ಕೋರ್ಟ್ನಲ್ಲಿ ಕೇಸ್ ವಾಪಸ್ ಪಡೆದು ಮಠಕ್ಕೆ ಚರ್ಚೆಗೆ ಬರಲಿ : ತರಳಬಾಳು ಜಗದ್ಗುರುಗಳು
ಸಿರಿಗೆರೆ, ಆ. 5 – ತರಳಬಾಳು ಬೃಹನ್ಮಠ ಸಿರಿಗೆರೆ ಮತ್ತು ಶಾಖಾ ಮಠ ಸಾಣೇಹಳ್ಳಿ ಪೀಠಕ್ಕೆ ಉತ್ತರಾಧಿಕಾರಿಗಳ ನೇಮಕ ಸಂಬಂಧ ದಾವಣಗೆರೆಯಲ್ಲಿ ನಿನ್ನೆ ನಡೆದ ಸಾದರ ಲಿಂಗಾಯತ ಒಕ್ಕೂಟದ ಸಭೆ ಹಿನ್ನೆಲೆಯಲ್ಲಿ ಸಿರಿಗೆರೆಯ ತರಳಬಾಳು ಬೃಹನ್ಮಠದಲ್ಲಿ ಇಂದು ಭಕ್ತರ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ಸೇರಿದ್ದ ಭಕ್ತರು ತರಳಬಾಳು ಬೃಹನ್ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪರ ಘೋಷಣೆಗಳನ್ನು ಹಾಕಿದರಲ್ಲದೇ, ದಾವಣಗೆರೆಯಲ್ಲಿ ನಡೆದ ಸಭೆಗೆ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆಯ ಸಭೆಯನ್ನು ವಿರೋಧಿಸಿ ಶ್ರೀಗಳು ಕರೆ ಕೊಡದಿದ್ದರೂ ಸಮಾಜದ ಮುಖಂಡರ ಕರೆಗೆ ಇಷ್ಟೊಂದು ಸಂಖ್ಯೆಯಲ್ಲಿ ಬಂದಿದ್ದೀವೆ. ಶ್ರೀಗಳು ಯಾರ ಬೆದರಿಕೆಗೂ ಅಂಜಬೇಕಿಲ್ಲ. ಮಠದ ಜತೆ ನಾವಿದ್ದೇವೆ. ನೀವೇ ಮುಂದುವರಿಯಬೇಕು ಎಂದು ಜಗದ್ಗುರುಗಳನ್ನು ಭಕ್ತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಪೀಠಕ್ಕೆ ನಾವು ಅಂಟಿಕೊಂಡು ಕುಳಿತಿಲ್ಲ. ಧರ್ಮ, ಕಾನೂನು ಪಾಲನೆ ಮಾಡುವ ಸಲುವಾಗಿ ನಾನು ಮುಂದುವರೆಯುತ್ತಿದ್ದೇನೆ. ಭಕ್ತರ ಇಚ್ಚೆಯಂತೆ ನಿರ್ಧಾರ ಕೈಗೊಳ್ಳುತ್ತೇವೆ. ಕೆಲವರು ಡೀಡ್ ವಿಚಾರ ಸಂಬಂಧ ಕೋರ್ಟ್ಗೆ ಹೋಗಿದ್ದಾರೆ. ಕೋರ್ಟ್ನಲ್ಲಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಬರಲಿ. ಮುಕ್ತ ಚರ್ಚೆಗೆ ನಾವು ಸದಾ ಸಿದ್ಧರಿದ್ದೇವೆ. ಸಮಾಜ ಮತ್ತು ಸಮುದಾಯಕ್ಕೆ ಒಳಿತಾಗಬೇಕು ಎಂಬುದಷ್ಟೇ ನಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ – ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಮಠದ ಬಗ್ಗೆ ಮೊದಲಿನಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ, ನಿನ್ನೆಯ ಸಭೆಗೆ ಯಾಕೆ ಹೋದರು ಎಂಬುದು ಗೊತ್ತಿಲ್ಲ. ನಮ್ಮ ಬಳಿ ದೂರವಾಣಿಯಲ್ಲಿ ವಿಚಾರ ವಿನಿಮಯ ನಡೆಯುತ್ತಿದ್ದವು. ಆದರೆ ಇದ್ದಕ್ಕಿದ್ದಂತೆ ಈ ರೀತಿ ನಡೆದುಕೊಂಡಿರುವುದು ತಮಗೆ ಬೇಸರ ತರಿಸಿದೆ ಎಂದರು.
