ಸಮಾಜವನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ

ವೀರಶೈವ ಲಿಂಗಾಯತರೆಲ್ಲಾ ಒಂದಾದರೆ ಮಾತ್ರ ಶಕ್ತಿ ಪ್ರದರ್ಶನ ಮಾಡಲು ಸಾಧ್ಯ

ದಾವಣಗೆರೆ, ಮೇ 6- ವೀರಶೈವ ಲಿಂಗಾಯತರೆಲ್ಲಾ ಒಂದಾದರೆ ಮಾತ್ರ ಶಕ್ತಿ ಪ್ರದರ್ಶನ ಮಾಡಲು ಸಾಧ್ಯವಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ತಮ್ಮ ಇಂಗಿತ ವ್ಯಕ್ತಪಡಿಸಿದರು.

ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ಬಸವೇಶ್ವರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ವೀರಶೈವ ಸಮಾಜ 99 ಒಳಪಂಗಡ ಗಳಾಗಿದ್ದು, ಒಗ್ಗೂ ಡಿಸುವ ಕೆಲಸ ಕಷ್ಟ ಸಾಧ್ಯವಾಗಿದೆ. ಕೆಲವು ಒಳಪಂಗಡವರು 2 ಎ ಮೀಸಲಾತಿ ಕೊಡಿ ಎಂದು ಹೋರಾಟ ಮಾಡುತ್ತಿದ್ದಾರೆ. ವೀರಶೈವ ಸಮಾಜವನ್ನು ಒಡೆಯುವ ಮೂಲಕ  ಸಮಾಜವನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವೀರಶೈವ ಮಹಾಸಭಾದ ಜಿಲ್ಲಾ ಘಟಕ ದೇವರಮನಿ ಶಿವಕುಮಾರ್ ನೇತೃತ್ವದಲ್ಲಿ ಸಂಘಟನಾತ್ಮಕ ಕೆಲಸವನ್ನು ನಿರ್ವಹಿಸುತ್ತಿದ್ದು, ಮಹಿಳಾ ಘಟಕ, ಯುವ ಘಟಕ, ನಗರ ಘಟಕಗಳು ಸಮಾಜ ಕಟ್ಟುವ ಕೆಲಸದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಅತೀವ ಸಂತೋಷವನ್ನು ಉಂಟು ಮಾಡಿದೆ ಎಂದು ಹೇಳಿದರು.

ಲಿಂಗಪೂಜೆ ಮಾಡುವ ಪ್ರತಿಯೊಬ್ಬರೂ ಸಹ ಲಿಂಗವಂತರೇ, ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂಬ ಭಾವನೆ ತಮ್ಮದು. ಇದನ್ನು ಅರಿತು ಎಲ್ಲರೂ ಒಂದಾಗಬೇಕಾದ ಅಗತ್ಯವಿದೆ ಎಂದರು.

12 ನೇ ಶತಮಾನದಲ್ಲಿಯೇ ಮಹಿಳಾ ಸ್ವಾತಂತ್ರ್ಯ ನೀಡಿದ ಮಹಾನ್ ಪುರುಷ ಬಸವಣ್ಣ. ಲಿಂಗಾಯತ ಧರ್ಮ ಪ್ರಾರಂಭ ಮಾಡಿ ಇಡೀ ಪ್ರಪಂಚಕ್ಕೆ ಮಾದರಿಯಾಗಿದ್ದಾರೆ. ಬಸವ ತತ್ವಗಳು ವಿಶ್ವದ ಎಲ್ಲೆಡೆ ಪಸರಿಸಿವೆ. ಅಂದಿನ ಅನುಭವ ಮಂಟಪದ ಮಾದರಿಯಲ್ಲಿಯೇ ಪಾರ್ಲಿಮೆಂಟ್, ವಿಧಾನ ಮಂಡಲ ರಚನೆಯಾಗಿವೆ ಎಂದು ಹೇಳಿದರು.

ದೇಶದಲ್ಲಿ  ಮೊಟ್ಟಮೊದಲ ಬಾರಿ ಬಸವ ಜಯಂತಿಯನ್ನು ಆರಂಭಿಸಿದ ಕೀರ್ತಿ ದಾವಣಗೆರೆ ಸೇರಿದ್ದು, ಬಸವ ತತ್ವಗಳು ಅಮರವಾಗಿವೆ. ಮನುಷ್ಯ ಕುಲಂ ಒಂದೇ, ಗಂಡು-ಹೆಣ್ಣು ಎರಡೇ ಜಾತಿಗಳಿವೆ ಎಂಬುದನ್ನು ಬಸವಣ್ಣ ಪ್ರತಿಪಾದಿಸಿದ್ದಾರೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ದೇವಮನಿ ಶಿವಕುಮಾರ್ ಮಾತನಾಡಿ, ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಸಮ್ಮೇಳನ ಆಯೋಜನೆ ಮಾಡುವ ಚಿಂತನೆ ನಡೆಸಲಾಗಿದ್ದು, ಇದಕ್ಕೆ ರಾಷ್ಟ್ರೀಯ ಅಧ್ಯಕ್ಷರು ಅನುಮತಿಸಬೇಕು ಎಂದು ಮನವಿ ಮಾಡಿದರು. 

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶುಭ ಐನಳ್ಳಿ ಬಸವ ಜಯಂತಿ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭಾ ಪದಾಧಿಕಾರಿಗಳಾದ ಐಗೂರು ಚಂದ್ರಶೇಖರ್, ಕರೇಶಿವಪ್ಳ ಸಿದ್ದೇಶ್, ಶಂಭು ಉರೇಕೊಂಡಿ, ಸಂದೀಪ ಅಣಬೇರು, ಪುಷ್ಪಾ ವಾಲಿ, ಜಯಪ್ರಕಾಶ್ ಮಾಗಿ, ನವೀನ್, ಕೊರಟಿಕೆರೆ ಶಿವಕುಮಾರ್, ಕೆ.ಎಸ್.ಬಸವಂತಪ್ಪ, ಬಿ.ಎಸ್.ರಮೇಶ್, ಮಹಾಂತೇಶ್ ಒಣರೊಟ್ಟಿ, ಕುರುಡಿ ಗಿರೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸೌಮ್ಯ ಪ್ರಕಾಶ್ ಮತ್ತು ಸಂಗಡಿಗರು ವಚನ ಗಾಯನ ನಡೆಸಿಕೊಟ್ಟರು. ಬಸವ ಜಯಂತಿ ಅಂಗವಾಗಿ ಏರ್ಪಡಿಸಿದ್ದ ವಚನ ಗಾಯನ ಹಾಗೂ ವೇಷಭೂಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಇದೇ ವೇಳೆ ಯುವ ಘಟಕದ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ಸಂದೀಪ್ ಅವರಿಗೆ `ಮಹಾ ಸಂಘಟನಾ ಚತುರ’ ಬಿರುದು ನೀಡಿ ಗೌರವಿಸಲಾಯಿತು. ಜ್ಞಾನಿಕಾ ಐನಳ್ಳಿ ನಿರೂಪಿಸಿದರು.

error: Content is protected !!