ಖಾಸಗಿ ಕಾರ್ಯಕ್ರಮಕ್ಕೆ ಹೈಸ್ಕೂಲ್ ಮೈದಾನ ಬೇಡ

ಖಾಸಗಿ ಕಾರ್ಯಕ್ರಮಕ್ಕೆ ಹೈಸ್ಕೂಲ್ ಮೈದಾನ ಬೇಡ

 ಮಾರ್ನಿಂಗ್‌ ಸ್ಟಾರ್‌ ಫುಟ್‌ಬಾಲ್‌ ಕ್ಲಬ್‌ನಿಂದ  ಆಟವಾಡಿ ಪ್ರತಿಭಟನೆ

ದಾವಣಗೆರೆ, ನ.17- ಹೈಸ್ಕೂಲ್‌ ಮೈದಾನವನ್ನು ಪ್ರತಿ ನಿತ್ಯವೂ ಖಾಸಗಿ ಕಾರ್ಯಕ್ರಮಗಳಿಗೆ ನೀಡಿ ಕ್ರೀಡಾಪಟುಗಳಿಗೆ ತೊಂದರೆ ಮಾಡುತ್ತಿರುವ ಆಡಳಿತ ಮಂಡಳಿಯ ನೀತಿ ಖಂಡಿಸಿ ಪಾಲಿಕೆ ಮುಂಭಾಗದ ಪಿ.ಬಿ ರಸ್ತೆಯಲ್ಲೇ ಮಾರ್ನಿಂಗ್‌ ಸ್ಟಾರ್‌ ಫುಟ್‌ ಬಾಲ್‌ ಕ್ಲಬ್‌ನ ಸದಸ್ಯರು ಭಾನುವಾರ ಬೆಳಗ್ಗೆ ವಿನೂತನ ಪ್ರತಿಭಟನೆ ನಡೆಸಿದರು.

ಕ್ರೀಡಾಪಟುಗಳು, ಕ್ಲಬ್‌ನ ಸದಸ್ಯರು ಮತ್ತು ಕ್ರೀಡಾ ಪ್ರೇಮಿಗಳು ಪಾಲಿಕೆ ಮುಂಭಾಗದ ಪಿ.ಬಿ ರಸ್ತೆಯಲ್ಲೇ ಕ್ರಿಕೆಟ್, ಫುಟ್ ಬಾಲ್ ಆಟಗಳನ್ನು ಆಡುವ ಮೂಲಕ ಹೈಸ್ಕೂಲ್‌ ಮೈದಾನ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದರು.

ಈ ವೇಳೆ ಕ್ರೀಡಾಪಟು ವೀರೇಶ್ ಮಾತನಾಡಿ, ಹೈಸ್ಕೂಲ್‌ ಮೈದಾನದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ನೀಡುತ್ತಿರುವುದರಿಂದ ಕ್ರೀಡಾಪಟುಗಳಿಗೆ ತೊಂದರೆ ಆಗುತ್ತಿದೆ. ಇದೇ ರೀತಿ ಮೈದಾನದ ಆಡಳಿತ ಮಂಡಳಿ ನಡೆದುಕೊಂಡರೆ ಮುಂದಿನ ಪೀಳಿಗೆಗೆ ಮೈದಾನ ಉಳಿಸಲು ಉಗ್ರ ಹೋರಾಟ ಮಾಡುವುದು ನಿಶ್ಚಿತ ಎಂದು ಎಚ್ಚರಿಸಿದರು.

ಈಗಾಗಲೇ ಮೈದಾನ ಹಾಳಾಗಿದ್ದು,  ಯುವಕರಿಗೆ ಆಟವಾಡಲು ಹಾಗೂ ಹಿರಿಯ ನಾಗರಿಕರಿಗೆ ವಾಕಿಂಗ್‌ ಮಾಡಲು ತೊಂದರೆ ಆಗುತ್ತಿದೆ ಎಂದು ದೂರಿದರು.

ಮೈದಾನ ಮೈದಾನವಾಗಿಯೇ ಇರಬೇಕು. ಹಣದ ಆಸೆಗೆ ಅದನ್ನು ಬಾಡಿಗೆ ಕೊಟ್ಟವರಿಗೆ ದೊಡ್ಡ ಧಿಕ್ಕಾರವಿರಲಿ ಎಂದ ಅವರು, ಮೈದಾನದ ಜಾಗ ಕಬಳಿಸುವ ದೊಡ್ಡ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಮಂಜುನಾಥ ಕುಕ್ಕುವಾಡ ಮಾತನಾಡಿ, ಬಸ್ ನಿಲ್ದಾಣ, ಪಟಾಕಿ ಮಾರಾಟಕ್ಕೆ ಅವಕಾಶ ಸೇರಿದಂತೆ ಅನೇಕ ರಾಜಕೀಯ ಕಾರ್ಯಕ್ರಮಗಳು ಹಾಗೂ ಎಕ್ಸಿಬಿಷನ್’ಗಳಿಗೆ ಅವಕಾಶ ನೀಡುತ್ತಿರುವುದರಿಂದ ನಮಗೆ ವಾರಕ್ಕೊಮ್ಮೆ ಆದರೂ ಆಡಲು ಜಾಗ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಮೈದಾನದ ಮೇಲೆ ರಾಜಕೀಯ ಪ್ರಭಾವ ತುಂಬಾ ಇದೆ. ಹೈಸ್ಕೂಲ್ ಮೈದಾನ ಹೋರಾಟ ಸಮಿತಿ ರಚಿಸಿಕೊಂಡು  ನಿರಂತರ ಹೋರಾಟ ಮಾಡೋಣ ಎಂದು ತಿಳಿಸಿದರು. ಈ ವೇಳೆ ಕಾಂತರಾಜ್, ನೂರ್‌ ಅಹಮದ್, ನಯಾಜ್ ಅಹ್ಮದ್, ಯೂಸುಫ್, ಆನಂದ್, ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಇದ್ದರು.

error: Content is protected !!