ನಾವೇ ಪೀಠದಲ್ಲಿ ಇರಬೇಕೆಂಬ ಆಸೆ ಹೊಂದಿಲ್ಲ. ಕೋರ್ಟ್ನಲ್ಲಿನ ಕೇಸ್ ವಾಪಸ್ ಪಡೆದು ಬರಲಿ. ಎಲ್ಲಾ ವಿಚಾರಗಳ ಕುರಿತಂತೆ ಸಮಾಲೋಚನೆ ನಡೆಸಲಿ. ಮುಕ್ತವಾಗಿ ಚರ್ಚಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳುವುದಕ್ಕೆ ನಮ್ಮ ವಿರೋಧ ಇಲ್ಲ. ಎಲ್ಲೋ ಸಭೆ ಮಾಡಿ ಆರೋಪ ಮಾಡುವುದು ನಿಲ್ಲಬೇಕು. ಮಠಕ್ಕೆ ಬಂದು ಚರ್ಚೆ ಮಾಡಲಿ. ಸಮಾಜದ ಭಕ್ತರ ಆಕ್ರೋಶ ನೋಡಿದರೆ ಭಯ ಆಗುತ್ತದೆ. ಶಾಂತಿಯುತವಾಗಿ ವರ್ತಿಸಿ, ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡಂತೆ ಆಗಬಾರದು ಎಂದು ಜಗದ್ಗುರುಗಳು ಸಲಹೆ ನೀಡಿದರು.
ಮಠದ ಆಡಳಿತ ಸೇರಿ ಎಲ್ಲಾ ಕಾರ್ಯಗಳು ಪಾರದರ್ಶಕವಾಗಿವೆ. ಮಠದಿಂದ ಉಚ್ಚಾಟನೆಯಾದವರು, ಉಪಕಾರ ಪಡೆದು ಮಠಕ್ಕೆ ಕೆಟ್ಟ ಹೆಸರು ತರಲು ಹೊರಟಿದ್ದಾರೆ. ಇಂತಹ ಆರೋಪಕ್ಕೆ ಜಗ್ಗಲ್ಲ, ಬಗ್ಗಲ್ಲ. ನಿಮ್ಮ ಬಳಿ ಏನೇ ಇದ್ದರೂ ಅವ್ಯವಹಾರ ಸಾಕ್ಷಿ ಇದ್ದರೂ, ಸಾಕ್ಷಿ ಸಮೇತ ಮಠಕ್ಕೆ ಬರಲಿ, ಸಮಾಜದವರೆಲ್ಲರೂ ಸೇರಿ ಒಟ್ಟಾಗಿ ಕುಳಿತು ಚರ್ಚಿಸಲಿ. ಅದನ್ನು ಬಿಟ್ಟು ಎಲ್ಲೋ ಸಭೆ ನಡೆಸಿ, ಆರೋಪ ಮಾಡಿದರೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸತ್ಯವಿದ್ದರೆ ಆರೋಪ ಮಾಡಬೇಕು. ಯಾರನ್ನೋ ಮೆಚ್ಚಿಸಲು ಆರೋಪ ಸರಿಯಲ್ಲ ಎಂದು ತಿಳಿಸಿದರು.
ಭಕ್ತರ ಮನವಿ : ನೆರೆದ ಭಕ್ತರು, ನೀವೇ ಮುಂದುವರಿಯಬೇಕು. ಕೊನೆಯ ಉಸಿರು ಇರುವವರೆಗೂ ಪೀಠಾಧಿಪತಿಗಳಾಗಿ ಇರಬೇಕು. ನಿಮ್ಮ ಕೃಪೆಯಿಂದ ಕೆರೆಗಳು ತುಂಬಿ, ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಸಿಕ್ಕಿದೆ. ಯಾವ ಒತ್ತಡಕ್ಕೂ ಜಗ್ಗದೆ ಮಠವನ್ನು ಮುನ್ನಡೆಸಿಕೊಂಡು ಬಂದಿದ್ದೀರಿ. ದಾವಣಗೆರೆಯ ಸಭೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಸದ್ಭಕ್ತರು ನಿಮ್ಮೊಟ್ಟಿಗೆ ಇದ್ದಾರೆ ಎಂದರು.
ನೀವು ಪೀಠ ತ್ಯಜಿಸುವುದಾಗಿ ಹೇಳಿದಾಗಲೂ ನಾವೆಲ್ಲರೂ ಸೇರಿ ನಿಮ್ಮನ್ನೇ ಮುಂದುವರೆಸಿದ್ದೆವು. ಭಕ್ತರ ಪ್ರೀತಿಯ ಒತ್ತಾಯಕ್ಕೆ ಮಣಿದು ಮುಂದುವರೆದಿದ್ದೀರಿ. ಈಗಲೂ ಆತುರದ ನಿರ್ಧಾರ ಬೇಡ ಎಂದು ಮನವಿ ಮಾಡಿದರು.