ಬೆಲೆ ಏರಿಕೆ, ವಾಲ್ಮೀಕಿ ನಿಗಮದ ಹಣ ದುರ್ಬಳಕೆಯೇ ಕಾಂಗ್ರೆಸ್ ಸಾಧನೆ

ಬೆಲೆ ಏರಿಕೆ, ವಾಲ್ಮೀಕಿ ನಿಗಮದ ಹಣ ದುರ್ಬಳಕೆಯೇ ಕಾಂಗ್ರೆಸ್ ಸಾಧನೆ

ಹರಿಹರದ ಶಾಸಕ ಬಿ.ಪಿ. ಹರೀಶ್ ವ್ಯಂಗ್ಯ

ಹರಿಹರ, ಏ.2- ಬೆಲೆ ಏರಿಕೆ, ವಾಲ್ಮೀಕಿ ನಿಗಮದ ಹಣ ದುರ್ಬಳಕೆ, ದಲಿತ, ಹಿಂದುಳಿದ ವರ್ಗಗಳ ಮತ್ತು ಟಿ.ಎಸ್.ಪಿ. ಎಸ್ ಪಿ ಹಣವನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಿದ್ದೇ ಕಾಂಗ್ರೆಸ್ ಆಡಳಿತದ ಎರಡು ವರ್ಷಗಳ ಸಾಧನೆಯಾಗಿದೆ. ರಾಜ್ಯದಲ್ಲಿನ ಅಭಿವೃದ್ಧಿ ಶೂನ್ಯ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಎರಡು ವರ್ಷಗಳಲ್ಲಿ ಹಾಲು, ವಿದ್ಯುತ್, ಬಸ್ ಪ್ರಯಾಣ ದರ, ವೈದ್ಯಕೀಯ ವೆಚ್ಚ, ಮುದ್ರಾಂಕ ಶುಲ್ಕ, ವೃತ್ತಿಪರ ತೆರಿಗೆ, ಡೀಸೆಲ್ ಸೇರಿದಂತೆ ಹಲವಾರು ದರಗಳನ್ನು ಹೆಚ್ಚಿಸಿ ಸಾರ್ವಜನಿಕರು ಕಷ್ಟದಿಂದ ಜೀವನ ನಡೆಸುವಂತಹ ಸ್ಥಿತಿಗೆ ತರುವ ಕೆಲಸವನ್ನು ಮಾಡಿದ್ದಾರೆ ಎಂದರು. 

ತಾಲ್ಲೂಕಿನಲ್ಲಿ ಮೂರು ಲಕ್ಷ ಜನಸಂಖ್ಯೆ ಇದ್ದರೂ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 1 ಬೋರ್‌ವೆಲ್ ಹಾಗೂ 1 ವಾಹನ, ವೈಯಕ್ತಿಕ ಸಾಲ ಸೌಲಭ್ಯ 5 ರಿಂದ 6 ಜನರಿಗೆ ನೀಡುವಂತ ಸಾಧನೆಯಾಗಿದೆ. ಕಳೆದ ಸಾಲಿನ ಟೆಂಡರ್ ಕಾರ್ಯಗಳು ಇನ್ನೂ ಆರಂಭಗೊಳ್ಳದೇ ಇರುವುದರಿಂದ ಗುತ್ತಿಗೆದಾರರು ಹೊಸದಾಗಿ ಕಾಮಗಾರಿ ಮಾಡಲಿಕ್ಕೆ ಮುಂದೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಕೇವಲ ಲೆಕ್ಕಪತ್ರದಲ್ಲಿ ಮಾತ್ರ ಅಭಿವೃದ್ಧಿ ಎಂದು ಬಿಂಬಿಸುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.

