ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಎಂ. ಕರೆಣ್ಣನವರ್ ಕರೆ
ದಾವಣಗೆರೆ, ಜ.9- ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶಾಲಾ ಹಂತದಲ್ಲೇ ಮಕ್ಕಳಿಗೆ ಉತ್ತಮ ಸಂಸ್ಕಾರದ ಬುನಾದಿ ಹಾಕಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಎಂ. ಕರೆಣ್ಣನವರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಗಾಂಧಿ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳನ್ನು ಸಮಾಜದಲ್ಲಿನ ಉನ್ನತ ಹುದ್ದೆಗಳಾದ ಜಿಲ್ಲಾಧಿಕಾರಿ, ನ್ಯಾಯಾಧೀಶ, ವೈದ್ಯ ಹಾಗೂ ವಿಜ್ಞಾನಿ ಸೇರಿದಂತೆ ಇನ್ನಿತರ ಅಧಿಕಾರಿಗಳನ್ನಾಗಿ ಮಾಡುವ ಶಕ್ತಿ, ಪ್ರತಿಯೊಬ್ಬ ಶಿಕ್ಷಕರಲ್ಲಿ ಇದೆ ಎಂದು ಶಿಕ್ಷಕರನ್ನು ಶ್ಲ್ಯಾಘಿಸಿದರು.
ಶಾಲಾ ಹಂತದಲ್ಲಿ ತಂಬಾಕು ನಿಯಂತ್ರಣ ಸಮಿತಿಯನ್ನು ರಚಿಸಿ ಶಾಲಾ ವ್ಯಾಪ್ತಿಯಲ್ಲಿ ತಂಬಾಕು ಬಳಕೆಯಾಗದಂತೆ ಕ್ರಮ ವಹಿಸಬೇಕು ಮತ್ತು ಮಕ್ಕಳು ಪ್ರೌಢಾವಸ್ಥೆಯಲ್ಲಿ ದಾರಿ ತಪ್ಪದಂತೆ ಶಿಕ್ಷಕರು ರಕ್ಷಿಸಬೇಕು. ಈ ನಿಟ್ಟಿನಲ್ಲಿ ತಂಬಾಕು ಮುಕ್ತ ಯುವ ಪೀಳಿಗೆಯನ್ನಾಗಿಸಬೇಕೆಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ ರಾಘವನ್ ಮಾತನಾಡಿ, 13 ರಿಂದ 15ರ ವಯೋಮಾನದ 293 ಮಕ್ಕಳು ಪ್ರತಿನಿತ್ಯ ತಂಬಾಕು ಸೇವನೆಗೆ ಬಲಿಯಾಗುತ್ತಿದ್ದಾರೆ. ತಂಬಾಕು ಬಳಕೆಗೆ ಬಲಿಯಾಗುವುದನ್ನು ತಪ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದ್ದು, ಜಿಲ್ಲೆಯ ಎಲ್ಲಾ ಶಾಲೆಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸುವುದು ತರಬೇತಿಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎ.ಎಲ್. ಕೃಷ್ಣನಾಯ್ಕ ಮಾತನಾಡಿ, ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಕಣ್ಣಿಗೆ ಕಾಣಿಸಿದ ತಪ್ಪನ್ನು ಕಡೆಗಣಿಸದೇ ಸರಿಪಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಹಾಗಾಗಿ ಎಲ್ಲಾ ಸಿ.ಆರ್.ಪಿ ಗಳು ತಮ್ಮ ಹಂತದಲ್ಲಿರುವ ಎಲ್ಲಾ ಶಾಲೆ ಗಳನ್ನು ಪರಿಶೀಲಿಸಿ, ತಂಬಾಕು ನಿಯಂತ್ರಣ ಕೋಶಕ್ಕೆ ವರದಿ ಸಲ್ಲಿಸಬೇಕೆಂದು ಸೂಚಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪಯೋಜನಾ ಸಮನ್ವಯಾಧಿಕಾರಿ ರವಿ, ದಂತ ವಿಭಾಗದ ಮುಖ್ಯಸ್ಥ ಡಾ.ಪಿ.ಎಂ. ತಿಪ್ಪೇಸ್ವಾಮಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎನ್.ಪಿ. ಮಂಜುಳ, ಸತೀಶ್ ಕಲಹಾಳ್, ಶೈಲಾ ಶಾಮನೂರು ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ದಾವಣಗೆರೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ, ಉತ್ತರ-ದಕ್ಷಿಣ ಹಾಗೂ ಚನ್ನಗಿರಿ ವಲಯದ ಸಿ.ಆರ್.ಪಿ ಗಳಿಗೆ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.