ಜೀವನಶೈಲಿ ಬದಲಾಯಿಸಿ, ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಿಸಬೇಕು

ಜೀವನಶೈಲಿ ಬದಲಾಯಿಸಿ, ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಿಸಬೇಕು

108-ಆಂಬುಲೆನ್ಸ್ ಸೇವೆ

ಲೋಕಿಕೆರೆ ಆಸ್ಪತ್ರೆಗೆ 108-ತುರ್ತು ಚಿಕಿತ್ಸಾ ವಾಹನ ಒದಗಿಸಲು ಮತ್ತು ರಾತ್ರಿ ಪಾಳಿ ವೈದ್ಯರನ್ನು ನೇಮಿಸಲು ಮುಖಂಡ ಲೋಕಿಕೆರೆ ಪುರಂದರ ಮನವಿ ಮಾಡಿದರು.

ಮಾಯಕೊಂಡಕ್ಕೆ ಸಿಹೆಚ್‌ಸಿ 

ಸಮುದಾಯ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು, ವೈದ್ಯರ ಕೊರತೆ ನೀಗಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಲತಾ, ಸದಸ್ಯರಾದ ಲಕ್ಷ್ಮಣ, ಪುಷ್ಪಲತಾ, ಸುನೀತಾ, ಮುಖಂಡರಾದ ಗುರುನಾಥ, ಪ್ರತಾಪ್ ಮತ್ತಿತರರು ಸಚಿವರಿಗೆ ಮನವಿ ಸಲ್ಲಿಸಿದರು.

ರಾಮಗೊಂಡನಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್

ಮಾಯಕೊಂಡ, ನ.20-  ಜೀವನಶೈಲಿ ಬದಲಾಯಿಸಿಕೊಂಡು, ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಿಸಲು ಮುಂದಾಗಬೇಕು ಎಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಆರ್. ಗುಂಡೂರಾವ್ ಕರೆ ನೀಡಿದರು.

ಇಲ್ಲಿಗೆ ಸಮೀಪದ ರಾಮಗೊಂಡನಹಳ್ಳಿಯಲ್ಲಿ ಇಂದು ಏರ್ಪಾಡಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನ ಆರೋಗ್ಯದತ್ತ ಗಮನಹರಿಸಬೇಕು. ಸಾಂಕ್ರಾಮಿಕ ರೋಗ ಈಚೆಗೆ ಕಡಿಮೆಯಾಗಿವೆ. ರಕ್ತದೊತ್ತಡ ಮತ್ತು ಮಧುಮೇಹ ಹೆಚ್ಚಾಗಿವೆ. ಆಹಾರ ಪದ್ದತಿ, ಜೀವನಶೈಲಿ ಬದಲಾಯಿಸಿಕೊಂಡು ನಿಯಂತ್ರಿಸಬೇಕು. ಬಿ.ಪಿ., ಶುಗರ್ ನಿಯಂತ್ರಿಸದಿದ್ದರೆ ಮುಂದೆ ಎಲ್ಲಾ ಕಾಯಿಲೆಗಳು ಬರುತ್ತವೆ. ಬಿ.ಪಿ., ಶುಗರ್ ಬಾಧಿತರಿಗೆ ಔಷಧಿ ಮನೆಬಾಗಿಲಿಗೆ ತಲುಪಿಸಲು ಯೋಜನೆ ಆರಂಭಿಸಲಾಗಿದೆ. ಮಧುಮೇಹ ನಿಯಂತ್ರಣದಿಂದ  ಶೇ.50ರಷ್ಟು ಕಾಯಿಲೆ ನಿಯಂತ್ರಿಸಬಹುದು. ಐದು ಸಾವಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಲಾರ್ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಆಸ್ಪತ್ರೆ ಕಟ್ಟಡ ಚನ್ನಾಗಿದ್ದು, ಸಿಬ್ಬಂದಿ ಸರಿಯಾಗಿ ಕೆಲಸ ಮಾಡದಿದ್ದರೆ ಪ್ರಯೋಜನವಿಲ್ಲ. ವೈದ್ಯಕೀಯ ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಿ, ಜನರಿಗೆ ಸೇವೆ ಮುಟ್ಟಿಸಲು ಶ್ರಮಿಸಬೇಕು. ಅವರಲ್ಲಿ ಆಸಕ್ತಿ ಕಡಿಮೆಯಾದರೆ ಸರ್ಕಾರದ ಯೋಜನೆ ಜನರಿಗೆ ತಲುಪುವುದಿಲ್ಲ. ವೇತನ ತಾರತಮ್ಯ ಮತ್ತು ವ್ಯವಸ್ಥೆ ಸರಿಪಡಿಸುವುದು, ಉನ್ನತ ಚಿಕಿತ್ಸೆ ದೊರಕಿಸುವ ಕೆಲಸ ಬಾಕಿಯಿದೆ. ಶೀಘ್ರವೇ ಅವನ್ನು ಬಗೆಹರಿಸುತ್ತೇವೆ. ಮಾಯಕೊಂಡಕ್ಕೆ ಶೀಘ್ರ ಸಮುದಾಯ ಆರೋಗ್ಯ ಕೇಂದ್ರ ಮಂಜೂರು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಒಬ್ಬರೇ ಎಲ್ಲವನ್ನೂ ಮಾಡಲಾಗುವುದಿಲ್ಲ. ಸಮುದಾಯದ ಎಲ್ಲರೂ ಕೈಜೋಡಿಸಬೇಕು. ಇಲ್ಲಿನ ವೈದ್ಯಾಧಿಕಾರಿಗಳನ್ನು  ಜನರೇ ಪ್ರಶಂಸಿಸಿ ರುವುದು ಸಂತಸ ತಂದಿದೆ. ಇಲಾಖೆಯಲ್ಲಿ  ಅಲ್ಲಲ್ಲಿ ನ್ಯೂನತೆ ಇದ್ದು ಅದನ್ನು ಸರಿಪಡಿಸಿ ಕೆಲಸ ಮಾ ಡಬೇಕಿದೆ. ಐದು ಸಾವಿರ ಆಸ್ಪತ್ರೆಗಳಿಗೆ ಸೋಲಾರ್ ಅಳವಡಿಸುವ ಯೋಜನೆಯಿದೆ ಎಂದರು.

ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಸಲು ಶ್ರಮಿಸುತ್ತಿದ್ದೇನೆ. ಶಾಲೆಗಳ ಸಮಸ್ಯೆ, ಆಸ್ಪತ್ರೆ ಸಮಸ್ಯೆ ನೀಗಲು ಪ್ರಾಮಾಣಿಕವಾಗಿ ಶ್ರಮಿಸುವೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಆರೋಗ್ಯದ ಸಮಸ್ಯೆ ಅರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯ ಒದಗಿಸಬೇಕು. ನಿಮ್ಮ ವೇತನ ಹೆಚ್ಚಳಕ್ಕೆ ಸರ್ಕಾರದೊಂದಿಗೆ ಚರ್ಚಿಸಲಾಗಿದೆ. ಗ್ರಾಮೀಣ ಪ್ರದೇಶದ ಆಸ್ಪತ್ರೆ ಅಭಿವೃದ್ಧಿಯಾದರೆ ಜಿಲ್ಲಾಸ್ಪತ್ರೆಗೆ ಹೊರೆ ಕಡಿಮೆಯಾಗುತ್ತದೆ. ಎಲ್ಲರೂ ಕೈಜೋಡಿಸಿ,  ಒಗ್ಗಟ್ಟಾಗಿ ಕೆಲಸ ಮಾಡಿ, ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕು ಎಂದರು. 

ಶಾಸಕ ಕೆ.ಎಸ್. ಬಸವಂತಪ್ಪ, ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಮಾಯ ಕೊಂಡ ಕ್ಷೇತ್ರದ ಮೂಲಸೌಕರ್ಯ ವಂಚಿತವಾಗಿದೆ.  ಮಾಯಕೊಂಡದಲ್ಲಿ ಸಮು ದಾಯ ಆರೋಗ್ಯ ಕೇಂದ್ರ ನಿರ್ಮಾಣವಾಗಬೇಕು. ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಕಾಲದಲ್ಲಿ ನಿರ್ಮಾಣ ವಾದ ಪ್ರಾಥಮಿಕ ಆರೋಗ್ಯ ಕೇಂದ್ರ ಶಿಥಿಲವಾಗಿದೆ. ಭದ್ರಾ ನಾಲೆಗಳೂ ಹಾಳಾಗಿವೆ. ನಾಲೆ ನಿರ್ಮಾಣಕ್ಕೆ ಇಪ್ಪತ್ತು ಕೋಟಿ ಮಂಜೂರಾಗಿದೆ.  ಇಪ್ಪತ್ತೆರಡು ಕೆರೆ ಏತ ನೀರಾವರಿ ಯೋಜನೆಗೆ ಹೊಸ ಪೈಪ್ ಲೈನ್ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಸಂಸದರೂ ವಿಶೇಷ ಪ್ಯಾಕೇಜ್ ನೀಡಿ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಬೇಕು ಎಂದರು.

ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಡಿಎಚ್ಒ ಷಣ್ಮುಖಪ್ಪ, ಟಿಎಚ್ಒ ದೇವರಾಜ್ ಪಟಕೆ,  ಅಭಿಯಾನ ನಿರ್ದೇಶಕ ನವೀನ್ ಭಟ್,   ವೈದ್ಯಾಧಿಕಾರಿ ಮಂಜುನಾಥ್,  ಮುಖಂಡರಾದ ಗ್ರಾಮ ಪಂಚಾಯತಿ ಅಧ್ಯಕ್ಷ ಮಹೇಶ್,  ಎಪಿಎಂಸಿ ಮಾಜಿ ಸದಸ್ಯ  ಶರಣಪ್ಪ, ಸಿ.ಡಿ. ಮಹೇಂದ್ರ, ಮಲ್ಲಿಕಾರ್ಜುನ, ರೈಸ್ ಮಿಲ್ ಸಿದ್ದಪ್ಪ, ರಾಜಶೇಖರ್, ರಂಗನಾಥ, ಸ್ಥಳದಾನಿ ಕೋಲ್ಕುಂಟೆ ಮಹೇಶ್ವರಪ್ಪ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಇದ್ದರು.

error: Content is protected !!