ಸ್ಥಳೀಯ ಲೇಖಕರಲ್ಲಿ ನೆಲದ ಗುಣ ದಕ್ಕಿಸಿಕೊಂಡು ಕೃತಿ ಬರೆಯುವ ಶಕ್ತಿಯಿದೆ

ಸ್ಥಳೀಯ ಲೇಖಕರಲ್ಲಿ ನೆಲದ ಗುಣ ದಕ್ಕಿಸಿಕೊಂಡು ಕೃತಿ ಬರೆಯುವ ಶಕ್ತಿಯಿದೆ

11ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಗೋಷ್ಠಿಯಲ್ಲಿ ಡಾ.ಎ.ಬಿ. ರಾಮಚಂದ್ರಪ್ಪ ಅಭಿಮತ

ದಾವಣಗೆರೆ, ಫೆ.1- ಈ ನೆಲದ ಬಹುತ್ವತೆ, ಸೌಹಾರ್ದತೆ ಮತ್ತು ಸಾಮರಸ್ಯವನ್ನು ಅತ್ಯಂತ ಗುಣಾತ್ಮಕವಾಗಿ ದಕ್ಕಿಸಿಕೊಂಡು ಬರೆಯುವ ಶಕ್ತಿಯನ್ನು ಸ್ಥಳೀಯ ಬರಹಗಾರರಲ್ಲಿ ಕಾಣ ಬಹುದು ಎಂದು ಮಾನವ ಬಂಧುತ್ವ ವೇದಿಕೆಯ ಡಾ.ಎ.ಬಿ. ರಾಮಚಂದ್ರಪ್ಪ ತಿಳಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ನಡೆದ 11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಧ್ಯಾಹ್ನ ಜರುಗಿದ ಸಾಹಿತ್ಯ-ಚಿಂತನ-ಮಂಥನ ಗೋಷ್ಠಿಯಲ್ಲಿ `ತಾಲ್ಲೂಕಿನ ಸಾಹಿತ್ಯ ಕ್ಷೇತ್ರದ ಸಾಧಕರು’ ಎಂಬ ವಿಷಯದಡಿ ಮಾತನಾಡಿದರು.

ಸಮೃದ್ಧವಾಗಿ ಸಾಹಿತ್ಯದ ಕೃಷಿ ಆಗುವ ನೆಲದಲ್ಲಿ ಸಾಹಿತ್ಯದ ನೆನಪುಗಳನ್ನು ಉಳಿಸಿಕೊಳ್ಳಬೇಕು. ಈ ದೃಷ್ಟಿಕೋನದಲ್ಲಿ `ಜಿಲ್ಲೆಯ ಸಾಹಿತ್ಯ ಚರಿತ್ರೆ’ ರಚಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಹಲವು ಧರ್ಮ, ಸಂಸ್ಕೃತಿ, ಭಾಷೆ ಹಾಗೂ ಅನೇಕ ಜನಾಂಗ ಇರುವ ದೇಶದಲ್ಲಿ ಬಹುತ್ವವೇ ಸಾಂಸ್ಕೃತಿಕ ಬೇರು ಆಗಿದೆ. ಇವುಗಳಿಗೆ ಜೀವಂತಿಕೆ ನೀಡುವವರೇ ಸ್ಥಳೀಯ ಬರಹಗಾರರು. ಹಾಗಾಗಿ ಸಾಹಿತ್ಯದ ಅಧ್ಯಯನ ಕೆಳಮಟ್ಟದಿಂದ ಮೇಲ್ಮಟ್ಟದ ಕಡೆಗೆ ಅಪ್ರದಕ್ಷಿಣಾಕಾರವಾಗಿ ಇರಬೇಕು ಎಂದು ಸಲಹೆ ನೀಡಿದರು.

ಭೌತಿಕ ಲಾಭ ನೀಡುವ ಪ್ರಭುತ್ವದ ಪರ ನಿಂತು ಬರೆಯುವ ಸಾಹಿತ್ಯ ಒಂದೆಡೆಯಾದರೆ ಅದಕ್ಕೆ ವಿರುದ್ಧವಾಗಿ ಬರೆಯುವ ಸಾಹಿತ್ಯದ ಬಗೆ ಬೇರೆ ಇದ್ದು, ಇಂತಹ 2ನೇ ಹಂತದ ಬರಹಗಾರರ ಸಂಖ್ಯೆ ದಾವಣಗೆರೆ ತಾಲ್ಲೂಕಿನಲ್ಲಿ ಹೆಚ್ಚಾಗಿ ಕಾಣುಸುತ್ತಿಲ್ಲ ಎಂದರು.

