ವಿಜೃಂಭಿಸುತ್ತಿರುವ ಕುಟುಂಬ ರಾಜಕಾರಣ

ವಿಜೃಂಭಿಸುತ್ತಿರುವ ಕುಟುಂಬ ರಾಜಕಾರಣ

ಸ್ವಾಭಿಮಾನಿ ಬಳಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಸವಪ್ರಭು ಶ್ರೀ ವಿಶಾದ

ದಾವಣಗೆರೆ, ನ. 17-  ಕುಟುಂಬ ರಾಜಕಾರಣಕ್ಕೆ ಅಂತ್ಯ ಯಾವಾಗ ? ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಕಾಡುತ್ತಿದೆ. ಕೇವಲ ಒಬ್ಬರಿಗೆ ಎರಡು ಬಾರಿ ಮಾತ್ರ ಶಾಸಕ ಅಥವಾ ಸಂಸದರಾಗಬೇಕೆಂಬ ಕಾಯ್ದೆ ಜಾರಿಗೆ ಬರಬೇಕಾದ ಅಗತ್ಯ ಇದೆ ಎಂದು ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಹೇಳಿದರು.

ನಗರದ ಎಸ್.ಎಸ್.ಬಡಾವಣೆಯ `ಎ’ ಬ್ಲಾಕ್‌ನಲ್ಲಿ ಆಯೋಜಿಸಲಾಗಿದ್ದ ಸ್ವಾಭಿಮಾನಿ ಬಳಗದ ಉದ್ಘಾಟನೆ, ವೆಬ್‌ಸೈಟ್‌ಗೆ ಚಾಲನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭದ  ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಎಲ್ಲೆಡೆ ಕುಟುಂಬ ರಾಜಕಾರಣ ಬೆಳೆಯುತ್ತಲೇ ಇದೆ. ಕುಟುಂಬ ಮಾತ್ರ ಅಧಿಕಾರದಲ್ಲಿರಬೇಕೆಂಬ ದುರಾಸೆ ಬಹಳ ರಾಜಕಾರಣಿಗಳಲ್ಲಿ ಬೆಳೆದು ಬಂದಿದೆ. ಇಡೀ ದೇಶಾದ್ಯಂತ ಕುಟುಂಬ ರಾಜಕಾರಣ ವಿಜೃಂಭಿಸುತ್ತಿದೆ ಎಂದರು.

ಪ್ರಸ್ತುತ ಒಬ್ಬ ಶಾಸಕ, ಸಂಸದನಾಗಲು ಕನಿಷ್ಠ ನೂರು ಕೋಟಿ ರೂ. ಖರ್ಚು ಮಾಡುತ್ತಾರೆಂದರೆ ಇಂದಿನ ರಾಜಕೀಯ ಪರಿಸ್ಥಿತಿ ಯಾವ ಹಂತ ತಲುಪಿದೆ ಎಂಬುದನ್ನು ಅರಿಯಬೇಕಾಗಿದೆ. ವ್ಯಕ್ತಿಗೆ ದುಡ್ಡು, ಅಂತಸ್ತು ದೊಡ್ಡದಲ್ಲ ಸ್ವಾಭಿಮಾನ, ಸ್ವಾವಲಂಬನೆ, ಪ್ರಾಮಾಣಿಕತೆ ದೊಡ್ಡದು. ಈ ನಿಟ್ಟಿನಲ್ಲಿ ಸ್ವಾಭಿಮಾನಿಯಾಗಿ ಜನರ ಮನ ಗೆದ್ದಿರುವ ವಿನಯ್ ಕುಮಾರ್ ಅವರಂತಹ ನಾಯಕತ್ವ ಇಂದು ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ವಾಭಿಮಾನಿ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಮಾತನಾಡಿ, ಶೂನ್ಯದಿಂದ ಆರಂಭ ಇಂದು ಬೃಹದಾಕಾರವಾಗಿ ಇನ್‌ಸೈಟ್ಸ್  ಐಎಎಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದೇನೆ. ಅದರಂತೆ ಸ್ವಾಭಿಮಾನಿ ಬಳಗ ಕಟ್ಟಿದ್ದೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕ್ರಾಂತಿ ಉಂಟು ಮಾಡುವುದು ನಿಶ್ಚಿತವಾದರೂ. ದಿಢೀರ್ ಬದಲಾಗುತ್ತದೆ ಎಂದು ಹೇಳಲಾಗದು. ಬಹಳಷ್ಟು ಸಮಯಾವಕಾಶ ಬೇಕು. ಮುಂಬರುವ ದಿನಗಳಲ್ಲಿ ಸ್ವಾಭಿಮಾನಿ ಬಳಗ ಎತ್ತರಕ್ಕೆ ಬೆಳೆಯಬಲ್ಲುದು ಎಂಬ ವಿಶ್ವಾಸ ನನ್ನದು ಎಂದು ಹೇಳಿದರು.

