ರಾಮನಗರ ಗಾಂಧಿ ಭವನದಲ್ಲಿ ಜಯಂತಿ ಆಚರಣೆಗೆ ಸಿದ್ದತೆ

ರಾಮನಗರ ಗಾಂಧಿ ಭವನದಲ್ಲಿ ಜಯಂತಿ ಆಚರಣೆಗೆ ಸಿದ್ದತೆ

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಆಚರಿಸಲು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸೂಚನೆ

ದಾವಣಗೆರೆ, ಸೆ.30- ನಾಡಿದ್ದು ದಿನಾಂಕ 2ರಂದು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಸ್ಥಳೀಯ ರಾಮನಗರದಲ್ಲಿನ ಗಾಂಧಿ ಭವನದಲ್ಲಿ ಆಯೋಜನೆ ಮಾಡುವ ಮೂಲಕ ಸರ್ವಧರ್ಮ ಪ್ರಾರ್ಥನೆ, ವಿದ್ಯಾರ್ಥಿಗಳಿಂದ ಗಾಂಧಿ ಚಿಂತನೆಗಳ ಕುರಿತು ಭಾಷಣವನ್ನು ಏರ್ಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು. 

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ಮೊನ್ನೆ ನಡೆದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಾಂಧೀಜಿಯವರ ಚಿಂತನೆ ಹಾಗೂ ತತ್ವಗಳು ಇಂದಿಗೂ ಜಾಗತಿಕವಾಗಿ ಪ್ರಸ್ತುತ ವಾಗಿದ್ದು ಅವರ ಚಿಂತನೆಗಳನ್ನು ಜೀವಂತವಾ ಗಿಡುವ ಕೆಲಸ ಮಾಡುವ ಮೂಲಕ ಯುವ ಜನಾಂಗದಲ್ಲಿ ಸತ್ಯ, ಅಹಿಂಸೆ, ಶಾಂತಿ, ಸರಳತೆಯ ಭಾವನೆಗಳನ್ನು ಬಿತ್ತಬೇಕಾಗಿದೆ. ಈ ನಿಟ್ಟಿನಲ್ಲಿ ರಾಮನಗರದಲ್ಲಿನ ಗಾಂಧಿ ಭವನದಲ್ಲಿ ವಿದ್ಯಾರ್ಥಿಗಳಿಗೆ ನಿರಂತರ ಚಟುವಟಿಕೆಗಳನ್ನು ನಡೆಸುವ ಮೂಲಕ ಗಾಂಧೀಜಿಯವರ ತತ್ವ, ಚಿಂತನೆಗಳ ಕುರಿತು ಮನವರಿಕೆ ಮಾಡುವ ಕೆಲಸವನ್ನು ಮಾಡಲು ವಿವಿಧ ಇಲಾಖೆಗಳಿಂದ ಕ್ರಮವಹಿಸಲು ಆದೇಶ ನೀಡಲಾಗುತ್ತದೆ ಎಂದರು. 

ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಾಲಿಕೆ ಮೇಯರ್ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತದೆ. ಎಲ್ಲಾ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದರು. 

 ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಬೇಕು. ಶಾಲಾ, ಕಾಲೇಜುಗಳಲ್ಲಿಯೂ ಜಯಂತಿ ಆಚರಣೆ ಮಾಡಬೇಕು, ಶ್ರಮದಾನ, ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಳ್ಳಲು ತಿಳಿಸಿದರು. 

ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ಅಭಿಷೇಕ್, ಸಂತೋಷ್ ಪಾಟೀಲ್, ಪಾಲಿಕೆ ಆಯುಕ್ತೆ ರೇಣುಕಾ, ಯೋಜನಾ ನಿರ್ದೇಶಕ ಡಾ. ಮಹಂತೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 

error: Content is protected !!