ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ವಿಶ್ರಾಂತ ನ್ಯಾಯಾಧೀಶರಾದ ಎನ್. ಸಂತೋಷ್ ಹೆಗಡೆ ಪ್ರತಿಪಾದನೆ
ಭರಮಸಾಗರ, ಫೆ. 8- ದೇಶ ಅಭಿವೃದ್ಧಿಯಾಗಿದೆಯಾದರೂ, ಅದಕ್ಕಿಂತ ಹೆಚ್ಚಾಗಿ ದುರಾಶೆ ಎಂಬ ರೋಗದ ಅಭಿವೃದ್ಧಿ ಯಾಗಿದೆ. `ತೃಪ್ತಿ-ಮಾನವೀಯತೆ’ ಮೌಲ್ಯ ಗಳನ್ನು ಮೈಗೂಡಿಸಿಕೊಂಡಾಗ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಜಾಸ್ತಿಯಾಗಲು ಸಾಧ್ಯ ವಿದೆ ಎಂದು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಎನ್. ಸಂತೋಷ್ ಹೆಗಡೆ ಹೇಳಿದರು.
ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ 5ನೇ ದಿನದ ಕಾರ್ಯ ಕ್ರಮದಲ್ಲಿ `ನ್ಯಾಯಾಲಯ ಮತ್ತು ಸಮಾಜ’ ವಿಷಯ ಕುರಿತು ಅವರು ಮಾತನಾಡಿದರು.
ದುರಾಶೆಗೆ ಮದ್ದು ತೃಪ್ತಿ ಎಂಬ ಗುಣ. ಇದು ಹಿರಿಯರು ಕಟ್ಟಿಕೊಟ್ಟ ಮಹತ್ವದ ಮೌಲ್ಯ. ಮಕ್ಕಳಲ್ಲಿ ತೃಪ್ತಿ ಮತ್ತು ಮಾನವೀಯತೆಯ ಮೌಲ್ಯಗಳನ್ನು ಬಿತ್ತಬೇಕಾಗಿದೆ ಎಂದರು.
ಶ್ರೀಮಂತಿಕೆ ಮತ್ತು ಅಧಿಕಾರ ಪೂಜಿಸುವ ಸಮಾಜದಲ್ಲಿ ನಾವಿದ್ದೇವೆ. ಪ್ರಾಮಾಣಿಕತೆಗೆ ಬೆಲೆ ಇಲ್ಲವಾಗಿದೆ. ಸಮಾಜದ ಭಾವನೆಗಳು ಬದಲಾಗಬೇಕಾದ ಅಗತ್ಯತೆ ಇದೆ. ಇಲ್ಲವಾದಲ್ಲಿ ರಣರಂಗದಲ್ಲಿ ವಾದ ಮಾಡಬೇಕಾದ ಪರಿಸ್ಥಿತಿ ಬರಬಹುದು ಎಂದು ಹೇಳಿದರು.
ದೇಶದಲ್ಲಿ ಅನೇಕ ಹಗರಣಗಳು ನಡೆದಿವೆ. ದೇಶ ಕಾಯುವ ಯೋಧರಿಗಾಗಿ ಖರೀದಿಸಿದ `ಜೀಪ್’ ಹಗರಣದಲ್ಲಿ 52 ಲಕ್ಷ ರೂ.ಗಳನ್ನು ಲೂಟಿ ಮಾಡಲಾಗಿದೆ. ಅದರಂತೆ ಬೋಪೋರ್ಸ್ ಹಗರಣದಲ್ಲಿ 64 ಕೋಟಿ ರೂ., ಕಾಮನ್‌ವೆಲ್ತ್ ಹಗರಣದಲ್ಲಿ 70 ಸಾವಿರ ಕೋಟಿ ರೂ., 2 ಜಿ ಹಗರಣದಲ್ಲಿ 1 ಲಕ್ಷದ 76 ಸಾವಿರ ಕೋಟಿ ರೂ., ಕೋಲ್ಗೇಟ್ ಹಗರಣದಲ್ಲಿ 1 ಲಕ್ಷದ 86 ಸಾವಿರ ಕೋಟಿ ರೂಗಳನ್ನು ಲೂಟಿ ಮಾಡಲಾಗಿದೆ ಎಂದು ಅಂಕಿ-ಅಂಶಗಳೊಂದಿಗೆ ತಿಳಿಸಿದರು.
