ದಾವಣಗೆರೆ, ಅ. 29- ಜಿಲ್ಲಾ ಬಿಜೆಪಿ ವತಿಯಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಬಿರ್ಸಾ ಮುಂಡಾ ಜಯಂತಿ ಅಂಗವಾಗಿ `ರನ್ ಫಾರ್ ಯೂನಿಟಿ’ ನಡಿಗೆ ಕಾರ್ಯಕ್ರಮ ನಗರದ ಡಾ. ಎಂ.ಸಿ. ಮೋದಿ ವೃತ್ತದಿಂದ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಬಿರ್ಸಾ ಮುಂಡಾ ಅವರ ಜಯಂತಿ ಅಂಗವಾಗಿ ಇಡೀ ದೇಶಾದ್ಯಂತ `ರನ್ ಫಾರ್ ಯೂನಿಟಿ’ ಕಾರ್ಯಕ್ರಮವನ್ನು ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರನ್ನೊಳಗೊಂಡು ಹಮ್ಮಿಕೊಳ್ಳಲಾಗಿತ್ತು ಎಂದರು.
ಈ ದೇಶಕ್ಕೆ ಎಂದಿಗೂ ಚ್ಯುತಿ ಬಾರದಂತೆ ಒಗ್ಗಟ್ಟಾಗಿ, ಐಕ್ಯತೆಯಿಂದ ಇರಬೇಕು ಎಂಬುದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಆಶಯವಾಗಿತ್ತು. ಅವರ ದಿಟ್ಟ ಕ್ರಮಗಳಿಂದ ದೇಶ ಒಗ್ಗಟ್ಟಿನಿಂದ ಇದೆ ಎಂದು ಹೇಳಿದರು.
ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದರಿಂದಲೇ ಭಾರತವನ್ನು ಇಡೀ ವಿಶ್ವವೇ ಗೌರವಿಸುತ್ತಿದೆ. ಅನೇಕ ಜಾತಿ, ಮತ, ಪಂಥಗಳಿದ್ದರೂ ಭಾರತದ ಬಲಿಷ್ಠವಾಗಿದೆ. ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕಾರಣರಾದ ನಮ್ಮ ನಾಯಕರ ಸ್ಮರಣೆಯನ್ನು ವಿಶ್ವಕ್ಕೆ ಸಾರುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ ಮಾತನಾಡಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಉಕ್ಕಿನ ಮನುಷ್ಯ ಎಂದು ಕರೆಸಿಕೊಳ್ಳುತ್ತಿದ್ದರು. ಅವರ ಸೇವೆ, ಸಂಘಟನಾತ್ಮಕ ಶಕ್ತಿ ಇರುವ ಕಾರಣ ಅವರನ್ನು ಸರ್ದಾರ್ ಎಂದು ಹೆಸರು ಬಂದಿದೆ. 550 ಸಂಸ್ಥಾನಗಳನ್ನು ಒಗ್ಗೂಡಿಸಿ ಬಲಿಷ್ಠ ಭಾರತ ನಿರ್ಮಾಣ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಪ್ರಧಾನಿಯಾಗುವ ಅವಕಾಶ ಬಂದೊದಗಿದರೂ ಸಹ ತ್ಯಾಗ ಮಾಡಿ ಪದವಿಯಿಂದ ಹಿಂದೆ ಸರಿದ ಮಹಾನ್ ವ್ಯಕ್ತಿ. ಅಂತಹ ವ್ಯಕ್ತಿ ದೇಶದ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಮುಖಂಡರಾದ ಐರಣಿ ಅಣ್ಣೇಶ್, ಹೆಚ್.ಎನ್. ಶಿವಕುಮಾರ್, ನವೀನ್ ಶಂಕರ್, ಗೋವಿಂದರಾಜ್, ಜಗದೀಶ್, ಶಿವಪ್ರಕಾಶ್, ಟಿಂಕರ್ ಮಂಜಣ್ಣ ಮತ್ತಿತರರು ಉಪಸ್ಥಿತರಿದ್ದರು.