ಸಿಎಂಸಿ ಸಭೆ, ಪದಗ್ರಹಣ ಕಾರ್ಯಕ್ರಮದಲ್ಲಿ ಎಸ್.ಎಸ್.ಕೆ. ಸಮಾಜಕ್ಕೆ ಹೊರಟ್ಟಿ ಕರೆ
ದಾವಣಗೆರೆ, ಡಿ.29- ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಎಸ್.ಎಸ್.ಕೆ ಸಮಾಜ ಮುಂದೆ ಬರಬೇಕಿದೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಆಶಯ ವ್ಯಕ್ತಪಡಿಸಿದರು.
ನಗರದ ಬಂಟರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ 2ನೇ ಸಿಎಂಸಿ ಸಭೆ ಮತ್ತು ನೂತನ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ್ ಮೆಹರವಾಡೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಕನಿಷ್ಠ ಡಿಗ್ರಿ ವರೆಗೂ ಓದಲು ಅವಕಾಶ ಕಲ್ಪಿಸ ಬೇಕು. ಸಮಾಜದ ವತಿಯಿಂದ ನಡೆ ಯುವ ಕಾರ್ಯಕ್ರಮಗಳಿಗೆ ಅವರನ್ನೂ ಕರೆ ತರಬೇಕು. ಆಗ ಸಮಾಜದೊಂದಿಗೆ ಅವರಿಗೆ ನಂಟು ಬೆಳೆಯಲಿದೆ ಎಂದು ಹೇಳಿದರು.
ಸಂಘಟನೆ ಇದ್ದಲ್ಲಿ ಸಮಸ್ಯೆಗಳು ಇರುವುದಿಲ್ಲ. ಹಾಗಾಗಿ ಎಸ್.ಎಸ್.ಕೆ ಸಮಾಜವು ಸಂಘಟನೆಯಲ್ಲಿ ಸದೃಢವಾಗುವ ಜತೆಗೆ, ಈ ಜನಾಂಗದಲ್ಲಿನ ನ್ಯೂನತೆಗಳು, ಹಾಗೂ ಸಮಸ್ಯೆಗಳನ್ನು ಸಂಘಟನೆಯ ಶಕ್ತಿ ಯಿಂದ ಪರಿಹರಿಸಿ ಕೊಳ್ಳಬಹುದು ಎಂದರು.
ಹುಬ್ಬಳ್ಳಿಯಲ್ಲಿ ಎಸ್.ಎಸ್.ಕೆ ಸಮಾಜದ ಜನ ಸಂಖ್ಯೆ ಅಧಿಕವಾಗಿದ್ದು, ಈ ಹಿಂದೆ ಹುಬ್ಬಳ್ಳಿಯಲ್ಲಿ ಗಲಭೆ ನಡೆದಾಗ ಇವರೇ ಸೈನಿಕರ ಹಾಗೆ ಹುಬ್ಬಳ್ಳಿಯನ್ನು ರಕ್ಷಿಸಿದ್ದಾರೆ ಎಂದು ತಿಳಿಸಿದರು.
ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, ರಾಷ್ಟ್ರೀಯತೆ ಹಾಗೂ ಹಿಂದುತ್ವದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ ಎಸ್.ಎಸ್.ಕೆ ಸಮಾಜ ಬಾಂಧವರು, ಶಿಕ್ಷಣವಂತರಾಗುವ ಜತೆಗೆ ಮುಂದಿನ ದಿನಗಳಲ್ಲಿ ಉನ್ನತ ದರ್ಜೆಯ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಎಸ್.ಎಸ್.ಕೆ ಸಮುದಾಯಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಹಾಗಾಗಿ ಇವರ ಯಾವುದೇ ಕೆಲಸಗಳಿರಲಿ ಅವುಗಳಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹಿಂಸೆ, ಭ್ರಷ್ಟಾಚಾರ ತಾಂಡವ
ದಾವಣಗೆರೆ, ಡಿ.29-ಕಲಬುರ್ಗಿಯಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸರ್ಕಾರದ ವಿರುದ್ಧ ಸಂಸದ ಜಗದೀಶ್ ಶೆಟ್ಟರ್ ಆಕ್ರೋಶ ಹೊರಹಾಕಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರ ಪಿಎ ಒತ್ತಡದಿಂದ ಆತ್ಮಹತ್ಯೆಗೆ ತುತ್ತಾದ ವ್ಯಕ್ತಿ, ಡೆತ್ ನೋಟ್ನಲ್ಲಿ `ಪ್ರಿಯಾಂಕ್ ಖರ್ಗೆ ಆಪ್ತನಿಂದ ಅನೇಕರಿಗೆ ಒತ್ತಡ ಇದೆ’ ಎಂದು ಬರೆದಿಟ್ಟಿದ್ದರೂ, ಅವರ ಮೇಲೆ ಎಫ್ಐಆರ್ ಮಾಡಿಲ್ಲ, ನಾವೆಲ್ಲಾ ಹೋರಾಟ ಮಾಡಿದೆವು, ಕೋರ್ಟ್ ನಿಂದ ಡೈರೆಕ್ಷನ್ ಬಂದ ಮೇಲೆ ಎಫ್ಐಆರ್ ಮಾಡಿದ್ದಾರೆ ಎಂದು ತಿಳಿಸಿದರು.
