ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಸ್ವೀಕರಿಸಿದ ಬಸವಲಿಂಗ ಪಟ್ಟದ್ದೇವರು
ಬೀದರ್, ಜು. 29 – ವಿಶ್ವಗುರು ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ನಂಬಿ ಶ್ರದ್ಧೆಯಿಂದ ಆಚರಣೆ ಮಾಡುವವರಿಗೆ ಎಂದಿಗೂ ಬಸವ ರಕ್ಷಣೆ ಸಿಗಲಿದೆ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಇಲ್ಲಿನ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ್ ಮತ್ತು ದಾವಣಗೆರೆ ಜಿಲ್ಲಾ ಘಟಕಗಳು ಹಾಗೂ ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದಿಂದ ಮೊನ್ನೆ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳು ಆಶೀರ್ವಚನ ನೀಡಿದರು.
ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ ಕೊಡಮಾಡುವ 2023ನೇ ಸಾಲಿನ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಯನ್ನು ಸ್ವೀಕರಿಸಿದ ಶ್ರೀಗಳು, ಕಾಯಕ ಮತ್ತು ದಾಸೋಹ ತತ್ವ ಅಳವಡಿಸಿಕೊಂಡು ಶರಣರು ಹೇಳಿದಂತೆ ನಡೆದರೆ ಬಸವಣ್ಣ ನಮಗೆ ಬುಲೆಟ್‌ಪ್ರೂಫ್ ಇದ್ದಂತೆ. ಪ್ರತಿಯೊಬ್ಬರೂ ಶರಣ ಸಾಹಿತ್ಯ ಮೈಗೂಡಿಸಿಕೊಂಡು ಜೀವನ ಸಾಗಿಸಿ ಎಂದು ಕರೆ ನೀಡಿದರು.
ಮಾಗನೂರು ಬಸಪ್ಪನವರ ಸೇವೆ ಮಾದರಿ
ಬಸವ ತತ್ವ ಅಳವಡಿಸಿಕೊಂಡು ಜೀವನ ಸಾಗಿಸಿದ ಮಾಗನೂರು ಬಸಪ್ಪನವರ ಸಮಾಜ ಸೇವೆ ಹಾಗೂ ನೆರವು ಮಾದರಿ. ಹಲವು ಶಾಲಾ-ಕಾಲೇಜು, ಸಂಘ-ಸಂಸ್ಥೆಗಳನ್ನು ಕಟ್ಟಿದ ಬಸಪ್ಪ ಅವರು, ದಾವಣಗೆರೆಯ `ಮಹಾತ್ಮ ಗಾಂಧಿ’ ಎಂದೇ ಖ್ಯಾತಿ ಹೊಂದಿದ್ದರು. ಬಡತನದಲ್ಲಿ ಬೆಳೆದ ಬಸಪ್ಪನವರು, ವಿವಿಧ ಉದ್ಯಮ ಆರಂಭಿಸಿ, ಹಲವರಿಗೆ ನೆರವಾದರು. ಅವರ ಗಟ್ಟಿತನದ ವ್ಯಕ್ತಿತ್ವ ಎಲ್ಲರಿಗೂ ಮಾದರಿ.
-ಡಾ.ಎಚ್.ಎಸ್. ಮಂಜುನಾಥ ಕುರ್ಕಿ, ನಿಕಟಪೂರ್ವ ಜಿಲ್ಲಾಧ್ಯಕ್ಷರು, ಕಸಾಪ, ದಾವಣಗೆರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಾವಣಗೆರೆ ಬಿಟ್ಟು ಮೊದಲ ಸಲ ಬೇರೆಡೆ ಆಯೋಜಿಸಿದ್ದು ಇಲ್ಲಿ. ಭಾಲ್ಕಿ ಪೂಜ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು ಬಹಳಷ್ಟು ಸಂತಸ ತಂದಿದೆ. ಶ್ರೀಗಳ ಸೇವಾ ಕಾರ್ಯ ಅಮೋಘ. ಅವರ ಬಸವ ತತ್ವ ಪಾಲನೆ ನಮಗೆಲ್ಲ ಮಾದರಿಯಾಗಿದೆ.