ಸಮಾಜದಲ್ಲಿ ಆಟಂಬಾಂಬ್ ಹೇಗೆ ತಯಾರಿಸಬೇಕೆಂಬುದನ್ನು ಕಲಿಸಲಾಗುತ್ತದೆ. ಆದರೆ ಅದನ್ನು ಹೇಗೆ ಬಳಸಬೇಕೆಂದು ಹೇಳಿ ಕೊಡುವುದಿಲ್ಲ. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದಯುತವಾಗಿ ಬಾಳುವುದನ್ನು ಕಲಿಸಿಕೊಡಬೇಕಾದ ಅಗತ್ಯವಿದೆ ಎಂದರು.
ಸದ್ಧರ್ಮ ನ್ಯಾಯಪೀಠದಲ್ಲಿ ರಾಜೀ ಸಂಧಾನಗಳೇ ನಮ್ಮ ಗುರಿ
ಭರಮಸಾಗರ, ಫೆ. 8- ನ್ಯಾಯಾಲಯಗಳಲ್ಲಿ ತೀರ್ಪು ಒಬ್ಬರ ಪರ ಇರುತ್ತದೆ. ಒಬ್ಬರು ಸೋತರೆ, ಮತ್ತೊಬ್ಬರು ಗೆಲ್ಲುತ್ತಾರೆ. ಆದರೆ ನಮ್ಮ ಸದ್ಧರ್ಮ ನ್ಯಾಯಪೀಠದಲ್ಲಿ ಇಬ್ಬರೂ ಗೆಲ್ಲುತ್ತಾರೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕಾನೂನಿಗಿಂತ ಧರ್ಮ ಹೆಚ್ಚು ಮುಖ್ಯವಾದುದು. ನಮ್ಮ ಪೀಠದಲ್ಲಿ ಬಂದಂತಹ ವ್ಯಾಜ್ಯಗಳಲ್ಲಿ ದೂರುದಾರರು ಮತ್ತು ಎದುರುದಾರರು ಇಬ್ಬರ ವಾದ-ವಿವಾದಗಳನ್ನು ಆಲಿಸಿ, ಅದಕ್ಕೆ ಸರಿಯಾದ ತೀರ್ಮಾನ ಕೈಗೊಂಡು ರಾಜೀ ಸಂಧಾನ ಮಾಡುವ ವ್ಯವಸ್ಥೆ ಇದೆ ಎಂದರು.
ನ್ಯಾಯಾಲಯದಲ್ಲಿ ಒಬ್ಬರು ಮಾತ್ರ ಗೆಲುತ್ತಾರೆ. ಒಬ್ಬರು ಸೋಲುತ್ತಾರೆ. ಸೋತ ವ್ಯಕ್ತಿ ಮುಂದಿನ ನ್ಯಾಯಾಯಲದ ಮೊರೆ ಹೋಗುತ್ತಾನೆ ಎಂದು ಹೇಳಿದರು.
ಕಾಣಿಕೆ ವಾಪಾಸ್: ಇಂದಿನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಎಲ್ಲಾ ನ್ಯಾಯಾಧೀಶರುಗಳೂ ಸಹ ತಮಗೆ ಗೌರವಪೂರ್ವಕವಾಗಿ ನೀಡಿದ್ದ ಕಾಣಿಕೆಯನ್ನು ವಾಪಾಸ್ ಮಾಡಿದ್ದು, ಆ ಹಣವನ್ನು ಸಿರಿಗೆರೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು ಎಂದು ಶ್ರೀಗಳು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಮೂಡಿಸುವ ಸಲುವಾಗಿ ನಿನ್ನೆಯವರೆಗೆ 1860 ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರಲ್ಲಿ ಕಾನೂನು, ನ್ಯಾಯಾಲಯಗಳ ಪಾತ್ರದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದೇನೆ ಎಂದರು.
ಹಿರಿಯ ವಕೀಲರಾದ ಅಶೋಕ ಹಾರನಹಳ್ಳಿ ಮಾತನಾಡಿ, ವ್ಯಕ್ತಿಗಳ ಸಮಷ್ಠಿ ಇರುವ ವ್ಯವಸ್ಥೆಗೆ ಸಮಾಜ ಎನ್ನುತ್ತೇವೆ. ಸಮಾಜದ ಪರಿಸ್ಥಿತಿ ಒಳ್ಳೆಯ ಕೆಲಸಗಳಿಗೆ ಪ್ರಚಾರ ಸಿಗುವುದಿಲ್ಲ. ಸಮಾಜದ ಉನ್ನತ ಸ್ಥಾನದಲ್ಲಿರುವವರು ಮಾದರಿಯಾಗಿ ನಡೆದು ಕೊಳ್ಳಬೇಕಾದ ಅಗತ್ಯವಿದೆ. ಕಾರಣಾಂತರಗಳಿಂದ ಉನ್ನತ ಸ್ಥಾನದಲ್ಲಿರುವವರು ನಡವಳಿಕೆಯಲ್ಲಿ ಔನ್ನತ್ಯ ಕಾಣದಿರುವುದು ಸಮಾಜದಲ್ಲಿನ ಅವನತಿಗೆ ಕಾರಣವಾಗಿದೆ ಎಂದರು.