ಇಡಿ ರಾಜ್ಯವನ್ನೇ ಸುತ್ತಲು ಆರಂಭಿಸಿದ್ದೇನೆ. ಹೋದ ಕಡೆಗಳಲ್ಲಿ ಪ್ರೀತಿ, ವಿಶ್ವಾಸ ಸಿಗುತ್ತಿದ್ದು, ನಾವಷ್ಟೇ ಮೌಲ್ಯವನ್ನು ಹೆಚ್ಚಿಸಿಕೊಳ್ಳುವುದಲ್ಲ. ಬದಲಿಗೆ ನಮ್ಮ ಜೊತೆಯಲ್ಲಿರುವವರ ಮೌಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.

ರಾಜ್ಯದಲ್ಲೆಡೆ ಸಂಚರಿಸುವ ಶಕ್ತಿ, ಜನಪರ ಕಾಳಜಿ, ಶೈಕ್ಷಣಿಕ ಅಸಮಾನತೆ ತೊಲಗಿಸುವ ಹಂಬಲ ಇದೆ. ಹಿಂದುಳಿದ ವರು, ದಲಿತರು, ಅಲ್ಪಸಂಖ್ಯಾತರು, ಶೋಷಿತರ ಪರ ಸ್ವಾಭಿಮಾನಿ ಬಳಗ ಕೆಲಸ ಮಾಡಲಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಮನೆಯಲ್ಲಿ ಕೂರದೇ ಸಂಘಟನೆ ಮಾಡುವ ಮತ್ತು ಎಲ್ಲಾ ವರ್ಗದವರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬಂದಿದ್ದೇನೆ. ಮುಂದೆ ಕೂಡ ಸದುದ್ದೇಶದಿಂದ ಮುನ್ನಡೆಯುತ್ತೇನೆಂದು ತಿಳಿಸಿದರು.

