ಶೋಷಿತರು, ಬಡವರು ಮೌಢ್ಯ ವಿರೋಧಿಸಲು ಎ.ಬಿ. ರಾಮಚಂದ್ರಪ್ಪ ಕರೆ

ಶೋಷಿತರು, ಬಡವರು ಮೌಢ್ಯ ವಿರೋಧಿಸಲು ಎ.ಬಿ. ರಾಮಚಂದ್ರಪ್ಪ ಕರೆ

ಹರಿಹರ, ಡಿ.6- ಶೋಷಿತ ಸಮುದಾಯ ಮತ್ತು ಬಡವರು ಒಂದುಗೂಡಿ ಮೌಢ್ಯ ವಿರೋಧಿಸಿದಾಗ, ಮೌಢ್ಯದಿಂದ ಮತ್ತು ದೌರ್ಜನ್ಯದಿಂದ ಮುಕ್ತವಾಗಲಿಕ್ಕೆ ಸಾಧ್ಯವಾಗುತ್ತದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ನಗರದ ಕೈಲಾಸ ನಗರದ ಹಿಂದೂ ರುದ್ರಭೂಮಿ ಆವರಣದಲ್ಲಿ ಮಾನವ ಬಂಧುತ್ವ ವೇದಿಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ  ಬಿ.ಆರ್. ಅಂಬೇಡ್ಕರ್  ರವರ 68 ನೇ ಮಹಾಪರಿನಿಬಾಣ ದಿನ ಆಚರಣೆ ಪ್ರಯುಕ್ತ ನಡೆದ ಮೌಢ್ಯ ವಿರೋಧಿ ಪರಿವರ್ತನಾ ಆಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ದೇಶದ ಜನತೆ ನಾನು ಶ್ರೇಷ್ಠ ಮತ್ತು ನಾನು ಕನಿಷ್ಠ ಎಂಬ ಭಾವನೆಯಿಂದ ಹೊರಗಡೆ ಬಂದು ಮೌಢ್ಯ ಧಿಕ್ಕರಿಸಿ ನಡೆದಾಗ ತಮ್ಮ ಬದಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. 

ಶೋಷಿತ ವರ್ಗದವರಿಗೆ ಅರಿವು, ಅಕ್ಷರ, ಅನ್ನ, ವಿವೇಕ ಸಿಗುವುದಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ದೂರ ದೃಷ್ಟಿಯ ಚಿಂತನೆಗಳೇ ಕಾರಣವಾಗಿದೆ. ದಲಿತ ಹೆಣ್ಣು ಮಕ್ಕಳ ಮೇಲೆ ವ್ಯಭಿಚಾರ ಹೆಚ್ಚು ಆಗಲಿಕ್ಕೆ ವೈದಿಕ ಸನಾತನ ಧರ್ಮ ಕಾರಣವಾಗಿದೆ ಎಂದು ಅವರು ಹೇಳಿದರು. 

ಜಗತ್ತಿನಲ್ಲಿ ಎಲ್ಲಾ ಸಮುದಾಯದ ಜನರು ಸಮಾನವಾಗಿ ಕಂಡಂತ ಏಕೈಕ ಸಂವಿಧಾನ, ಭಾರತದ ಸಂವಿಧಾನವಾಗಿದೆ. ಹುಟ್ಟಿನಿಂದ, ಬಣ್ಣ, ಭಾಷೆಯಿಂದ ಯಾರು ಶ್ರೇಷ್ಠರಲ್ಲ ಮತ್ತು ಯಾರು ಕನಿಷ್ಠರಲ್ಲ ಎಲ್ಲರೂ ಸಮಾನರು ಎಂಬ ಸಿದ್ದಾಂತ ಹೇಳಿದ ಕಾರಣಕ್ಕಾಗಿ ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಜೀವಂತವಾಗಿ ಉಳಿದಿದೆ. ಭಾರತದ ಸ್ವಾತಂತ್ರ ಪೂರ್ವದಲ್ಲಿ ಹಿಂದೂ ರಾಷ್ಟ್ರವಾಗಿತ್ತು ಎಂದು ಸುಳ್ಳು ಬಿತ್ತುವ ಕೆಲಸವಾಗಿತ್ತು. ಇದರಿಂದಾಗಿ ಹಿಂದೆ, ಹಿಂದೂ ರಾಷ್ಟ್ರ ಮಾಡುವ ಹೋರಾಟದ ಕಾರಣಕ್ಕಾಗಿ ನಾವು ಭಾರತದ ಒಂದು ಭಾಗವನ್ನು ಕಳೆದುಕೊಳ್ಳುವಂತಾಗಿ ಪಾಕಿಸ್ತಾನ ವಿಭಜನೆ ಹೊಂದಿದೆ ಎಂದರು. 

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಇಲ್ಲಿನ ರುದ್ರಭೂಮಿ 2 ಎಕರೆ ವಿಸ್ತೀರ್ಣವನ್ನು ಹೊಂದಿರುವುದರಿಂದ ಬಹಳಷ್ಟು ಚಿಕ್ಕದಾಗಿ ಇದ್ದು,  5 ಎಕರೆ 24 ಗುಂಟೆ ಜಮೀನಿನಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಹೊಸದಾಗಿ ಹಿಂಧೂ ರುದ್ರಭೂಮಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ,  ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಾಧನೆಯನ್ನು‌ ಮುಂದೆ ಇಟ್ಕೊಂಡು, ನಾವು ಸಮಾಜದಲ್ಲಿ ಉತ್ತಮ ಕೆಲಸವನ್ನು ಮಾಡಿದಾಗ ಅಂಬೇಡ್ಕರ್ ರವರೆಗೆ ಸಲ್ಲಿಸುವ ಗೌರವ ಆಗುತ್ತದೆ ಎಂದು ಹೇಳಿದರು.

