ಬಾಪೂಜಿ ಸಹಕಾರಿ ಬ್ಯಾಂಕ್‌ಗೆ 18.58 ಕೋಟಿ ರೂ. ಲಾಭ

ಬಾಪೂಜಿ ಸಹಕಾರಿ ಬ್ಯಾಂಕ್‌ಗೆ  18.58 ಕೋಟಿ ರೂ. ಲಾಭ

ಬ್ಯಾಂಕಿನ ಅಧ್ಯಕ್ಷ ಎಸ್ಸೆಸ್, ಉಪಾಧ್ಯಕ್ಷ ಎಸ್ಸೆಸ್ಸೆಂ ಸಂತಸ

ದಾವಣಗೆರೆ, ಏ.2- ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ಬಾಪೂಜಿ ಕೋ-ಆಪರೇಟಿವ್ ಬ್ಯಾಂಕ್ 2024-25ನೇ ಸಾಲಿನಲ್ಲಿ ಒಟ್ಟು ರೂ.18.58 ಕೋಟಿ ಲಾಭ ಗಳಿಸಿದ್ದು,  ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿ ಮುಂದುವರೆದಿದೆ. ಆದಾಯ ತೆರಿಗೆ ಮತ್ತು ಇತರೆ ಅವಕಾಶಗಳನ್ನು ಕಲ್ಪಿಸಿದ ನಂತರ ರೂ.11.43 ಕೋಟಿ ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕಿನ ಅಧ್ಯಕ್ಷ  ಡಾ. ಶಾಮನೂರು ಶಿವಶಂಕರಪ್ಪ ಮತ್ತು ಉಪಾಧ್ಯಕ್ಷ   ಎಸ್.ಎಸ್. ಮಲ್ಲಿಕಾರ್ಜುನ್‍ ಹಾಗೂ ನಿರ್ದೇಶಕ ಮಂಡಳಿಯವರು ಸಂತಸ ವ್ಯಕ್ತಪಡಿಸಿದ್ದಾರೆ.

ಬ್ಯಾಂಕಿನ  ಷೇರು ಬಂಡವಾಳ ರೂ. 22.63 ಕೋಟಿ, ಆಪದ್ಧನ ಮತ್ತು ಇತರೆ ನಿಧಿಗಳು ರೂ. 144.43 ಕೋಟಿ, ವಿವಿಧ ಲಾಭದಾಯಕ ಭದ್ರತೆಗಳಲ್ಲಿ ರೂ. 513.76 ಕೋಟಿಗಳನ್ನು  ತೊಡಗಣೆ ಮಾಡಿದೆ. ಬ್ಯಾಂಕಿನಲ್ಲಿನ ಠೇವಣಿಯು ರೂ.983.80 ಕೋಟಿಯಾಗಿದ್ದು, ಸಾಲ ಮತ್ತು ಮುಂಗಡಗಳು ರೂ. 566.11 ಕೋಟಿ ಮತ್ತು ದುಡಿಯುವ ಬಂಡವಾಳವು ರೂ. 1162.48 ಕೋಟಿಯಾಗಿದೆ.

ಬ್ಯಾಂಕಿನ ಸದಸ್ಯರು, ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಡಿಜಿಟಲೈಜ್ ಮಾಡುವ ಉದ್ದೇಶ ಹೊಂದಿದ್ದು ಈಗಾಗಲೇ ಐಎಂಪಿಎಸ್ ಸೇವೆ ಲಭ್ಯವಿದೆ. ಶೀಘ್ರದಲ್ಲೇ ಮೊಬೈಲ್ ಬ್ಯಾಂಕಿಂಗ್, ಯುಪಿಐ ಸೇವೆಗಳನ್ನು ತರಲು ಉದ್ದೇಶಿಸಲಾಗಿದೆ. ಬ್ಯಾಂಕಿನ ಠೇವಣಿದಾರರ ಸುರಕ್ಷತೆಯ ದೃಷ್ಟಿಯಿಂದ ರೂಪಾಯಿ ಐದು ಲಕ್ಷದವರೆಗಿನ ಠೇವಣಿಗಳಿಗೆ ಡಿಪಾಜಿಟ್ ಇನ್ಶೂರೆನ್ಸ್ ಸ್ಕೀಮ್ ಚಾಲ್ತಿಯಲ್ಲಿರುತ್ತದೆ.

