ಹರಿಹರ,ಫೆ.27- ಬರುವ ಮಾರ್ಚ್ 18 ರಿಂದ 22ರವರೆಗೆ ನಡೆಯುವ ಗ್ರಾಮದೇವತೆ ಊರಮ್ಮ ದೇವಿ ಜಾತ್ರೆಯ ವೇಳೆ ನಗರಕ್ಕೆ ಐದರಿಂದ ಆರು ಲಕ್ಷ ಜನ ಭಕ್ತರು ಆಗಮಿಸಲಿದ್ದು, ಶುದ್ಧ ಕುಡಿಯುವ ನೀರು, ಸ್ವಚ್ಚತೆ, ವಿದ್ಯುತ್ ಪೂರೈಕೆ ಸೇರಿದಂತೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕ ಬಿ.ಪಿ. ಹರೀಶ್ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಇಂದು ಕರೆದಿದ್ದ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ, ಊರಮ್ಮ ದೇವಿ ಜಾತ್ರೆಯ ಸಮಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರಣವಿಲ್ಲದೆ ಗೈರು ಹಾಜರಾಗಲು ಮುಂದಾದರೆ, ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಜನತೆಗೆ ತೊಂದರೆಗಳು ಆಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ನಗರಸಭೆ ವತಿಯಿಂದ ಮಾಡಲಾಗುತ್ತದೆ ಎಂದು ಹೇಳಿದರು.
ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತ ನಾಡಿ, ಹಬ್ಬಕ್ಕೆ ಸಂಬಂಧಿಸಿದಂತೆ ನಗರಸಭೆ ವತಿ ಯಿಂದ ಹೆಲ್ಪ್ ಲೈನ್ ಸೆಂಟರ್ ಆರಂಭಿಸಿ, ರಸ್ತೆ ದುರಸ್ತಿ ಪಡಿಸಿ ಗುಂಡಿಗಳ ಮುಚ್ಚುವ ವ್ಯವಸ್ಥೆ ಆಗಬೇಕು. ನಗರಸಭೆಯ ಪೌರ ಕಾರ್ಮಿಕರು ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಆದ್ದರಿಂದ ಅವರು ಕೆಲಸಕ್ಕೆ ರಜಾ ಹಾಕಿದಾಗ, ಇತರೆ ನಗರದ ಪೌರ ಕಾರ್ಮಿಕರನ್ನು ಕರೆಸಿಕೊಂಡು ಜನತೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ನಗರಸಭೆ ಸದಸ್ಯ ಎ. ವಾಮನಮೂರ್ತಿ ಮಾತನಾಡಿ, ಜಾತ್ರೆಗೆ ಬರುವ ಜನರಿಗೆ ನೀರು ಕೊಡಲಿಕ್ಕೆ ತುಂಗಭದ್ರಾ ನದಿಯಲ್ಲಿ ಸಂಪೂರ್ಣವಾಗಿ ನೀರು ಕಡಿಮೆ ಆಗಿದೆ. ಮತ್ತು ಕವಲೆತ್ತು ಬಳಿ ಇರುವ ಜಾಕ್‌ವೆಲ್‌ನಲ್ಲಿ ಒಂದೇ ಮೋಟರ್ ಇರುವುದರಿಂದ ಅದು ದಿಢೀರ್ ದುರಸ್ತಿಗೆ ಬಂದರೆ ತೊಂದರೆ ಆಗುತ್ತದೆ. ಆದಷ್ಟು ಬೇಗ ಹೊಸದಾಗಿ ಮೋಟರ್ ಅಳವಡಿಸಲು ಮುಂದಾಗಬೇಕು ಎಂದು ಹೇಳಿದರು.
ಸದಸ್ಯ ದಾದಾ ಖಲಂದರ್ ಮಾತನಾಡಿ, ಭಕ್ತರಿಗೆ ತೊಂದರೆ ಆಗದಂತೆ ನಗರಸಭೆ ವತಿಯಿಂದ ಬಾಡಿಗೆ ರೂಪದಲ್ಲಿ ಹೆಚ್ಚಿನದಾಗಿ ನೀರಿನ ಟ್ಯಾಂಕರ್ ಗಳನ್ನು ಪಡೆದು ಸಾರ್ವಜನಿಕರಿಗೆ ನೀರಿನ ಸಮಸ್ಯೆ ಬರದಂತೆ ನೋಡಿಕೊಳ್ಳುವುದು ಸೂಕ್ತವಾಗಿದೆ ಮತ್ತು ಮೊಬೈಲ್ ಶೌಚಾಲಯ ನಿರ್ಮಾಣ ಮಾಡಬೇಕು, ಮತ್ತು ಕಸದ ಸಾಗಣೆಯ ವಾಹನಗಳು ಕೂಡ ಕಡಿಮೆ ಇರುವುದರಿಂದ, ಹಬ್ಬದ ಸಮಯದಲ್ಲಿ ಬಾಡಿಗೆ ಟ್ರ್ಯಾಕ್ಟರ್ ಮೂಲಕ ಕಸವನ್ನು ಸಾಗಣೆ ಮಾಡಲು ಮುಂದಾಗುವಂತೆ ಹೇಳಿದರು.
ನಗರಸಭೆ ನಾಮನಿರ್ದೇಶನ ಸದಸ್ಯ ಕೆ.ಬಿ. ರಾಜಶೇಖರ್ ಮಾತನಾಡಿ, ಉತ್ಸವ ಸಮಿತಿಯ ಅಧ್ಯಕ್ಷ ಹಾರ್ನಳ್ಳಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಖಜಾಂಚಿ ಕೆಂಚಪ್ಪ ದೊಡ್ಡಮನೆ, ನಗರಸಭೆ ಸದಸ್ಯ ವಸಂತ ಮಾತನಾಡಿ ಸಲಹೆ ನೀಡಿದರು.
ನಗರಸಭೆ ಸದಸ್ಯ ಬಾಬುಲಾಲ್ ಮಾತ ನಾಡಿ, ಹಬ್ಬದ ಸಮಯದಲ್ಲಿ ಸಾರ್ವಜನಿಕರ ಆರೋಗ್ಯದಲ್ಲಿ ಸಮಸ್ಯೆಗಳು ಬಂದಾಗ, ನಮ್ಮ ಅಂಜುಮಾನ್ ಇಸ್ಲಾಮಿಯಾ ಆಂಬ್ಯುಲೆನ್ಸ್ ವಾಹನ ಸೇವೆ ಸಲ್ಲಿಸಲು ಸಿದ್ದವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಜಂಬಣ್ಣ ಗುತ್ತೂರು, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಸದಸ್ಯರಾದ ಆರ್.ಸಿ. ಜಾವೇದ್, ಕೆ.ಜಿ. ಸಿದ್ದೇಶ್, ರತ್ನ ಡಿ. ಉಜ್ಜೇಶ್, ಲಕ್ಷ್ಮಿ ಮೋಹನ್ ದುರುಗೋಜಿ, ಪಕ್ಕೀರಮ್ಮ, ಸುಮಿತ್ರಮ್ಮ, ಹನುಮಂತಪ್ಪ, ರಜನಿಕಾಂತ್, ನಾಗರತ್ನ, ಅಬ್ದುಲ್ ಅಲಿಂ, ಮುಜಾಮಿಲ್ ಬಿಲ್ಲು, ಬಿ ಅಲ್ತಾಫ್, ನಾಮನಿರ್ದೇಶನ ಸದಸ್ಯ ದಿವಾಕರ್, ನಗರಸಭೆ ಎಇಇ ವಿನಯ್ ಕುಮಾರ್, ಮ್ಯಾನೇಜರ್ ನಿರಂಜನಿ, ಆರೋಗ್ಯ ಇಲಾಖೆ ರವಿಪ್ರಕಾಶ್, ಆರ್.ಐ. ರಮೇಶ್, ಕೇಸ್ ವರ್ಕರ್ ರಾಮು, ಪರಸಪ್ಪ, ಗಾಯತ್ರಿ, ಲೆಕ್ಕಾಧಿಕಾರಿ ನಾಗರಾಜ್, ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಮಾಜೇನಹಳ್ಳಿ ಚನ್ನಬಸಪ್ಪ ಗೌಡ್ರು ಉತ್ಸವ ಸಮಿತಿಯ ಅಧ್ಯಕ್ಷ ಮಂಜುನಾಥ್ ಹಾರ್ನಳ್ಳಿ, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಖಜಾಂಚಿ ಕೆಂಚಪ್ಪ ದೊಡ್ಡಮನಿ, ಸಹ ಕಾರ್ಯದರ್ಶಿ ಸಿದ್ದಪ್ಪ ಶಾನಭೋಗರ ಗಿರೀಶ್, ಬಣಕಾರ ಆಂಜನೇಯ, ಮಾರುತಿ ವಕೀಲರು, ವಿನಾಯಕ ಆರಾಧ್ಯಮಠ ಇತರರು ಹಾಜರಿದ್ದರು.
ಜಾತ್ರೆಯ ಅಂಗವಾಗಿ ನಗರದ ಶಿವಮೊಗ್ಗ ರಸ್ತೆ ಮತ್ತು ದೊಡ್ಡಿಬೀದಿ ಬಡಾವಣೆಯಲ್ಲಿ ನಡೆಯುವ ಸಂತೆಯನ್ನು ಮುಂದಿನ ಮಂಗಳವಾ ರದಿಂದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.