ವ್ಯಕ್ತಿಗೆ ಶಾಸನದ ಭಯ ಇರಬೇಕು. ಸಮಾಜದಲ್ಲಿ ಸರಿಯಾದ ಮಾರ್ಗದಲ್ಲಿ ನಡೆಯುವ ಅವಕಾಶವಿರುತ್ತದೆ. ಸಮಾಜದಲ್ಲಿ ಗೌರವವಿರಬೇಕು ಎಂಬುದು ಸಮಾಜದ ಭಯ. ಆತ್ಮಸಾಕ್ಷಿಗೆ ಉತ್ತರ ಕೊಡಬೇಕಾದದು ಆತ್ಮಸಾಕ್ಷಿ ಭಯ. ತಪ್ಪು-ಸರಿ ವಿವೇಚನಾ ಶಕ್ತಿ ಇದೆ. ಜೀವನದಲ್ಲಿ ತಪ್ಪು-ಸರಿ ಬಗ್ಗೆ ಆಲೋಚನೆ ಮಾಡಿ ಹೆಜ್ಜೆ ಇಡಬೇಕಾಗುತ್ತದೆ ಎಂದು ಹೇಳಿದರು.
ಶಾಸಕಾಂಗ, ಕಾರ್ಯಾಂಗ ಜನಪರ ನಿರ್ಣಯಗಳನ್ನು ತೆಗೆದುಕೊಳ್ಳುವುದಿಲ್ಲವೋ, ಆಗ ಸರ್ಕಾರವನ್ನು ನ್ಯಾಯಾಂಗ ನಿಯಂತ್ರಣ ಮಾಡಿ ಸರಿಯಾದ ನಿರ್ಧಾರವನ್ನು ಕೈಗೊಳ್ಳುತ್ತದೆ. ಜನರನ್ನು ಸೋಮಾರಿಗಳನ್ನು ಮಾಡುವ ಎಲ್ಲಾ ಸರ್ಕಾರಗಳು ಉಚಿತ ಯೋಜನೆಗಳನ್ನು ಜಾರಿ ಮಾಡುತ್ತಿವೆ. ಇದರಿಂದ ಖಜಾನೆ ಖಾಲಿಯಾಗಿ ಸಾರ್ವಜನಿಕ ಅಭಿವೃದ್ಧಿ ಕೆಲಸಗಳ ಹಿನ್ನಡೆಗೆ ಕಾರಣವಾಗಿದೆ ಎಂದರು.
ಬೆಂಗಳೂರಿನ ಜಿಲ್ಲಾ ನ್ಯಾಯಾಧೀಶರಾದ ಹೆಚ್.ಎ. ಮೋಹನ್ ಮಾತನಾಡಿ, ನೀರಾವರಿ ಜನರ ಜೀವನದ ಒಂದು ಭಾಗ. ರಸ್ತೆ, ಮಾರುಕಟ್ಟೆ, ನೀರಾವರಿ ಸೌಲಭ್ಯಗಳು ಪ್ರಮುಖವಾದವು. ಸಿರಿಗೆರೆ ಜಗದ್ಗುರುಗಳು ರೈತರ ಬದುಕು ಹಸನಾಗಲೆಂದು ಕೆರೆಗಳಿಗೆ ನೀರುಣಿಸುವ ಯೋಜನೆಯ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುತ್ತಿರುವುದು ಅತ್ಯಂತ ಮಹತ್ವದ ಕಾರ್ಯ ಎಂದು ಬಣ್ಣಿಸಿದರು.
ನಾನು ಸಹ ನನಗೆ ಜನ್ಮಕೊಟ್ಟ ಹಳ್ಳಿಗೆ ಏನಾದರೂ ಮಾಡಬೇಕೆಂಬ ಇಚ್ಛಾಶಕ್ತಿಯಿಂದಾಗಿ ಸರ್ಕಾರಿ ಅಧಿಕಾರಿಗಳ ಸಹಕಾರದೊಂದಿಗೆ ನನ್ನೂರಿನ ಶಾಲೆಯನ್ನು ಅಭಿವೃದ್ಧಿಪಡಿಸಿ, ರಸ್ತೆ, ಚೆಕ್ ಡ್ಯಾಂ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರೊಂದಿಗೆ ಮಾದರಿ ಗ್ರಾಮವನ್ನಾಗಿ ಮಾಡಿದ ತೃಪ್ತಿ ನನ್ನದಾಗಿದೆ ಎಂದರು.
