ಜಿಲ್ಲಾ ಸಹಕಾರ ಯೂನಿಯನ್ನಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ
ದಾವಣಗೆರೆ, ಆ. 12 – ಜಿಲ್ಲೆಯಲ್ಲಿ ಸಹಕಾರ ಭವನಕ್ಕೆ ಸ್ವಂತ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಜಿಲ್ಲೆಯ ಎಲ್ಲಾ ಸಹಕಾರಿಗಳು ಕೈ ಜೋಡಿಸಬೇಕು ಎಂದು ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ ಕರೆ ನೀಡಿದರು.
ನಗರದ ಡಾ. ಸದ್ಯೋಜಾತ ಹಿರೇಮಠದಲ್ಲಿ ಇಂದು ನಡೆದ ಜಿಲ್ಲಾ ಸಹಕಾರ ಯೂನಿಯನ್‌ನ 2023-24 ನೇ ಸಾಲಿನ 21 ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳ ಸುಗಮ ಕಾರ್ಯನಿರ್ವಹಣೆಗೆ ಉತ್ತಮ ತರಬೇತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಹಾಗೂ ಜಿಲ್ಲಾ ಸಹಕಾರ ಒಕ್ಕೂಟ ಕಾಲ, ಕಾಲಕ್ಕೆ ಸಹಕಾರ ಸಂಘಗಳು ಅಳವಡಿಸಿಕೊಳ್ಳಬೇಕಾದ ವಿಷಯಗಳ ಕುರಿತು ಸಂಘಗಳ ಆಡಳಿತ ಮಂಡಳಿಯವರಿಗೆ ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡುತ್ತಾ ಬರುತ್ತಿದೆ ಎಂದರು.
ಜಿಲ್ಲೆಯಲ್ಲಿರುವ ಎಲ್ಲ ಸಹಕಾರ ಸಂಘಗಳು ಒಕ್ಕೂಟದಲ್ಲಿ ಸದಸ್ಯತ್ವ ಪಡೆಯುವುದರ ಮೂಲಕ ಒಕ್ಕೂಟವು ಸ್ವಂತ ಕಟ್ಟಡ ಸಹಕಾರ ಭವನ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, ಜಿಲ್ಲಾ ಸಹಕಾರ ಒಕ್ಕೂಟ ಪ್ರಾರಂಭಗೊಂಡು 21 ವರ್ಷ ತುಂಬುತ್ತಿದ್ದು, ಈ ಅವಧಿಯಲ್ಲಿ ಸಹಕಾರ ಶಿಕ್ಷಣ, ತರಬೇತಿ ಮತ್ತು ಪ್ರಚಾರವನ್ನು ನಿರಂತವಾಗಿ ಮಾಡಿಕೊಂಡು ಬಂದಿದೆ ಎಂದರು.
ಜಿಲ್ಲೆಯ ಎಲ್ಲ ಸಹಕಾರ ಸಂಘಗಳಿಗೆ ಮಾತೃ ಸಂಸ್ಥೆಯಾಗಿ ಸಹಕಾರ ಯೂನಿಯನ್ ಕೆಲಸ ಮಾಡುತ್ತಿದೆ. ಇಂತಹ ಸಂಸ್ಥೆಗೆ ಸ್ವಂತ ಕಟ್ಟಡ ಸಹಕಾರ ಭವನ ನಿರ್ಮಾಣ ಮಾಡಲು ಆಡಳಿತ ಮಂಡಳಿ ಶ್ರಮಿಸುತ್ತಿದೆ. ಇದಕ್ಕೆ ಜಿಲ್ಲೆಯ ಎಲ್ಲ ಸಹಕಾರಿಗಳು ಸಹಕಾರ ನೀಡಬೇಕು. ಇದಕ್ಕಾಗಿ ಜಿಲ್ಲೆಯ ಸಮಸ್ತ ಸಹಕಾರಿಗಳು, ಎಲ್ಲಾ ವಿಧದ ಸಹಕಾರ ಸಂಘಗಳು, ಬ್ಯಾಂಕ್‌ಗಳು ಮಾರ್ಗ ದರ್ಶನ ಹಾಗೂ ಧನ ಸಹಾಯ ಮಾಡಲು ಮನವಿ ಮಾಡಿದರು. ಸಹಕಾರ ಭವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಆಡಳಿತ ಮಂಡಳಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ದೂಡಾದಿಂದ ನಿವೇಶನ ಕೊಡಿಸುವ ಭರವಸೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷ ಬೇತೂರು ಟಿ.ರಾಜಣ್ಣ, ನಿರ್ದೇಶಕ ಎಸ್.ಬಿ.ಶಿವಕುಮಾರ್, ಆರ್.ಜಿ.ಶ್ರೀನಿವಾಸ ಮೂರ್ತಿ, ಡಿಎಂ. ಮುರುಗೇಂದ್ರಯ್ಯ, ಕೆ.ಜಿ.ಸುರೇಶ್, ಎಸ್.ಜಿ.ಪರಮೇಶ್ವರಪ್ಪ, ಶ್ರೀಮತಿ ಅನ್ನಪೂರ್ಣ, ಡಿ.ಶಿವಗಂಗಮ್ಮ, ವೃತ್ತಿಪರ ನಿರ್ದೇಶಕರಾದ ಎಂ.ವಿ.ರಾಜ್, ಎನ್.ಎಂ. ಹಾಲಸ್ವಾಮಿ ಉಪಸ್ಥಿತರಿದ್ದರು. ಕೆ.ಜಿ.ಸುರೇಶ್ ಸ್ವಾಗತಿಸಿದರು.