ಸಾಹಿತ್ಯದ ಕೃತಿ ಸಾಮಾಜಿಕವಾಗಿ, ಜನ-ಮುಖಿಯಾಗಿ, ಕೃತಿ ಕಟ್ಟಿ ಕೊಡುವ ಮೀಮಾಂಸೆ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಇದೆಯೇ ಎಂಬುದರ ಮೇಲೆ ಕೃತಿಯ ಮೌಲ್ಯ ಅಡಗಿರುತ್ತದೆ. ಈ ಆಲೋಚನೆಯಲ್ಲಿ ಜಿಲ್ಲೆಯ ಸಾಹಿತ್ಯ ವಲಯದಲ್ಲಿನ ಕವಿ, ಸಾಹಿತಿ, ಚಿಂತಕರನ್ನು ಅವಲೋಕಿಸಿದರೆ ಸಾಹಿತ್ಯ ವಿದ್ಯಾರ್ಥಿಗಳ ಗಮನ ಸೆಳೆಯುವ ಬರಹಗಾರರ ಸಂಖ್ಯೆ ಕಡಿಮೆ ಇದೆ ಎಂದರು.

ಸಾಹಿತಿ ಡಾ.ಪಿ.ಎಂ. ಅನುರಾಧ ಅವರು `ಮಕ್ಕಳು ಮತ್ತು ಯುವಕರು ಹಾಗೂ ಮಹಿಳೆಯರ ಮುಂದಿರುವ ಸವಾಲುಗಳು’ ಎಂಬ ವಿಷಯದಡಿ ಮಾತನಾಡಿ, ಪಾಲಕರು ತಮ್ಮ ಕನಸುಗಳ ಗುರಿಯನ್ನು ಮಕ್ಕಳಿಂದ ಈಡೇರಿಸಿಕೊಳ್ಳಲು ಅವರ ಮೇಲೆ ಹೆಚ್ಚಿನ ಒತ್ತಡ ಹೇರುವುದನ್ನು ಬಿಡಬೇಕು ಎಂದು ಹೇಳಿದರು.

ಮಕ್ಕಳ ಆಸಕ್ತಿಯನ್ನು ಅರಿತು ಅವರನ್ನು ಪ್ರೋತ್ಸಾಹಿಸಬೇಕು. ಪಾಲಕರು ಹಾಗೂ ಶಿಕ್ಷಕರು ಮಗುವಿನ ಸರ್ವಾಂಗೀಣ  ಅಭಿವೃದ್ಧಿಗೆ ಪಠ್ಯ ಹಾಗೂ ಪಠ್ಯೇತರ ಶಿಕ್ಷಣ ನೀಡಬೇಕು ಎಂದು ಕಿವಿಮಾತು ಹೇಳಿದರು.

ಯುವ ಸಮೂಹವು ದುಶ್ಚಟಗಳಿಗೆ ದಾಸರಾಗುವ ಜತೆಗೆ ಸಂಸ್ಕಾರ ಹೀನರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜದಲ್ಲಿ ಉತ್ತಮರಾಗಿ ಬದುಕುವಂತೆ ಸಲಹೆ ನೀಡಿದರು.

ಸಹಾಯಕ ಪ್ರಾಧ್ಯಾಪಕ ವೆಂಕಪ್ಪನವರ ಬಸವರಾಜ್‌ `ಕನ್ನಡ ಕಟ್ಟುವಲ್ಲಿ ತಂತ್ರಜ್ಞಾನದ ಪಾತ್ರ’ ಎಂಬ ವಿಷಯದಡಿ ಮಾತನಾಡಿ, ಕನ್ನಡ ಭಾಷೆಯಲ್ಲಿ ವಿಜ್ಞಾನ ಓದಿದರೇ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಪರಿಣಿತಿ ಸಾಧಿಸಬಹುದು. ಆದರೆ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪಠ್ಯಗಳು ಕನ್ನಡ ಭಾಷೆಯಲ್ಲಿ ವಿರಳ ಎಂದು ತಿಳಿಸಿದರು.

ಕನ್ನಡದಲ್ಲಿ ತಂತ್ರಜ್ಞಾನದ ಪಾರಿಭಾಷಿಕ ಪದಗಳ ಕೊರತೆ ಇದೆ. ಸರ್ಕಾರ ಹಾಗೂ ಸಾಹಿತಿಗಳು ಕನ್ನಡಕ್ಕೆ ತಂತ್ರಜ್ಞಾನದ ಪದಕೋಶ ನೀಡಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ತಾಲ್ಲೂಕು ಅಧ್ಯಕ್ಷೆ ಸುಮತಿ ಜಯ್ಯಪ್ಪ, ಹಿರಿಯ ಸಾಹಿತಿ ಡಾ. ಶಶಿಕಲಾ ಕೃಷ್ಣಮೂರ್ತಿ, ಎಲ್‌.ಜಿ. ಮಧುಕುಮಾರ್‌, ಪಾಲಾಕ್ಷಪ್ಪ ಹೆಚ್‌.ಕೆ. ಗೋಪನಾಳ್‌ ಹಾಗೂ ಇತರರು ಇದ್ದರು.

error: Content is protected !!