ಹೆಗ್ಗೆರೆ ರಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ,  ಕೋಮುವಾದಿ ಶಕ್ತಿಗಳು ಮೌಢ್ಯವನ್ನು ಬಲಪಡಿಸಲು ಮುಂದಾಗಿದ್ದು, ಅವುಗಳನ್ನು ವಿರೋಧಿಸುವಂತ ಕೆಲಸವನ್ನು ದಲಿತ ಸಂಘರ್ಷ ಸಮಿತಿ ಮಾಡಲಿಕ್ಕೆ ಮುಂದಾಗಿದೆ ಎಂದರು. 

ಅಂಜುಮಾನ್ ಇಸ್ಲಾಮಿಯಾ ಸಮಿತಿ ಅಧ್ಯಕ್ಷ ಏಜಾಜ್ ಆಹ್ಮದ್ ಮಾತನಾಡಿ,  ಅಂಬೇಡ್ಕರ್  ಅವರ ಕೊಡುಗೆ ಒಂದು ಸಮಾಜಕ್ಕೆ ಸೀಮಿತವಾಗದೆ ಎಲ್ಲಾ ವರ್ಗದವರಿಗೆ ಅಪಾರವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮುಖಂಡ  ಎಂ.ಬಿ. ಅಣ್ಣಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೈಚಾರಿಕತೆ ಪದದ ಅರ್ಥವನ್ನು ಕಳೆದುಕೊಂಡ ಸ್ಥಿತಿಯನ್ನು ಕಾಣುತ್ತಿದ್ದೇವೆ. ಇದರಿಂದಾಗಿ ದಲಿತ ಯುವಕರು ವೈಜ್ಞಾನಿಕ ತಳಹದಿಯಲ್ಲಿ ಜ್ಞಾನ ಬೆಳೆಸಿಕೊಳ್ಳವಂತಾಗಬೇಕು ಎಂದರು.

ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎ.ಕೆ. ಭೂಮೇಶ್ ಮಾತನಾಡಿ, ಶೋಷಿತ ವರ್ಗದವರು ರಾಜಕೀಯ ಅಧಿಕಾರ ಪ್ರಾತಿನಿಧ್ಯವನ್ನು ಎಲ್ಲಾ ಕಡೆಗಳಲ್ಲಿ ಪಡೆದಾಗ ಮಾತ್ರ ದಲಿತರಿಗೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ಹೇಳಿದರು.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಕೆ.ಬಿ. ಮಂಜುನಾಥ್ ಅವರು, ಇಂತಹ ಸಮಾರಂಭವನ್ನು ರುದ್ರಭೂಮಿಯಲ್ಲಿ ಮಾಡುವುದರಿಂದ ರುದ್ರಭೂಮಿ ಸ್ವಚ್ಛತೆ ಮತ್ತು ಇಲ್ಲಿ ಕಾರ್ಯಕ್ರಮ ಮಾಡಬಹುದು ಎಂದು ಜನರಿಗೆ ಅರಿವು ಮೂಡಿಸಿದಂತೆ ಆಗುತ್ತದೆ ಮತ್ತು ರುದ್ರಭೂಮಿಯಲ್ಲಿ ಯಾವುದೇ ದೇವರ ದೇವಸ್ಥಾನ ನಿರ್ಮಾಣಕ್ಕೆ ರಾಜಕೀಯ ಮುಖಂಡರು ಮತ್ತು ಸಮುದಾಯದ ಮುಖಂಡರು ಮುಂದಾಗುವಂತೆ ಹೇಳಿದರು.

ಈ ಸಂದರ್ಭದಲ್ಲಿ ಡಿ.ಎಸ್.ಎಸ್ ಸಂಘದ ಮುಖಂಡ ಮಂಜುನಾಥ್ ರಾಜನಹಳ್ಳಿ, ಡಿ.ಎಸ್.ಎಸ್. ಸಂಘದ ಜಿಲ್ಲಾ ಅಧ್ಯಕ್ಷ ಕೊಪ್ಪಳ ಮಂಜುನಾಥ್, ಕಾರ್ಯದರ್ಶಿ ಸಂತೋಷ ನೋಟದರ್, ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಪಾರ್ವತಮ್ಮ, ಕೃಷ್ಣ, ಧನರಾಜ್, ಮಂಜು ನಾಥ್ ವಕೀಲ ಉಕ್ಕಡಗಾತ್ರಿ ಇತರರು ಹಾಜರಿದ್ದರು.

ಹೆಗ್ಗೆರೆ ರಂಗಪ್ಪ, ಲೋಕಿಕೆರೆ ಅಂಜಿನಪ್ಪ ಜಾಗೃತಿ ಗೀತೆ ಹಾಡಿದರು. ಮಂಜುನಾಥ್ ರಾಜನಹಳ್ಳಿ ಸ್ವಾಗತಿಸಿದರು. ಮಂಜುನಾಥ್ ಉಕ್ಕಡಗಾತ್ರಿ ನಿರೂಪಿಸಿದರು.

error: Content is protected !!