ಭದ್ರಾ ಅಧೀಕ್ಷಕ ಇಂಜಿನಿಯರ್‌ಗೆ ಕೊನೆ ಭಾಗದ ರೈತರ ಆಗ್ರಹ
ಮಲೇಬೆನ್ನೂರು, ಫೆ. 18- ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಟ್ಟು 40 ದಿನಗಳು ಕಳೆದರೂ ಅಚ್ಚುಕಟ್ಟಿನ ಕೊನೆ ಭಾಗಕ್ಕೆ ಇದುವರೆಗೂ ಸಮರ್ಪಕವಾಗಿ ನೀರು ಹರಿದು ಬಂದಿಲ್ಲ. ನಾಟಿ ಮಾಡಲು ಭತ್ತದ ಸಸಿ ಮಡಿ ಬೆಳೆಸಿದ್ದೇವೆ. 3-4 ದಿನದೊಳಗೆ ನಾಟಿ ಮಾಡಲು ನೀರು ಕೊಡಿ, ಆಗದಿದ್ದರೆ ಪರಿಹಾರ ಕೊಡಿ ಎಂದು ಹೊಳೆಸಿರೆಗೆರೆ, ಕಮಲಾಪುರ, ಕೆ.ಎನ್. ಹಳ್ಳಿ, ಭಾನುವಳ್ಳಿ, ನಂದಿತಾವರೆ, ಕುಣೆಬೆಳಕೆರೆ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ಮಲೇಬೆನ್ನೂರಿನ ನೀರಾವರಿ ಕಚೇರಿ ಬಳಿ ನಡೆಯಿತು.
ನೀರು ತಲುಪದ ಕಾರಣ ಕೊನೆ ಭಾಗದ ರೈತರು ಇನ್ನೂ ನಾಟಿ ಮಾಡಿಲ್ಲ ಎಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಭದ್ರಾ ಅಧೀಕ್ಷಕ ಇಂಜಿನಿಯರ್ ರವಿಚಂದ್ರನ್ ಅವರು ಇಲ್ಲಿನ ನೀರಾವರಿ ಕಚೇರಿಗೆ ಆಗಮಿಸಿ ರೈತರೊಂದಿಗೆ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಹೊಳೆ ಸಿರಿಗೆರೆಯ ರುದ್ರಪ್ಪ ಅವರು, ಅಕ್ರಮ ಪಂಪ್‌ಸೆಟ್‌ಗಳ ತೆರವಿಗೆ ಹೈಕೋರ್ಟ್ ಆದೇಶವಿದ್ದರೂ ನೀವು ಅವುಗಳ ತೆರವಿಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಅಕ್ರಮ ಪಂಪ್‌ಸೆಟ್‌ಗಳ ತೆರವಿಗೆ ಜಿಲ್ಲಾಧಿಕಾರಿಗಳು ರಚಿಸಿರುವ ಟಾಸ್ಕ್‌ಪೋರ್ಸ್ ತಂಡ ಕೆಲಸ ಮಾಡುತ್ತಿಲ್ಲ. ಹಾಗಾಗಿ ಕೊನೆ ಭಾಗಕ್ಕೆ ನೀರು ಬರುತ್ತಿಲ್ಲ ಎಂದರು.