ಬ್ಯಾಂಕಿನ ಸದಸ್ಯರು ಮೃತಪಟ್ಟಲ್ಲಿ ಅಂತಹ ಸದಸ್ಯರಿಗೆ ಬ್ಯಾಂಕಿನ ಮರಣೋತ್ತರ ನಿಧಿಯಿಂದ   2024-25ನೇ ಸಾಲಿನಲ್ಲಿ ರೂ. 5.80 ಲಕ್ಷ ಪಾವತಿಸಲಾಗಿದೆ. ಬ್ಯಾಂಕಿನ ಸಿಬ್ಬಂದಿ ಮತ್ತು ಕುಟುಂಬದವರಿಗೂ ಹಾಗೂ ನಿರ್ದೇಶಕ ಮಂಡಲಿಯವರಿಗೂ ಟಾಟಾ ಎಐಜಿ ಆರೋಗ್ಯ ವಿಮಾ ಸೌಲಭ್ಯ ಒದಗಿಸಿದೆ.

ಬ್ಯಾಂಕಿನ ವ್ಯವಹಾರವನ್ನು ಕರ್ನಾಟಕ ರಾಜ್ಯಾದ್ಯಂತ ವಿಸ್ತರಿಸಿದ್ದು, 2024-25ನೇ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲ್ಲೂಕಿನಲ್ಲಿ ಹೊಸ ಶಾಖೆಯನ್ನು ತೆರೆಯಲಾಗಿದ್ದು, ಶಾಖೆಯು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಎಸ್ಸೆಸ್ ತಿಳಿಸಿದರು.

ಬ್ಯಾಂಕಿನ ಯಶಸ್ಸಿಗೆ ಗ್ರಾಹಕರ, ಸದಸ್ಯರ ಮತ್ತು ಕಾರ್ಯಕಾರಿ ಮಂಡಳಿಯವರ ಸಲಹೆ, ಸಹಕಾರ ಹಾಗೂ ಸಿಬ್ಬಂದಿ ವರ್ಗದವರ ಪರಿಶ್ರಮ ಕಾರಣವಾಗಿದ್ದು, ಏವಿಯಸ್ ಪಬ್ಲಿಕೇಷನ್ ಸಂಸ್ಥೆಯವರು, ರೂ. 750-850 ಕೋಟಿ ಠೇವಣಿ ಮೊತ್ತ ಹೊಂದಿರುವ ಕ್ರಮಾಂಕದಲ್ಲಿನ ಬ್ಯಾಂಕುಗಳಿಗೆ ಪ್ರತಿ ವರ್ಷ ನೀಡಲ್ಪಡುವ `ಬ್ಯಾಂಕೋ ಬ್ಲ್ಯೂ ರಿಬ್ಬನ್ ಸೆರ್ಮನಿ- 2024′ ರ ಪ್ರಶಸ್ತಿಯನ್ನು  ನಮ್ಮ ಬ್ಯಾಂಕಿಗೆ ನೀಡಿ ಗೌರವಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬ್ಯಾಂಕಿನ  ಹಿರಿಯ ನಿರ್ದೇಶಕರೂ ಹಾಗೂ ಲೆಕ್ಕ ಪರಿಶೋಧಕರೂ  ಆದ ಡಾ. ಎ.ಎಸ್. ವೀರಣ್ಣ  ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು ಎಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ. ಬಸವರಾಜ್  ತಿಳಿಸಿದ್ದಾರೆ.

error: Content is protected !!