ದಾವಣಗೆರೆ, ಮಾ. 19- ದೃಶ್ಯಕಲಾ ಮಹಾವಿದ್ಯಾಲಯದ ವಜ್ರಮಹೋತ್ಸವದ ಅಂಗವಾಗಿ ಮಹಾವಿದ್ಯಾಲಯದ ಸಭಾಂ ಗಣದಲ್ಲಿ ಬುಧವಾರ ನಡೆದ `ದೃಶ್ಯಕಲೆಯ ಬಹುಮುಖಿ ಆಯಾಮಗಳು’ ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕಿರಣ ದಲ್ಲಿ, ಕಲಾಕೃತಿಗಳ ಅನಂತ ಸಾಧ್ಯತೆಗಳ ಬಗ್ಗೆ ಖ್ಯಾತ ಕಲಾ ವಿಮರ್ಶಕ ಕೆ.ವಿ. ಸುಬ್ರಹ್ಮಣ್ಯ ಅವರು ತಮ್ಮ ಚಿಂತನೆಗಳನ್ನು ಹಂಚಿಕೊಂಡರು.
ಪದಗಳಿಗೆ ಸೀಮಿತ ಅರ್ಥಗಳಿದ್ದಂತೆ ಕಲಾಕೃತಿಗಳಿಗೆ ಯಾವುದೇ ನಿರ್ದಿಷ್ಟ ಅರ್ಥಗಳಿಲ್ಲ. ಅವುಗಳನ್ನು ವಿವರಿಸಲು ಸಾಧ್ಯವಿಲ್ಲ, ಬದಲಿಗೆ ಅನುಭವಿಸಬೇಕು. ಕಲಾವಿದರು ತಮ್ಮ ಸೃಜನಶೀಲತೆಯಿಂದ ಮೂಡಿಸುವ ಪ್ರತಿಯೊಂದು ಕಲಾಕೃತಿಯೂ ವಿಶಿಷ್ಟ ಅನುಭವವನ್ನು ನೀಡುತ್ತವೆ ಎಂದು ಹೇಳಿದರು.
ಕಲಾ ವಿದ್ಯಾರ್ಥಿಗಳು ಕಲೆಯ ಮೂಲ ಭೂತ ಅಂಶಗಳ ಬಗ್ಗೆ ಅರಿವು ಹೊಂದುವು ದು ಅತ್ಯಗತ್ಯ. ಬಣ್ಣಗಳು, ಅವುಗಳ ಭಾವನೆಗಳ ಬಗ್ಗೆ ತಿಳಿದುಕೊಳ್ಳಬೇಕು. ಪ್ರತಿ ಬಣ್ಣವೂ ಒಂದೊಂದು ಭಾವನೆಯನ್ನು ಪ್ರತಿನಿಧಿಸುತ್ತದೆ. ದೇವತೆಗಳ ಬಣ್ಣಗಳು ಅವರ ಗುಣಗಳನ್ನು ಮತ್ತು ಪಾತ್ರಗಳನ್ನು ಸೂಚಿಸುತ್ತವೆ. ಇವುಗಳ ಅರಿವು ಕಲಾ ವಿದ್ಯಾರ್ಥಿಗಳಿಗೆ ಅಗತ್ಯ ಎಂದರು.
ಹಿಂದಿನ ಕಲಾವಿದರು ಕಲಾ ಜಗತ್ತಿಗೆ ನೀಡಿದ ಕೊಡುಗೆಗಳನ್ನು ತಿಳಿದುಕೊಳ್ಳು ವುದು ಮುಖ್ಯ. ಅವರ ಕಲಾಕೃತಿಗಳಿಂದ ಸ್ಫೂರ್ತಿ ಪಡೆದು, ಹೊಸತನವನ್ನು ಸೃಷ್ಟಿಸಲು ಪ್ರಯತ್ನಿಸಬೇಕು. ಸಂಗೀತ, ಸಾಹಿತ್ಯ, ನಾಟಕ ಮುಂತಾದ ವಿವಿಧ ಕಲಾ ಪ್ರಕಾರಗಳೊಂದಿಗೆ ಬೆರೆಯುವುದರಿಂದ ಕಲೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳ ಬಹುದು ಎಂದು ಸಲಹೆ ನೀಡಿದರು.