ರೈತ ಸಂಘದ ಸಿರಿಗೆರೆ ಪಾಲಾಕ್ಷಪ್ಪ ಮಾತನಾಡಿ, ಕೊನೆ ಭಾಗಕ್ಕೆ ನೀರು ಹರಿಸದಿದ್ದರೆ ಸರ್ಕಾರಕ್ಕೆ ಪತ್ರ ಚಳುವಳಿ ನಡೆಸುವುದಾಗಿ ಎಚ್ಚರಿಸಿದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಕಾನೂನು, ಪುಸ್ತಕದಲ್ಲಿ ಇದ್ದರೆ ಸಾಲದು, ಕಾರ್ಯರೂಪಕ್ಕೆ ಬರಬೇಕು. ಅಕ್ರಮ ಪಂಪ್‌ಸೆಟ್ ಗಳ ತೆರವು ಮಾಡಲು ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲಾಡಳಿತಗಳು ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಹರಿಹರ ತಾಲ್ಲೂಕು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಟ್ಟ ಲಿಂಗರಾಜ್ ಮಾತನಾಡಿ, ಭದ್ರಾ ಎಸ್ಇ ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್ ಅವರು 3-4 ದಿನ ಇಲ್ಲಿಯೇ ಇದ್ದು ನೀರಿನ ನಿರ್ವಹಣೆ ಮಾಡಬೇಕೆಂದು ಒತ್ತಾಯಿಸಿದಾಗ ರೈತರೂ ಧ್ವನಿಗೂಡಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್ ಮಾತನಾಡಿ, ಅಚ್ಚುಕಟ್ಟಿನಲ್ಲಿ ಅಡಿಕೆ ತೋಟಗಳು ಹೆಚ್ಚಾಗುತ್ತಿದ್ದು, ಭತ್ತ ನಾಟಿ ಕಡಿಮೆಯಾಗುತ್ತಿದೆ. ಕಡಿಮೆ ಇರುವ ನಾಟಿ ಪ್ರದೇಶಕ್ಕೂ ನೀರು ತಲುಪಿಸದ ಮೇಲಾಧಿಕಾರಿಗಳ ನಿರ್ಲಕ್ಷ್ಯೆ ತನವನ್ನು ಖಂಡಿಸಿದರು.
ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪರೆಡ್ಡಿ ಮಾತನಾಡಿ, ಕೊಮಾರನಹಳ್ಳಿ ಬಳಿ ನಿತ್ಯ 4.8 ಗೇಜ್ ಇರುವಂತೆ ನೋಡಿಕೊಂಡರೆ ಕೊನೆ ಭಾಗಕ್ಕೆ ನೀರು ತಲುಪುತ್ತದೆ ಎಂದು ಇಂಜಿನಿಯರ್‌ಗಳಿಗೆ ತಿಳಿಸಿದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಇನ್ನೂ ನಾಟಿ ಮಾಡದ ಕಾಲುವೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಭದ್ರಾ ಕಾಡಾ ಅಧ್ಯಕ್ಷರು ಕೊನೆ ಭಾಗಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಬೇಕೆಂದರು.
ಹೊಳೆಸಿರಿಗೆರೆ ಗ್ರಾ.ಪಂ. ಅಧ್ಯಕ್ಷ ಪ್ರಭು, ಭಾನುವಳ್ಳಿಯ ಜೆ. ಗುತ್ಯೆಪ್ಪ, ಹೆಚ್.ಕೆ. ನಾರಾಯಣಪ್ಪ, ಕುಣೆಬೆಳಕೆರೆಯ ಭೋವಿ ಅಂಜಿನಪ್ಪ, ನಂದಿತಾವರೆಯ ಟಿ.ಜಿ.ಬಸವರಾಜ್, ಕಮಲಾಪುರದ ಷಣ್ಮುಖಪ್ಪ ಅವರುಗಳು ಮಾತನಾಡಿ, ಮೇಲ್ಭಾಗದಲ್ಲಿ ಎಲ್ಲಾ ಗೇಟುಗಳು ಓಪನ್ ಇರುತ್ತವೆ. ಹಾಗಾಗಿ ನಮಗೆ ನೀರು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲರ ಮಾತುಗಳನ್ನು ಸಮಾಧಾನದಿಂದಲೇ ಆಲಿಸಿದ ಭದ್ರಾ ಎಸ್ಇ ರವಿಚಂದ್ರನ್ ಅವರು ಕೊನೆಯಲ್ಲಿ ಮಾತನಾಡಿ, ಆರ್ಇನಲ್ಲಿ ಮಲೇಬೆನ್ನೂರು ವಿಭಾಗಕ್ಕೆ 700 ಕ್ಯೂಸೆಕ್ಸ್ ನೀರು ಹರಿಸಬೇಕು. ಆದರೆ ನಾವು 900 ಕ್ಯೂಸೆಕ್ಸ್ ನೀರು ಹರಿಸುತ್ತಿದ್ದೇವೆ. ನೀರಿನ ಕೊರತೆ ಇಲ್ಲ. ಅಕ್ರಮ ಪಂಪ್‌ಸೆಟ್ ಗಳಿಂದಾಗಿ ನೀರು ಸಮರ್ಪಕವಾಗಿ ಕೊನೆ ಭಾಗಕ್ಕೆ ಹೋಗುತ್ತಿಲ್ಲ. ನೀರಿನ ಕಳ್ಳತನ ನಿಲ್ಲಿಸದ ಹೊರತು ಕೊನೆ ಭಾಗಕ್ಕೆ ನೀರು ಹರಿಸುವುದು ಕಷ್ಟ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಈ ಬಗ್ಗೆ ಕ್ರಮಕೈಗೊಳ್ಳಲು ಜಿಲ್ಲಾಡಳಿತದ ಸಹಕಾರ ಅಗತ್ಯವಾಗಿದೆ. ಹಾಗಾಗಿ ಈ ದಿನವೇ ದಾವಣಗೆರೆಗೆ ತೆರಳಿ ಡಿಸಿ ಅವರೊಂದಿಗೆ ಚರ್ಚಿಸಿ, ಅಕ್ರಮ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿಸುತ್ತೇವೆ. ಎಫ್‌ಐಆರ್ ಹಾಕಿಸುವ ಬಗ್ಗೆಯೂ ಗಮನಹರಿಸುತ್ತೇವೆ. ಏನಾದರೂ ಮಾಡಿ ಕೊನೆಭಾಗದ ರೈತರು ನಾಟಿ ಮಾಡಲು ನೀರು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಒಂದು ವೇಳೆ ನೀರು ತಲುಪದೇ ರೈತರಿಗೆ ತೊಂದರೆ ಆದರೆ ಆ ಬಗ್ಗೆಯೂ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ರವಿಚಂದ್ರನ್ ರೈತರಿಗೆ ಭರವಸೆ ನೀಡಿದರು.
ಯಲವಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ರಮೇಶ್, ಗಂಗಾಧರ್, ಮಲೆಬೆನ್ನೂರಿನ ಬಿ. ವೀರಯ್ಯ, ಕೆ.ಪಿ. ಗಂಗಾಧರ್, ಪಿ.ಹೆಚ್. ಶಿವಕುಮಾರ್, ನಂದಿತಾವರೆ ಗದಿಗೆಪ್ಪ, ಪ್ರಭಾರ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಎಇಇ ಗಳಾದ ಧನಂಜಯ, ಕೃಷ್ಣಮೂರ್ತಿ, ಎಎಸ್‌ಐ ಶ್ರೀನಿವಾಸ್ ಸೇರಿದಂತೆ ನೂರಾರು ರೈತರು ಈ ವೇಳೆ ಹಾಜರಿದ್ದರು.
ಡಿಸಿ ಕಚೇರಿಗೆ ಭೇಟಿ: ಸಭೆಯ ನಂತರ ನಂದಿಗಾವಿ ಶ್ರೀನಿವಾಸ್, ಚಂದ್ರಶೇಖರ್ ಪೂಜಾರ್, ವೈ. ದ್ಯಾವಪ್ಪ ರೆಡ್ಡಿ, ಭಾನುವಳ್ಳಿ ಗುತ್ತೆಪ್ಪ, ನಾರಾಯಣಪ್ಪ, ಸಿರಿಗೆರೆ ರುದ್ರಪ್ಪ, ಪಾಲಾಕ್ಷಪ್ಪ ಮತ್ತಿತರರು ಭದ್ರಾ ಎಸ್ಇ ರವಿಚಂದ್ರನ್ ಅವರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಎಡಿಸಿ ಲೋಕೇಶ್ ಅವರನ್ನು ಭೇಟಿ ಮಾಡಿ ಅಕ್ರಮ ಪಂಪ್‌ಸೆಟ್‌ಗಳಿಗೆ ಇರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ.
ರೈತರ ಮನವಿಗೆ ಸ್ಪಂದಿಸಿದ ಎಡಿಸಿ ಅವರು ಇವತ್ತು ರಾತ್ರಿಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಬೆಸ್ಕಾಂ ಇಂಜಿನಿಯರ್‌ಗಳಿಗೆ ಸೂಚಿಸಿದರೆಂದು ವೈ. ದ್ಯಾವಪ್ಪ ರೆಡ್ಡಿ ಅವರು `ಜನತಾವಾಣಿ’ಗೆ ತಿಳಿಸಿದರು.