ರಾಜ್ಯಮಟ್ಟದ ಯುವಜನ ಮಹೋತ್ಸವದಲ್ಲಿ ಜನಮನ ಸೆಳೆದ ಕೆವೈಸಿ ಅಭಿಯಾನ

ರಾಜ್ಯಮಟ್ಟದ ಯುವಜನ ಮಹೋತ್ಸವದಲ್ಲಿ ಜನಮನ ಸೆಳೆದ ಕೆವೈಸಿ ಅಭಿಯಾನ

ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪರಿಕಲ್ಪನೆಯಡಿ ಮೂಡಿಬಂದ ಸಂವಿಧಾನದ ಅರಿವಿನ ಕೆವೈಸಿ ಅಭಿಯಾನಕ್ಕೆ ಯುವಜನತೆ ಹಾಗೂ ಸಾರ್ವಜನಿಕರ ಮೆಚ್ಚುಗೆ

ದಾವಣಗೆರೆ, ಜ. 9 –  ನಗರದ ಬಾಪೂಜಿ ಎಂಬಿಎ ಮೈದಾನದಲ್ಲಿ ಕಳೆದ ವಾರ ನಡೆದ ರಾಜ್ಯಮಟ್ಟದ ಯುವಜನ ಮಹೋತ್ಸವದಲ್ಲಿ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪರಿಕಲ್ಪನೆಯಡಿ ಮೂಡಿಬಂದ ಸಂವಿಧಾನದ ಅರಿವಿನ ಕೆವೈಸಿ ಅಭಿಯಾನ ಯುವಜನತೆ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಯುವಜನ ಮಹೋತ್ಸವದಲ್ಲಿ ಸಂವಿಧಾನ ತಿಳಿಯಿರಿ ಅಭಿಯಾನ ವಿಶೇಷ ರೀತಿಯಲ್ಲಿ ಅನಾವರಣಗೊಂಡಿತ್ತು. ಈ ಅಭಿಯಾನಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಚಾಲನೆ ನೀಡಿ ವೀಕ್ಷಿಸಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದರು.

ಅಭಿಯಾನದಲ್ಲಿ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರು ರಚಿಸಿದ ನಮ್ಮ ಸಂವಿಧಾನದ ಬಗ್ಗೆ ಸಮಗ್ರ ಮಾಹಿತಿ ಹಾಗೂ ಸಂವಿಧಾನದ ಪೀಠಿಕೆ ಅದರಲ್ಲೂ ಸ್ಥಳದಲ್ಲೇ ಸಂವಿಧಾನದ ಪೀಠಕೆ ತಯಾರಿಸಿದ್ದು ಎಲ್ಲರ ಗಮನ ಸೆಳೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವತಃ ಸಂವಿಧಾನ ಪೀಠಿಕೆ ತಯಾರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ಸಂವಿಧಾನವು ದೇಶದ ಕಾನೂನುಗಳು, ಆಡಳಿತ ಮತ್ತು ನಾಗರಿಕರ ಹಕ್ಕುಗಳನ್ನು ವ್ಯಾಖ್ಯಾನಿಸುವ  ಅತ್ಯುನ್ನತ ಕಾನೂನು ಚೌಕಟ್ಟಾಗಿದೆ. ಜನವರಿ 26, 1950 ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಭಾರತ ಪ್ರಜಾಪ್ರಭುತ್ವದ ಬೆನ್ನೆಲುಬು ನಮ್ಮ ಸಂವಿಧಾನ. ಸರ್ಕಾರದ ಅಧಿಕಾರಗಳು ಮತ್ತು ರಾಜ್ಯದ ಜವಾಬ್ದಾರಿಗಳನ್ನು ಸಂವಿಧಾನ ವಿವರಿಸುತ್ತದೆ. `ನಾವು ಭಾರತದ ಜನರು’ ಎಂದು ಪ್ರಾರಂಭವಾಗುವ ಪೀಠಿಕೆಯು ರಾಷ್ಟ್ರದ ಮೌಲ್ಯಗಳು ಮತ್ತು ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.

ಇದು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಒತ್ತಿಹೇಳುತ್ತದೆ-ಭಾರತದ ಪ್ರಜಾಸತ್ತಾತ್ಮಕ ಅಡಿಪಾಯವನ್ನು ಎತ್ತಿಹಿಡಿಯುವ, ನ್ಯಾಯಯುತ, ಮುಕ್ತ ಮತ್ತು ಏಕೀಕೃತ ಸಮಾಜವನ್ನು ಖಾತ್ರಿಪಡಿಸುವ ಪ್ರಮುಖ ತತ್ವಗಳಾಗಿವೆ ಎಂದು ಸಂಸದರು ವಿವರಿಸಿದರು.

ಈ ಅಭಿಯಾನ ಮೂಲಕ ವಿದ್ಯಾರ್ಥಿಗಳು ಯುವಜನರು ಹಾಗೂ ಸಾರ್ವಜನಿಕರಲ್ಲಿ ನಮ್ಮ ಸಂವಿಧಾನದ ಸಮಗ್ರ ಮಾಹಿತಿ ತಿಳಿದುಕೊಳ್ಳಲು ಸಹಕಾರಿಯಾಯಿತು.

error: Content is protected !!