ಮೊನ್ನೆ ಬೆಳಗಾವಿಯಲ್ಲಿ ಹೆಬ್ಬಾಳ್ಕರ್ ಪಿಎ ಕಿರುಕುಳದಿಂದ ಎಸ್ಡಿಎ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿಕ್ಷೆಗೆ ಒಳಗಾಗಬೇಕಿದ್ದ ಅವರ ಪಿಎ ಬೇಲ್ ಪಡೆದು ಆಚೆ ಓಡಾಡುತಿದ್ದಾನೆ ಎಂದು ದೂರಿದರು. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟು, ಅರಾಜಕಥೆ ಉಂಟಾಗಿದೆ. ಸರ್ಕಾರದಲ್ಲಿ ಹಿಂಸೆ-ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಿಎಂ ಸಿದ್ದರಾಮಯ್ಯನವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಕಿಡಿಕಾರಿದರು.
ಸದನದ ಘಟನೆ; ದೂರು ಪರಿಶೀಲಿಸಿ ಕ್ರಮ: ಹೊರಟ್ಟಿ
ಬೆಳಗಾವಿಯ ಸದನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಏಳು ಪುಟಗಳ ದೂರು ನೀಡಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಅವರೂ ದೂರು ನೀಡುವುದಾಗಿ ಖಚಿತಪಡಿಸಿದ್ದಾರೆ. ಇಬ್ಬರ ದೂರು ಪರಿಶೀಲಿಸಿ, ಸದನದ ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.19ರಂದು ಸದನದಲ್ಲಿ ನಡೆದ ಬೆಳವಣಿಗೆಯನ್ನು ಗಮನಿಸಿದ್ದೇನೆ ಮತ್ತು ಪರಿಶೀಲಿಸಿದ್ದೇನೆ. ಇದನ್ನು ಬೆಳೆಸುವುದರಲ್ಲಿ ಅರ್ಥವಿಲ್ಲ. ಇದು ಇಲ್ಲಿಗೆ ಮುಗಿಯಲಿ ಎಂಬುದು ನನ್ನ ಅಪೇಕ್ಷೆ ಎಂದು ಹೇಳಿದರು.
ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ, ಸಮಾಜದ ಕಲ್ಯಾಣ ಮಂಟಪ ನಿರ್ಮಾಣಕ್ಕೆ 1ಕೋಟಿ ಅನುದಾನ ಮತ್ತು ಸಹಸ್ರಾರ್ಜುನ ಅಧ್ಯಯನ ಪೀಠಕ್ಕೆ 25 ಲಕ್ಷ ರೂ. ತೆಗೆದಿಟ್ಟಿದ್ದರು. ಈ ನಿಟ್ಟಿನಲ್ಲಿ ಸಮಾಜಕ್ಕೆ ಅನುಕೂಲ ಮಾಡಿದ್ದಾರೆ. ಇಂತವರನ್ನು ಸ್ಮರಿಸುವ, ಅಭಿನಂದಿಸುವ ಕಾರ್ಯವಾಗಬೇಕು ಎಂದರು.
ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ ಮಾತನಾಡಿ, ಪ್ರಾಮಾಣಿಕವಾಗಿ ದುಡಿದು ತಿನ್ನುವ ಸಮಾಜ ಇದಾಗಿದೆ. ಸಮುದಾಯದ ಅಭಿವೃದ್ಧಿಗೆ ಉತ್ತಮ ದೂರ ದೃಷ್ಟಿ ಹೊಂದಿದ ಡಾ. ಶಶಿಕುಮಾರ್ ಅವರ ನಾಯಕತ್ವದಲ್ಲಿ ಎಸ್.ಎಸ್.ಕೆ ಸಮಾಜ ಪ್ರಗತಿ ಆಗಲಿ ಎಂದು ಆಶಿಸಿದರು.
ಎಸ್.ಎಸ್.ಕೆ ಸಮಾಜದ ನೂತನ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ್ ಪ್ರಾಸ್ತಾವಿಕ ಮಾತನಾಡಿ, ನಮ್ಮ ಸಮುದಾಯದಲ್ಲಿ ಶೇ.80ರಷ್ಟು ಜನ ದುಡಿದು ತಿನ್ನುವವರು ಇದ್ದಾರೆ. ಇವರೆಲ್ಲರನ್ನೂ ಆರ್ಥಿಕವಾಗಿ ಮುಂದೆ ತರುವ ನಿಟ್ಟಿನಲ್ಲಿ ವಿಚಾರ ಸಂಕಿರಣ ನಡೆಯಲಿದೆ ಎಂದರು.
ನಮ್ಮ ಗುರುಪೀಠದ ಸ್ಥಾಪನೆ, ಸಮಾಜದ ಬಡ ವರ್ಗದವರಿಗಾಗಿ ನಿಗಮ ಮಂಡಳಿ ಸ್ಥಾಪನೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ನಮ್ಮ ಸಮುದಾಯಕ್ಕೆ ಅವಕಾಶ ಸಿಗುವುದು ಸೇರಿ ಅನೇಕ ಬೇಡಿಕೆಗಳನ್ನು ಚರ್ಚಿಸಿ, ಕೆಲವು ನಿರ್ಣಯಗಳನ್ನು ತೀರ್ಮಾನಿಸಲಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ರಾಜ್ಯಾಧ್ಯಕ್ಷ ಅಶೋಕ ಕಾಟ್ವೆ, ಮಲ್ಲರಸಾ ಆರ್. ಕಾಟ್ವೆ, ರಾಜ್ಯಸಭಾ ಸದಸ್ಯ ನಾರಾಯಣಸಾ ಕೆ. ಭಾಂಡಗೆ, ಶಾಸಕರಾದ ಬಿ.ಪಿ ಹರೀಶ್, ಮಹೇಶ್ ಟೆಂಗಿನಕಾಯಿ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಬಿಜಿಪಿ ಮಾಜಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಸತೀಶ್ ಜಿ. ಮೇಹರವಾಡೆ, ಟಿ.ಎಂ.ಮೇಹರವಾಡೆ ಮತ್ತು ಸಮಾಜ ಮುಖಂಡರು ಇದ್ದರು.