ಜಲಸಿರಿ ಬಿಲ್ ಅವೈಜ್ಞಾನಿಕ

ಜಲಸಿರಿ ಬಿಲ್ ಅವೈಜ್ಞಾನಿಕ

ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರ ಆಕ್ರೋಶ

ದಾವಣಗೆರೆ, ಜ. 16- ಕೆಲ ಕಾಲ ಮುಂದೂಡಲ್ಪಟ್ಟಿದ್ದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ, ಜಲಸಿರಿ ಯೋಜನೆಯಡಿ ಸಮರ್ಪಕ ಕುಡಿಯುವ ನೀರು ಸರಬರಾಜಾಗದಿದ್ದರೂ, ಅವೈಜ್ಞಾನಿಕವಾಗಿ ನೀರಿನ ಶುಲ್ಕ ವಿಧಿಸುತ್ತಿದ್ದು, ಇದರಿಂದ ಗ್ರಾಹಕರಿಗೆ ಬರ ಸಿಡಿಲು ಬಡಿದಂತಾಗಿದೆ ಎಂದು ಪಾಲಿಕೆ ಸದಸ್ಯ ಕೆ. ಪ್ರಸನ್ನಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್ ಜಲಸಿರಿ ಬಿಲ್ ಪ್ರದರ್ಶಿಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಕೆಲವು ಗಂಟೆಗಳ ಕಾಲ ಮುಂದೂಡಲ್ಪಟ್ಟು ಮತ್ತೆ ನಡೆದ ಸಾಮಾನ್ಯ ಸಭೆ ಮೇಯರ್ ಕೆ. ಚಮನ್‌ಸಾಬ್ ಅಧ್ಯಕ್ಷತೆಯಲ್ಲಿ ನಡೆಯಿತು. 

ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಜಲಸಿರಿ ಯೋಜನೆಯಡಿ ಸಮರ್ಪಕವಾಗಿ ನೀರು ಸರಬರಾಜಾಗದಿರುವ ಬಗ್ಗೆ ಮತ್ತು ಅಧಿಕ ಶುಲ್ಕ ವಿಧಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಲಸಿರಿ ಯೋಜನೆಯ ಅಧಿಕಾರಿಗಳು ಮನ  ಬಂದಂತೆ ಜಲಸಿರಿ ಕಾಮಗಾರಿ ಮಾಡುತ್ತಿದ್ದು, ಇಚ್ಛೆ ಬಂದಂತೆ ಬಿಲ್ ನೀಡುವ ಮೂಲಕ ಜನರ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮೇಯರ್ ಚಮನ್‌ಸಾಬ್ ಮಾತನಾಡಿ, ಜಲಸಿರಿ ಕಾಮಗಾರಿ, ನೀರು ಸರಬರಾಜು ವ್ಯವಸ್ಥೆ, ನೀರಿನ ಬಿಲ್ ನೀಡಿಕೆ ಕೇವಲ ಒಂದೇ ವಾರ್ಡಿನ ಸಮಸ್ಯೆಯಾಗಿಲ್ಲ. ಅದರ ಬಿಸಿ ಎಲ್ಲರಿಗೂ ತಟ್ಟುತ್ತಿದೆ. ಜಲಸಿರಿ ಯೋಜನೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಇಲ್ಲವಾದರೆ ಎಲ್ಲಾ ಸದಸ್ಯರ ಪ್ರತಿರೋಧ ಹಾಗೂ ಪ್ರತಿಭಟನೆಯನ್ನು ಎದುರಿಸಬೇಕಾ ಗುತ್ತದೆ ಎಂದು ಎಚ್ಚರಿಸಿದರು.

ಎಲ್ಲಾ 45 ವಾರ್ಡ್‌ಗಳಿಗೂ ಸಮರ್ಪಕ ವಾಗಿ ಅನುದಾನ ಹಂಚಿಕೆಯಾಗಬೇಕು. ಸರಿಯಾದ ರೀತಿಯಲ್ಲಿ ಅನುದಾನ ಸಿಗುತ್ತಿಲ್ಲ. ಪ್ರತಿ ವಾರ್ಡ್‌ಗೆ ಕನಿಷ್ಠ 50 ಲಕ್ಷ ವನ್ನಾದರೂ ನೀಡಬೇಕೆಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮೇಯರ್ ಚಮನ್‌ಸಾಬ್ ಅವರು, ಎಲ್ಲಿ ಅಗತ್ಯವಿದೆಯೋ ಅಲ್ಲಿ ಅನುದಾನ ನೀಡಿದ್ದೇವೆೆ. ಯಾವುದೇ ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಮಹಾನಗರ ಪಾಲಿಕೆ ಅರವತ್ತು ಕೋಟಿ ರೂ. ಸಾಲ ಹೊಂದಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡೋಣ. ಒಂದಿಷ್ಟು ಏರುಪೇರಾದರೂ ಪಾಲಿಕೆಗೆ ಬಾಗಿಲು ಹಾಕುವ ಪರಿಸ್ಥಿತಿ ಬರುತ್ತದೆ ಎಂದು ಮೇಯರ್ ಹೇಳಿದರು.

ಉಪ ಮೇಯರ್ ಸೋಗಿ ಶಾಂತ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಗಣೇಶ್ ಹುಲ್ಮನಿ, ಆಶಾ ಉಮಾಶಂಕರ್, ವಿಪಕ್ಷ ನಾಯಕ ಆರ್.ಎಲ್. ಶಿವಪ್ರಕಾಶ್, ಕಾಂಗ್ರೆಸ್ ಸದಸ್ಯರಾದ ಅಬ್ದುಲ್ ಲತೀಫ್, ಗಡಿಗುಡಾಳ್ ಮಂಜುನಾಥ್, ಎ. ನಾಗರಾಜ್, ಬಿಜೆಪಿ ಸದಸ್ಯ ವೀರೇಶ್ ಪೈಲ್ವಾನ್, ಆಯುಕ್ತೆ ರೇಣುಕಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!