17-18 ಬಾರಿ ಬಜೆಟ್ ಮಂಡನೆ ಮಾಡಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುವ ಸಿಎಂ ಸಿದ್ಧರಾಮಯ್ಯ ಅವರು ರಾಜ್ಯದಲ್ಲಿ ಅಭಿವೃದ್ಧಿ ಪರ್ವವನ್ನು ಯಾಕೆ  ಮಾಡುತ್ತಿಲ್ಲ. ಗ್ಯಾರಂಟಿ ನೀಡಿರುವ ತೆಲಂಗಾಣ ರಾಜ್ಯದಲ್ಲಿ ನೌಕರರ ವೇತನ ಪಾವತಿಸಲು ಹಣ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಮಾಚಲ ಪ್ರದೇಶವು ದಿವಾಳಿತನದ ಹಾದಿಯಲ್ಲಿ ಸಾಗಿದೆ. ಹಾಗಾಗಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಅನೇಕ ತಜ್ಞರು ಸಲಹೆ ನೀಡಿದರೂ ಸಹ ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿಗಳು ಮುಂದುವರೆಸುವುದಾಗಿ ಹೇಳುತ್ತಿದ್ದಾರೆ. ಇದರಿಂದಾಗಿ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಗ್ಯಾರಂಟಿ ಯೋಜನೆ ಶಾಪವಾಗಿ ಮಾರ್ಪಟ್ಟಿದೆ ಎಂದರು. 

ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ಅಭಿವೃದ್ಧಿ ಮಾಡದೇ ಗ್ಯಾರಂಟಿ ಯೋಜನೆ ಮೂಲಕ ಜನರ ಆರ್ಥಿಕ ಶಕ್ತಿ ಕುಗ್ಗಿಸುವ ಕೆಲಸಕ್ಕೆ ಮುಂದಾಗಿದ್ದಲ್ಲದೇ, ಜನರ ರಕ್ತವನ್ನು ಹೀರುವ ಕೆಲಸವನ್ನು ಮಾಡಲಿಕ್ಕೆ ಮುಂದಾಗಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತದಲ್ಲಿದ್ದರೂ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರಿಗೆ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ನೀಡಿರುವುದು ಅಭಿನಂದನಾರ್ಹ ಕೆಲಸವಾಗಿದೆ ಎಂದು ಹೇಳಿದರು.

ಜೊತೆಗೆ, ಕನಕ ಗುರುಪೀಠದ ಜಗದ್ಗುರು ನಿರಂಜನಾನಂದ ಪುರಿ ಶ್ರೀಗಳಿಗೆ, ಶಿಕ್ಷಣ ತಜ್ಞ ನಿರಂಜನ ಅವರಿಗೆ ನೀಡಿರುವುದು ಹರ್ಷ ತಂದಿದೆ ಎಂದು ಹೇಳಿದರು.

ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಮಾತನಾಡಿ, ಕಾಂಗ್ರೆಸ್ ತನ್ನ ದಿವಾಳಿತನವನ್ನು ಮುಚ್ಚಿಕೊಳ್ಳಲು ಸೇವಿಸುವ ಗಾಳಿಯನ್ನು ಹೊರತು ಪಡಿಸಿ ಉಳಿದಂತೆ ಎಲ್ಲಾ ದರವನ್ನು ದುಪ್ಪಟ್ಟು ಮಾಡಿದೆ. ಬೀಜ, ಗೊಬ್ಬರದ ದರ ದುಪ್ಪಟ್ಟು ಮಾಡಿ ರೈತರು ನೆಮ್ಮದಿಯಿಂದ ಬದುಕದಂತೆ ಮಾಡಿ ದ್ದಾರೆ. ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲಿಕ್ಕೆ ಶೇ. 4 ರಷ್ಟು ಮೀಸಲಾತಿ ಹೆಚ್ಚು ಮಾಡಲಿಕ್ಕೆ ಮುಂದಾಗಿ ರಾಜ್ಯದಲ್ಲಿ ತುಘಲಕ್ ದರ್ಬಾರ್ ಮಾಡಲಿಕ್ಕೆ ಮುಂದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಶ್ವಿನಿ ಕೃಷ್ಣ, ಹನುಮಂತಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಪ್ರಧಾನ ಕಾರ್ಯದರ್ಶಿ ತುಳಜಪ್ಪ ಭೂತೆ, ಹೆಚ್ ಮಂಜಾನಾಯ್ಕ್, ದೂಡಾ ಮಾಜಿ ಸದಸ್ಯ ರಾಜು ರೋಖಡೆ, ವಿನಾಯಕ ಆರಾಧ್ಯಮಠ, ಶಶಿಧರ್ ಇತರರು ಹಾಜರಿದ್ದರು.

error: Content is protected !!