ಲೋಕಸಭೆ ಚುನಾವಣೆಯ ವೇಳೆ ನನ್ನ ವಿರುದ್ಧ ಅಪಪ್ರಚಾರ, ಸುಳ್ಳು ಸುದ್ದಿಗಳನ್ನೇ ಸೃಷ್ಟಿಸಿದರು. ಆದರೂ ನಾನು ಮುಂದೆ ಇಟ್ಟ ಹೆಜ್ಜೆ ಹಿಂದಕ್ಕೆ ಇಡಲಿಲ್ಲ. ದಾವಣಗೆರೆಯಲ್ಲಿ ಪಾದಯಾತ್ರೆ ನಡೆಸಿದಾಗ ಹೆಚ್ಚು ದಿನ ಇರಲ್ಲ, ಇಲ್ಲಿಂದ ಹೋಗುತ್ತೇನೆಂದು ಭಾವಿಸಿದವರು, ಕುಹುಕವಾಡಿದವರೇ ಹೆಚ್ಚು. ಹೊಂದಾಣಿಕೆ ಮಾಡಿಕೊಳ್ಳುವ ವ್ಯಕ್ತಿ ನಾನಲ್ಲ. ಲಕ್ಷಾಂತರ ಮಂದಿ ಹತ್ತು ತಿಂಗಳಲ್ಲಿ ಬಂದರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಯಾವ್ಯಾವುದೋ ಕಾರಣಕ್ಕೆ ಹಿಂದೆ ಸರಿದರು. ಸ್ವಾಭಿಮಾನಿಗಳು, ಪ್ರಾಮಾಣಿಕತೆ ಇದ್ದವರು ಜೊತೆಯಲ್ಲೇ ಉಳಿದರು. 42097 ಮತಗಳು ಬಂದವು. ನಿರೀಕ್ಷೆಗೆ ತಕ್ಕಂತೆ ಮತಗಳು ಬಾರದಿರುವುದು ನನಗಷ್ಟೇ ಅಲ್ಲ, ಜಿಲ್ಲೆಯ ಜನರಿಗೂ ಬೇಸರ ತರಿಸಿತು ಎಂದು ಹೇಳಿದರು. 

ಈಗಿನ ರಾಜಕಾರಣಿಗಳು ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುತ್ತಾರೆ. ಶೋಷಣೆ ಮಾಡುತ್ತಲೇ, ಮತ ಪಡೆಯುತ್ತಾ ತಾವು ಬೆಳೆದು ಅಧಿಕಾರ, ಶ್ರೀಮಂತಿಕೆ ಅನುಭವಿಸು ತ್ತಾರೆ. ಚುನಾವಣೆಯಲ್ಲಿ ಗೆಲ್ಲಲು ನೂರು, ಇನ್ನೂರು ಕೋಟಿ ರೂಪಾಯಿ ಖರ್ಚು ಮಾಡುತ್ತಾರೆ. ಆದ್ರೆ, ಶೋಷಿತರು, ನೊಂದವರು, ಬಡವರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲ್ಲ, ಪ್ರೋತ್ಸಾಹ ಕೊಡುವುದಿಲ್ಲ. ಶಿಕ್ಷಿತರಾದರೆ ಮುಂದೆ ಪ್ರಶ್ನೆ ಮಾಡುತ್ತಾರೆ, ನಮ್ಮ ಮಟ್ಟಕ್ಕೆ ಬೆಳೆದುಬಿಡುತ್ತಾರೆ ಎಂಬ ಭಯ ಈಗಿನ ರಾಜಕಾರಣಿಗಳಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಜನರ ಅಸಹಾಯಕತೆ ರಾಜಕಾರಣಿಗಳ ಬಂಡವಾಳವಾಗಿಬಿಟ್ಟಿದೆ. ನಾವು ಅಸಹಾಯಕತೆ ಬಿಡಬೇಕು. ಏನೂ ಮಾಡದೇ ಇರುವ ಪರಿಸ್ಥಿತಿ ಬಂದಿದೆ ಎಂದು ಕೈಕಟ್ಟಿ ಕೂರಬಾರದು. ಯಾಕೆಂದರೆ ನಮ್ಮ ಈ ಧೋರಣೆಯೇ ಬಂಡವಾಳವಾಗಿ ಬಿಟ್ಟಿದೆ. ಸಂಘಟನೆ, ಹೋರಾಟದ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಇದಕ್ಕೆ ಸ್ವಾಭಿಮಾನಿ ಬಳಗ ವೇದಿಕೆ ಕಲ್ಪಿಸಿಕೊಡಲಿದೆ. ಪರಿಣಾಮಕಾರಿಯಾಗಿ ರಾಜಕೀಯ ಪ್ರಜ್ಞೆ ಮೂಡಿಸುತ್ತೇವೆ. ಯಾರ ಹಂಗಿನಲ್ಲಿ ಬದುಕದಿರುವವರು ಸ್ವಾಭಿಮಾನಿಗಳು. ಸ್ವಾರ್ಥ ಇಲ್ಕದವರಿಗೆ ಧೈರ್ಯ, ಹೋರಾಡುವ ಮನೋಭಾವ ಇರುತ್ತದೆ ಎಂದು ವಿಶ್ಲೇಷಿಸಿದರು. 

