೆಲಮಂಗಲದಲ್ಲಿ ರಥಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜೆ.ಅಮಾನುಲ್ಲಾ ಖಾನ್ ಮಾತನಾಡುತ್ತಾ, ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ಮನೋಭಾವನೆ ಜನರಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ, ಈ ರಾಜ್ಯದಲ್ಲಿ ಮುಂದೆ ಜೆಡಿಎಸ್‍ಗೆ ಬಹುದೊಡ್ಡ ಮನ್ನಣೆ ದೊರೆಯಲಿದೆ ಎಂದು ಹೇಳಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸಮುದಾಯದ ಓಟು ಪಡೆದ ಜನಪ್ರತಿನಿಧಿಗಳು ಆ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಕೇವಲ ಓಟನ್ನು ಹಾಕಿಸಿಕೊಂಡು ಆ ಸಮಾಜದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ ಎಂದು ದೂರಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಉತ್ತಮ ಆಸ್ಪತ್ರೆ ಇಲ್ಲ. ಮೂಲಭೂತ ಸೌಕರ್ಯಗಳಿಂದ ಜನರು ವಂಚಿತರಾಗಿದ್ದಾರೆ. ಹಣ ಬಲದಿಂದ ಅಧಿಕಾರ ಪಡೆಯಬಹುದು ಎಂಬ ಮನೋಭಾವನೆ ಹೊಂದಿರುವ ರಾಷ್ಟ್ರೀಯ ಪಕ್ಷಗಳಿಗೆ ಈ ಬಾರಿ ಅಲ್ಲಿನ ಮತದಾರ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಪಕ್ಷಕ್ಕೆ ಸೇರಿದ ನಂತರ ಪಕ್ಷಕ್ಕೆ ಒಂದು ಹೊಸಬೆಳಕು ಬಂದಿದೆ. ಬಿಜೆಪಿಯಿಂದ ಭ್ರಮನಿರಸನರಾಗಿರುವ ಜನರು ಬದಲಾವಣೆ ಬಯಸುತ್ತಿದ್ದಾರೆ. ಹೈಕಮಾಂಡ್ ಸಂಸ್ಕೃತಿಯಿಂದ ಬೇಸತ್ತು ಪ್ರಾದೇಶಿಕ ಪಕ್ಷ ಜೆಡಿಎಸ್‍ನತ್ತ ಒಲವು ತೋರುತ್ತಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಲಿದೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಗಣೇಶ ಟಿ.ದಾಸಕರಿಯಪ್ಪ, ಯು.ಎಂ.ಮನ್ಸೂರ್ ಅಲಿ, ಡಿ.ಆರ್. ಧನಂಜಯ, ರೇಖಾ,  ಗಾಯತ್ರಿ ದೇವಿ, ಸುಧಾಗೌಡ್ರು, ಗೀತಾ ವೆಂಕಟೇಶ, ಪರ್ವೀನ್ ಬಾನು, ದಾದಾಪೀರ್, ಶಹನವಾಜ್ ಖಾನ್, ಕಿರಣ್ ಹುಲ್ಮನಿ, ವಾಜಿದ್, ಹೆಚ್.ಜಿ. ಮಂಜುನಾಥ್,  ರಾಜಾಸಾಬ್ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!