ಸರ್ವರಿಗೂ ವಿದ್ಯೆಯನ್ನು ಧಾರೆ ಎರೆದ ಜಯದೇವ ಶ್ರೀ

ಸರ್ವರಿಗೂ ವಿದ್ಯೆಯನ್ನು ಧಾರೆ ಎರೆದ ಜಯದೇವ ಶ್ರೀ

ಜಯದೇವ ಶ್ರೀ ಸತ್ಕಾರ್ಯದಿಂದ ಸಾಕ್ಷರತೆ ಪ್ರಮಾಣ ಹೆಚ್ಚಳ: ಬಸವಪ್ರಭು ಶ್ರೀ

ದಾವಣಗೆರೆ, ಸೆ. 30- ಜಯದೇವ ಜಗದ್ಗುರುಗಳು ಶಿಕ್ಷಣ ಕ್ರಾಂತಿ ಮಾಡದಿದ್ದರೆ ಇವತ್ತು ದೇಶ, ರಾಜ್ಯ ಉದ್ಧಾರವಾಗಲು ಸಾಧ್ಯವಾಗುತ್ತಿರಲಿಲ್ಲ. ಅವರು ಪ್ರಸಾದ ನಿಲಯಗಳನ್ನು ಸ್ಥಾಪಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗಿದ್ದರು. ಕಳೆದ 120 ವರ್ಷಗಳಿಂದ ಇಂತಹ ಸತ್ಕಾರ್ಯಗಳು ನಡೆದಿದ್ದರಿಂದ ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಲು ಜಯದೇವ ಜಗದ್ಗುರುಗಳು ಕಾರಣಕರ್ತರಾಗಿದ್ದಾರೆಂದು ವಿರಕ್ತಮಠದ ಚರಮೂರ್ತಿ  ಶ್ರೀ ಬಸವ ಪ್ರಭು ಸ್ವಾಮೀಜಿ ಹೇಳಿದರು.

ನಗರದ ಶ್ರೀ ಶಿವಯೋಗಾಶ್ರಮದ ಸಭಾಂಗಣದಲ್ಲಿ ಶ್ರೀ ಮುರುಘರಾಜೇಂದ್ರ ವಿರಕ್ತಮಠ, ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ ಇಂದು ಹಮ್ಮಿಕೊಂಡಿದ್ದ ಲಿಂ. ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 68 ನೇ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ನಾಡಿನ ಹೆಸರಾಂತ ಕವಿ ಜಿ.ಎಸ್. ಶಿವರುದ್ರಪ್ಪ, ಸಂಶೋಧಕ ಎಂ. ಚಿದಾನಂದಮೂರ್ತಿ, ಹಂಗಾಮಿ ರಾಷ್ಟ್ರಪತಿಯಾಗಿದ್ದ ಬಿ.ಡಿ. ಜತ್ತಿ, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ಕವಿ ಚನ್ನವೀರ ಕಣವಿ, ಮಾಜಿ ಸಚಿವರಾಗಿದ್ದ ದಿ. ಹೆಚ್. ಶಿವಪ್ಪ, ಕೊಂಡಜ್ಜಿ ಬಸಪ್ಪ ಮುಂತಾದವರು ಜಯದೇವ ಪ್ರಸಾದ ನಿಲಯದಲ್ಲಿ ಓದಿ ನಾಡಿಗೆ ಬೆಳಕಾದವರು ಎಂದು ಹೇಳಿದರು.

ಹತ್ತೊಂಬತ್ತನೇಯ ಶತಮಾನದಲ್ಲಿ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಉದಯಿಸಿ ಬರದಿದ್ದರೆ ಇವತ್ತು ದೇಶದಲ್ಲಿ ಹೆಬ್ಬೆಟ್ಟು ಒತ್ತುವ ಜನರೇ ಅಧಿಕವಾಗಿರುತ್ತಿದ್ದರು ಎಂದರು.

`ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ’ ಎಂಬಂತೆ ನಾಡನ್ನು ಸಂಚರಿಸಿ ದಾವಣಗೆರೆ, ಚಿತ್ರದುರ್ಗ, ಬೆಂಗಳೂರು, ತುಮಕೂರು, ತಿಪಟೂರು, ಅರಸೀಕೆರೆ, ಧಾರವಾಡ, ಕೊಲ್ಲಾ ಪುರ, ನಿಪ್ಪಾಣಿ, ಕಾಶಿ ಮುಂತಾದ ಸ್ಥಳಗಳಲ್ಲಿ ಉಚಿತವಾಗಿ ಪ್ರಸಾದ ನಿಲಯಗಳನ್ನು ಸ್ಥಾಪಿಸಿ ಸರ್ವರಿಗೂ ವಿದ್ಯೆಯನ್ನು ಧಾರೆ ಎರೆದ ಪುಣ್ಯಾತ್ಮರು ಜಯದೇವ ಶ್ರೀಗಳು ಎಂದರು.

ಜಯದೇವ ಶ್ರೀಗಳ ಜೀವನ ಈಗಿನ ಮಠಗಳ ಪೀಠಾಧಿಪತಿಗಳಿಗೆ ಮೇಲ್ಪಂಕ್ತಿಯಾಗಿದೆ. ಆಯಾ ಊರಿನ ಜನರಿಂದ ಪಡೆದ ಕಾಣಿಕೆಯನ್ನು ಅದೇ ಸ್ಥಳದಲ್ಲೇ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ವಿದ್ಯಾ ಪ್ರಸಾರವನ್ನು ಮಾಡಿದರು.  ಜಗತ್ತಿನ ಕತ್ತಲೆ ಕಳೆಯಲು ಸೂರ್ಯ ಬರುವಂತೆ ಸ್ವಾತಂತ್ರ್ಯ ಪೂರ್ವದಲ್ಲಿ  ಅಸಮಾನತೆ, ಅಸ್ಪೃಶ್ಯತೆ, ಅನಕ್ಷರತೆ, ಬಡತನ, ಹಸಿವು, ನಿರುದ್ಯೋಗ ಎಂಬ ಕತ್ತಲನ್ನು ನಿರ್ಮೂಲನೆ ಮಾಡಲು ಜ್ಞಾನ ಸೂರ್ಯರಾಗಿ ಬಂದವರು ಜಯದೇವಶ್ರೀಗಳು ಎಂದು ಬಣ್ಣಿಸಿದರು.

ಸರ್ವರಿಗೂ ವಿದ್ಯೆಯನ್ನು ಧಾರೆ ಎರೆದ ಜಯದೇವ ಶ್ರೀ - Janathavani

ಮಹಾನಗರ ಪಾಲಿಕೆ ಮೇಯರ್  ಕೆ. ಚಮನ್ ಸಾಬ್ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಮುರುಘಾ ಮಠ ನೀಡಿದ ಕೊಡುಗೆ ಅನನ್ಯವಾದುದು. ಜಾತ್ಯಾತೀತವಾಗಿ ಸರ್ವರಿಗೂ ಶಿಕ್ಷಣ ಮತ್ತು ದಾಸೋಹ ಸೇವೆ ನಿರಂತರವಾಗಿ ಮಾಡುತ್ತಾ ಬರುತ್ತಿದೆ. ಇವತ್ತಿನ ಸಂಕೀರ್ಣ ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿ ನೆಲೆಸಲು ಬಸವಾದಿ ಪ್ರಮಥರ ಕಾರಣ. ವಚನ ಸಾಹಿತ್ಯದಿಂದಲೇ ಕನ್ನಡ ಭಾಷೆಗೆ ಹೆಚ್ಚು ಸತ್ವ ಬಂದಿದೆ ಎಂದರು.

 ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗಣೇಶೋತ್ಸವ ಆಚರಣೆಗೆ ಕಾಲಮಿತಿ ಇಲ್ಲವಾಗಿದೆ. ಡಿಜೆಗೆ ತಕ್ಕಂತೆ ವಿಸರ್ಜನೆ ದಿನ ನಿಗದಿಯಾಗುತ್ತಿದ್ದು, ಇಂತಹ ಪರಿಸ್ಥಿತಿ ಬದಲಾಗಬೇಕಿದೆ. ಭಕ್ತಿಯಿಂದ ಆಚರಿಸುವಂತಾಗಬೇಕು ಎಂದು ಹೇಳಿದರು.

ಮಹಾನಗರ ಪಾಲಿಕೆ ಉಪ ಮೇಯರ್ ಸೋಗಿ ಶಾಂತಕುಮಾರ್ ಮಾತನಾಡಿ, ನಾನು ಉಪ ಮೇಯರ್ ಆಗಿ ಆಯ್ಕೆಯಾಗಲು ಜಯದೇವ ಜಗದ್ಗುರುಗಳ ಕೃಪಾಶೀರ್ವಾದ ಕಾರಣ. ನಿತ್ಯ ಶಿವಯೋಗಾಶ್ರಮದ ಆವರಣದಲ್ಲಿರುವ ಜಯದೇವ ಶ್ರೀ ಅಥಣಿ ಮುರುಗೇಂದ್ರ ಶರಣರ ಗದ್ದುಗೆಗೆ ಬಂದು ಭಕ್ತಿ ಸಮರ್ಪಿಸಿದ ನಂತರವೇ ನನ್ನ ಕಾಯಕ ಮುಂದುವರೆಯುವುದು. ನಂಬಿದ ಭಕ್ತರಿಗೆ ಒಳಿತಾಗುತ್ತಲೇ ಬಂದಿದೆ ಎಂದು ತಿಳಿಸಿದರು.

ಗುರುಮಠಕಲ್ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಹಾವೇರಿ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ, ಶಿಕಾರಿಪುರದ ಶ್ರೀ ಚನ್ನಬಸವ ಸ್ವಾಮೀಜಿ, ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ, ಹೊಳಲ್ಕೆರೆಯ ಶ್ರೀ ತಿಪ್ಪೇರುದ್ರ ಸ್ವಾಮೀಜಿ, ತಿಳುವಳ್ಳಿಯ ಶ್ರೀ ಬಸವ ನಿರಂಜನ ಸ್ವಾಮೀಜಿ, ಐರಣಿಯ ಶ್ರೀ ಗಜದಂಡ ಸ್ವಾಮೀಜಿ, ಶ್ರೀ ಪ್ರಭುಲಿಂಗ ಸ್ವಾಮೀಜಿ, ಮೈಸೂರಿನ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ, ಹುಲಸೂರು ಶ್ರೀ ಶಿವಾನಂದ ಸ್ವಾಮೀಜಿ, ಚಿತ್ರದುರ್ಗ ಶ್ರೀ ಬಸವಾದಿತ್ಯ ದೇವರು,  ಸಿ.ಆರ್. ನಸೀರ್ ಅಹಮದ್, ಬೆಳ್ಳೂಡಿ ಮಂಜುನಾಥ್, ಶಿವಯೋಗಾಶ್ರಮ ಟ್ರಸ್ಟ್ ಪದಧಿಕಾರಿಗಳು  ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೇ ವೇಳೆ ಮಹಾನಗರ ಪಾಲಿಕೆ ಸದಸ್ಯರಾದ ಬಸಪ್ಪ ದಂಪತಿಯನ್ನು ಹಾಗೂ ಪ್ರವಚನಕಾರ ಮಹಾಂತೇಶ್ ಶಾಸ್ತ್ರಿ ಅವರನ್ನು ಗೌರವಿಸಲಾಯಿತು.

error: Content is protected !!