ಕಲಾವಿದರಿಗೆ ಕೌಶಲ್ಯ ಅತ್ಯಂತ ಮುಖ್ಯ. ಮೂಲಭೂತ ಕಲಿಕೆ ಮತ್ತು ಕೌಶಲ್ಯಗಳ ಮೂಲಕ ಉನ್ನತ ಮಟ್ಟದ ಕಲಾಕೃತಿಗಳನ್ನು ರಚಿಸಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತೆ ಗಾಯತ್ರಿ ದೇಸಾಯಿ ಮಾತನಾಡುತ್ತಾ, ಕಲಾ ಕ್ಷೇತ್ರ ತುಂಬಾ ವಿಶಾಲವಾದದ್ದು. ದೃಶ್ಯಕಲೆಯಲ್ಲಿ ಕಾಣುವ ಆಯಾಮಗಳು ಒಂದಿಷ್ಟಾದರೆ, ಕಾಣದೇ ಇರುವಂತಹ ಅನೇಕ ಆಯಾಮಗಳಿವೆ. ಇದೊಂದು ಸಮುದ್ರವಿದ್ದಂತೆ. ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಮುಗಿಸಿದರೂ, ಕಲಿಕೆ ನಿರಂತರವಾಗಿರುತ್ತದೆ ಎಂದರು.
ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೈರಾಜ್ ಎಂ. ಚಿಕ್ಕಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ರಮೇಶ್ ಸಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಹಿರಿಯ ಕಾರ್ಯಕ್ರಮಾಧಿಕಾರಿ ಕೃಷ್ಣಮೂರ್ತಿ ಟಿ.ಎನ್., ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಪಿ. ವಲ್ಲೇಪುರೆ ಉಪಸ್ಥಿತರಿದ್ದರು. ಬೋಧನಾ ಸಹಾಯಕ ದತ್ತಾತ್ರೇಯ ಎನ್. ಭಟ್ ಕಾರ್ಯಕ್ರಮ ನಿರೂಪಿಸಿದರು. ರಂಗನಾಥ ಕುಲಕರ್ಣಿ ವಂದಿಸಿದರು.
ನಂತರ ನಡೆದ ಮೊದಲ ಗೋಷ್ಠಿಯಲ್ಲಿ ಇಂದು ದೃಶ್ಯ ಕಲಾ ಮಾಧ್ಯಮಗಳು, ಅಭಿವ್ಯಕ್ತಿಗಳು, ಪ್ರಕ್ರಿಯೆಗಳು ಕುರಿತು ಟಿ.ಎನ್. ಕೃಷ್ಣಮೂರ್ತಿ ವಿಷಯ ಮಂಡನೆ ಮಾಡಿದರು.
ದೃಶ್ಯ ಕಲೆಯಲ್ಲಿ ಬುಡಕಟ್ಟು ಕಲೆಯ ಪ್ರಭಾವ ಕುರಿತು ಡಾ.ಎಂ.ಕೆ. ಗಿರೀಶ್ ಕುಮಾರ್, ಹಗಲು ವೇಷಗಾರರ ಚಿತ್ರಕಲೆ ಕುರಿತು ಡಾ.ಸಂತೋಷ್ ಕುಮಾರ್ ಕುಲಕರ್ಣಿ, ದೃಶ್ಯ ಕಲೆಯಲ್ಲಿ ವ್ಯಂಗ್ಯ ಚತ್ರಕಲೆ-ಒಂದು ಅವಲೋಕನ ಕುರಿತು ಹರೀಶ್ ಎಸ್.ಹೆಚ್. ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಡಾ.ರವೀಂದ್ರ ಎಸ್. ಕಮ್ಮಾರ್ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ನಡೆದ ಎರಡನೇ ಗೋಷ್ಠಿಯಲ್ಲಿ ಮುದ್ರಣ ಕಲಾ ಕ್ಷೇತ್ರಕ್ಕೆ ದಾವಣಗೆರೆಯ ಕೊಡುಗೆ ಕುರಿತು ಶಿವಶಂಕರ್ ಸುತಾರ್, ದೃಶ್ಯ ಕಲೆಯ ಬಹುಮುಖಿ ಆಯಾಮಗಳಲ್ಲಿ ಜಾಹೀರಾತು ಕಲೆ ಒಂದು ಅವಲೋಕನ ಕುರಿತು ಪ್ರಮೋದ್ ಕೆ.ವಿ., ರಾಷ್ಟ್ರೀಯ ಪ್ರಶಸ್ತಿ ಪಡೆದ ಸೃಜನ ಶೀಲ ಕಲಾವಿದರ ಕುರಿತು ಡಿ.ಹೆಚ್. ಸುರೇಶ್ ಹಾಗೂ ಸೃಜನ ಶೀಲ ಮೃತ್ತಿಕಾ ಶಿಲ್ಪಗಳು ಕುರಿತು ಸುಭಾಷ್ ಕುಂಬಾರ್ ವಿಷಯ ಮಂಡಿಸಿದರು.
ಕೀರ್ತನಾ ಅಲ್ಫೋನ್ಸಾ, ಮಧು ಹೀರೇಮಠ, ನವೀನ್ ಕುಮಾರ್ ಎ., ಕೀರ್ತನಾ ಎಸ್.ಎಲ್., ರಾಹುಲ್ ಕೆ., ದರ್ಶನ್ ಚಕ್ರಸಾಲಿ ಗೋಷ್ಠಿಗಳನ್ನು ನಿರ್ವಹಿಸಿದರು.