ಹೊನ್ನಾಳಿ, ನ. 28 – ಹೊನ್ನಾಳಿ ಪುರಸಭೆ ಹಳೆಯ ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು ಮೂಲ ಸೌಲಭ್ಯಗಳನ್ನು ಒಳಗೊಂಡ ವ್ಯವಸ್ಥಿತ ಹೊನ್ನಾಳಿ ಪುರಸಭೆಯ ಹೊಸ ಕಟ್ಟಡಕ್ಕೆ 7 ಕೋಟಿ 50 ಲಕ್ಷಗಳ ಅನುದಾನವನ್ನು ಶಾಸಕ ಶಾಂತನಗೌಡರು ಬಿಡುಗಡೆಗೊಳಿಸುವ ಭರವಸೆ ನೀಡಿರುವುದಾಗಿ ಪುರಸಭೆ ಅಧ್ಯಕ್ಷ ಎ.ಕೆ. ಮೈಲಪ್ಪ ತಿಳಿಸಿದ್ದಾರೆ.
ಅವರು ಗುರುವಾರ ಹೊನ್ನಾಳಿ ಸಾರ್ವಜನಿಕರೊಂದಿಗೆ ಆಯವ್ಯಯ ಪೂರ್ವಭಾವಿ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ವಿವಿಧ ವಾರ್ಡ್‌ಗಳ ಸಾರ್ವಜನಿಕರು ತಮ್ಮ ವಾರ್ಡ್‌ಗಳ ಕುಡಿಯುವ ನೀರು, ಚರಂಡಿ, ರಸ್ತೆ, ಸ್ವಚ್ಛತೆ, ಅಂಗನವಾಡಿ, ಪಾರ್ಕ್, ಫುಡ್ ಫೋರ್ಟ್ ಸೇರಿದಂತೆ ಅನೇಕ ಸೌಲಭ್ಯಗಳ ಬಗ್ಗೆ ಸಭೆ ಹಾಗೂ ಅಧ್ಯಕ್ಷರ ಗಮನಕ್ಕೆ ತಂದರು, ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಹೊನ್ನಾಳಿಯ ಎಲ್ಲಾ ವಾರ್ಡ್‌ಗಳ ರಸ್ತೆ ಸೇರಿದಂತೆ ಮೂಲ ಸೌಲಭ್ಯಗಳಿಗಾಗಿ ಶಾಸಕರು 20 ಕೋಟಿ ರೂ. ಗಳನ್ನು ಬಿಡುಗಡೆ ಗೊಳಿಸುವುದಾಗಿ ತಿಳಿಸಿದ್ದು ಅನೇಕ ಸಾರ್ವಜನಿಕರ ಪ್ರಶ್ನೆಗಳಿಗೆ ಪರಿಹಾರ ಕಂಡು ಕೊಳ್ಳಬಹುದಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಮಾತನಾಡಿ, ಸರ್ಕಾರದಿಂದ ಒಂದನೆ ವಾರ್ಡ್‌ಗೆ ಅಂಗನವಾಡಿ ಮಂಜೂರಾಗಿದ್ದು. ಮೂರು ಅಂಗನ ವಾಡಿಗಳನ್ನು ಶಾಲಾ ಕೊಠಡಿಯಲ್ಲೇ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ. ಪಟ್ಟಣದಿಂದ ಒಟ್ಟು 12 ಅಂಗನವಾಡಿಗಳ ಬೇಡಿಕೆ ಇದ್ದು ನಿವೇಶನಗಳ ಕೊರತೆಯಿದೆ. ಪಟ್ಟಣದ ಸ್ವಚ್ಛತೆಗೆ ಕೆಲಸಗಾರರು ಹಾಗೂ ಟ್ರ್ಯಾಕ್ಟರ್‌ಗಳ ಕೊರತೆ ಇದ್ದು ಒಂದು ತಿಂಗಳ ಅಂತರದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದೆಂದರು.
ಸಿಎ ಸೈಟ್ ನಲ್ಲಿ ಇಂದಿರಾ ಕ್ಯಾಂಟೀನ್ ಗೆ ಆದ್ಯತೆ ನೀಡಲಾಗು ವುದು, ಫುಡ್ ಫೋರ್ಟ್ ಹಾಗೂ ಪಾರ್ಕ್ ಗೆ ಆದ್ಯತೆ ನೀಡುವುದರೊಂದಿಗೆ ನಾಯಿ ಹಿಡಿಯಲು ರೀ ಟೆಂಡರ್ ಕರೆಯಲಾಗುವುದು ಎಂದರು.
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಸದಸ್ಯರಾದ ರಾಜೇಂದ್ರಪ್ಪ, ಬಾವಿಮನಿ ರಾಜಣ್ಣ, ಇಂಜಿನಿಯರ್ ದೇವರಾಜ್, ರಾಜು ಕಡಗಣ್ಣಾರ್, ಕತ್ತಿಗಿ ನಾಗರಾಜ್, ಕರವೇ ಮಂಜು, ಎ.ಡಿ. ಈಶ್ವರಪ್ಪ, ಕೆ.ಒ. ಹನುಮಂತಪ್ಪ, ವಿಜೇಂದ್ರಪ್ಪ ಮಹೇಶ್ ಹುಡೇದ್ ಇನ್ನಿತರರಿದ್ದರು.