ನಿವೃತ್ತ ನ್ಯಾಯಮೂರ್ತಿ ಪ್ರಭಾಕರ ಶಾಸ್ತ್ರಿ ಮಾತನಾಡಿ, ಸಮಾಜ ಮತ್ತು ನ್ಯಾಯಾಲಯಕ್ಕೆ ಗಾಢವಾದ ಸಂಬಂಧವಿದೆ. ಮಾನವ ಸಂಘಜೀವಿ. ಅವನು ಏಕಾಂಗಿ ಜೀವನ ನಡೆಸಲು ಇಷ್ಟಪಡುವುದಿಲ್ಲ. ಬೇರೆ ಜನರ ಜೊತೆ ಬೆರೆತು ಜೀವನ ನಡೆಸಲು ಇಷ್ಟಪಟ್ಟಾಗ ಸಮೂಹ ಏರ್ಪಡುತ್ತದೆ. ವಿಚಾರ ವಿನಿಮಯವಾಗಿ, ಅಭಿಪ್ರಾಯ-ಭಿನ್ನಾಭಿಪ್ರಾಯಗಳು ಬರುತ್ತವೆ. ಸಮೂಹ ರೀತಿ, ರಿವಾಜು, ನಿಯಮಗಳು ಇರಲಿ ಎಂದು ಮಾಡಿಕೊಂಡಾಗ ಅದು ಸಮಾಜವಾಗಿ ಮಾರ್ಪಡುತ್ತದೆ ಎಂದು ಹೇಳಿದರು.
ಎಲ್ಲಾ ಸಮಾಜಕ್ಕೂ ಮೂಲಧಾರ ದಯೆ. ಉತ್ತಮ ಜೀವನ ನಡೆಸಿಕೊಡು ಕಲೆಯನ್ನು ಕಲಿಸಿಕೊಡುತ್ತದೆ ಜಾತ್ಯತೀತವಾಗಿ, ಧರ್ಮನಿರಪೇಕ್ಷವಾಗಿರಬೇಕೆಂಬದು ನನ್ನ ಅಪೇಕ್ಷೆ. ಯಾವುದೇ ಧರ್ಮಕ್ಕೂ ದಯೆ ಅವಶ್ಯ ಎಲ್ಲಾ ಧರ್ಮಗಳಿಗೂ ರೀತಿ,ರಿವಾಜು, ನೀತಿ, ನಿಯಮಗಳು ಇರುತ್ತವೆ ಎಂದರು.
ವಿವಿಧ ರೀತಿಗಳ ನ್ಯಾಯಾಲಯ, ವಿವಿಧ ರೀತಿಯ ವ್ಯಾಜ್ಯಗಳಿವೆ. ಪ್ರಾಥಮಿಕ ಹಂತದಿಂದ ಅಂತರರಾಷ್ಟ್ರೀಯ ನ್ಯಾಯಾಲಯಗಳಿವೆ. ಇವೆಲ್ಲವುಗಳಿಗೂ ಮೀರಿ ಮೇಲೊಂದು ನ್ಯಾಯಾಲಯ ಇದೆ. ಸಮಾಜದ ಆರೋಗ್ಯ ಕಾಪಾಡುವಲ್ಲಿ ನ್ಯಾಯಾಲಯಗಳ ಪಾತ್ರ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ನ್ಯಾಯಮೂರ್ತಿಗಳಾದ ಕೃಷ್ಣಾ ಎಸ್. ದೀಕ್ಷಿತ್, ಹಿರಿಯ ವಕೀಲರಾದ ಸಂದೀಪ್ ಪಾಟೀಲ್ ಮಾತನಾಡಿದರು. ಹಿರಿಯ ವಕೀಲರಾದ ಶಶಿಕಾಂತ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಕೆ.ಬಿ. ವಾಣಿ ಗೌಡ, ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶ ಶಂಕರಪ್ಪ, ಅಂಚೇ ಅಧೀಕ್ಷಕಿ ಉಷಾ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಹಿರಿಯ ಜಗದ್ಗುರುಗಳಾದ ಗುರುಶಾಂತ ದೇಶಿಕೇಂದ್ರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ ಭಾವಚಿತ್ರವಿರುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.