ತುಳಸಿ ಗಿಡಕ್ಕೆ ನೀರೆರೆಯುವ ಮೂಲಕ ವಿಶೇಷವಾಗಿ ಸ್ವಾಭಿಮಾನಿ ಬಳಗ ಉದ್ಘಾಟಿಸಲಾಯಿತು. ರಾಜು ಮೌರ್ಯ ಪ್ರಾಸ್ತಾವಿಕವಾಗಿ ಸ್ವಾಭಿಮಾನಿ ಬಳಗದ ಧ್ಯೇಯೋದ್ದೇಶಗಳ ಕುರಿತಂತೆ ಮಾಹಿತಿ ನೀಡಿದರು. 

ಹಿರಿಯ ಪತ್ರಕರ್ತ ಬಸವರಾಜ್ ದೊಡ್ಮನಿ ವೆಬ್ ಸೈಟ್ ಲೋಕಾರ್ಪಣೆಗೊಳಿಸಿ ಮಾತನಾಡಿದರು. 

ವೇದಿಕೆಯಲ್ಲಿ ತಂಜೀಮ್ ಉಲೇಮಾ ಅಹಲೇ ಸುನ್ನತ್ ಅಧ್ಯಕ್ಷ ಮೌಲಾನಾ ಖಾಜಿ ಮಹಮ್ಮದ್ ಇಲಿಯಾಜ್ ಖಾದ್ರಿ, ಬಾಸ್ಕೋ ಡಾನ್ ನ ಫಾದರ್ ರೆಜಿ ಜೇಕಬ್ ಇದ್ದರು. 

ಇದೇ ವೇಳೆ ಮಹರ್ಷಿ ವಾಲ್ಮೀಕಿ, ವೀರವನಿತೆ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಭಕ್ತಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. 

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯುಗಧರ್ಮ ರಾಮಣ್ಣ (ಜಾನಪದ), ಕೊಕ್ಕನೂರು ಎ.ಕೆ. ಹನುಮಂತಪ್ಪ (ತಮಟೆ ವಾದ್ಯ ಕಲಾವಿದ), ಇಂಟರ್ ನ್ಯಾಷನಲ್ ಗಿನ್ನಿಸ್ ಬುಕ್ ರೆಕಾರ್ಡ್ ಸಾಧಕಿ ಕು. ಎಸ್.‌ ಸ್ತುತಿ, ಶವ ಸಂಸ್ಕಾರ ಕಾಯಕ ಯೋಗಿ ಗೂಳಪ್ಪ ನೀಲಪ್ಪ ಮುಗದೂರ,  ಪ್ರಗತಿಪರ ರೈತರಾದ ಕೆ. ಟಿ. ಚಂದ್ರಶೇಖರ್, ಯೋಗಪಟು ಕು. ಕೆ. ವೈ. ಸೃಷ್ಟಿ, ಕರಾಟೆ ಪಟು ನಿಧಿ ಬಿ. ಎ. ಬೇತೂರು, ಕಟ್ಟಡ ಕಾರ್ಮಿಕ ಫೆಡರೇಷನ್ ಅಧ್ಯಕ್ಷ ವಿ. ಲಕ್ಷ್ಮಣ್, ಅಂಗವಿಕಲರ ಆಶಾಕಿರಣ ಟ್ರಸ್ಟ್  ಮುಖ್ಯ ಶಿಕ್ಷಕ  ಸಿ.‌ ಹನುಮೇಶ್ ರವರಿಗೆ ಸ್ವಾಭಿಮಾನಿ ಬಳಗದಿಂದ ಗೌರವಿಸಲಾಯಿತು.

error: Content is protected !!