– ಎಂ.ಬಿ. ಸಂಗಮೇಶ್ವರ ಗೌಡರು, ಅಧ್ಯಕ್ಷರು, ಮಾಗನೂರು ಬಸಪ್ಪ ಪ್ರತಿಷ್ಠಾನ
ವ್ಯಾಸಂಗಕ್ಕಾಗಿ ಮಠಕ್ಕೆ ಬಂದು ಪೀಠಾಧಿಪತಿಯಾದೆ
ಶಿಕ್ಷಣ, ವಸತಿ ಸೌಲಭ್ಯಕ್ಕಾಗಿ ಭಾಲ್ಕಿ ಹಿರೇಮಠ ಸಂಸ್ಥಾನಕ್ಕೆ ಬಂದೆ. ವ್ಯಾಸಂಗ ಪೂರ್ಣಗೊಳಿಸಿ ನೌಕರಿ ಮಾಡುವ ಗುರಿ ಇತ್ತು. ಆದರೆ ಆಗಿದ್ದು ಮಠಾಧೀಶ… ತಮ್ಮ ಜೀವನದ ಹಳೆಯ ದಿನಗಳನ್ನು ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮೇಲುಕು ಹಾಕಿದರು.
ಭಾಲ್ಕಿ ಮಠಕ್ಕೆ ಬಂದಿದ್ದು ಯಾವ ಕಾರಣಕ್ಕೆ? ಭವಿಷ್ಯದ ಉದ್ದೇಶವೇನು ಎಂಬಿತ್ಯಾದ ವಿಷಯಗಳನ್ನು ಪೂಜ್ಯರು ತಮ್ಮ ಭಾಷಣದಲ್ಲಿ ಹಂಚಿಕೊಂಡರು. ಮನೆಯಲ್ಲಿ ಬಹಳ ಬಡತನ ಇದ್ದುದರಿಂದ ವ್ಯಾಸಂಗಕ್ಕಾಗಿ ಭಾಲ್ಕಿ ಮಠಕ್ಕೆ ಬಂದೆ. ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ನನಗೆ ಮಠದಲ್ಲಿ ಪ್ರವೇಶ ನೀಡಿದರು. ಅಲ್ಲಿ ಕೆಲಸ ಮಾಡಿಕೊಂಡು ಶಿಕ್ಷಣ ಕಲಿತೆ. ನನ್ನಲ್ಲಿನ ಧಾರ್ಮಿಕ ಭಾವನೆಗಳನ್ನು ಕಂಡು, ಪೂಜ್ಯರ ಕಣ್ಣು ಬಿತ್ತು. ಭವಿಷ್ಯದಲ್ಲಿ ಏನು ಮಾಡುವೆ ಎಂದು ಪೂಜ್ಯರು ಕೇಳಿದರು. ನೌಕರಿಯೊಂದಿಗೆ ಬಸವ ತತ್ವ ಪ್ರಸಾರ ಮಾಡುವುದು ನನ್ನ ಉದ್ದೇಶ ಎಂದು ಹೇಳಿದೆ. ಈ ಮಠದ ಪೀಠಾಧಿಪತಿಯಾಗು ಎಂದರು. ಆಗ ಪೂರ್ವಾಶ್ರಮದ ತಾಯಿ ಮತ್ತು ಮನೆಯವರು ಬಹಳಷ್ಟು ದುಃಖಪಟ್ಟರು. ಮಠಾಧೀಶನಾಗಲು ವಿರೋಧ ಮಾಡಿದರು. ಆದರೆ ಗಟ್ಟಿ ನಿರ್ಧಾರ ಮಾಡಿ ಮಠಾಧೀಶನಾಗಲು ಒಪ್ಪಿದೆ. ಶಿಕ್ಷಣಕ್ಕಾಗಿ ಬಂದು ಮಠಾಧೀಶನಾದೆ ಎಂದು ಹೇಳಿದರು.
ತಾನು ಚಿಕ್ಕವನಿದ್ದಾಗ ಬಹಳ ದೈವ ಭಕ್ತನಾಗಿದ್ದೆ. ಪ್ರತಿ ಶನಿವಾರ ಹನುಮಾನ್ ಮಂದಿರಕ್ಕೆ ಹೋಗುತ್ತಿದ್ದೆ. ಪ್ರೌಢ ಶಾಲೆಯಲ್ಲಿದ್ದಾಗ ಔರಾದ್‌ನಲ್ಲಿ ಶ್ರೀ ಲಿಂಗಾನಂದ ಸ್ವಾಮೀಜಿ ಪ್ರವಚನ ನೀಡಿದರು. ಒಂದು ರಾತ್ರಿ ಪೂಜ್ಯರ ಪ್ರವಚನ ಕೇಳಿದ ನಂತರ ನಾನು ಬಸವ ತತ್ವದ ಕಡೆ ವಾಲಿದೆ. ಬಹುದೇವರ ಸ್ಮರಣೆ ಬಿಟ್ಟು ಇಷ್ಟಲಿಂಗವೇ ಸರ್ವಸ್ವ ಮಾಡಿಕೊಂಡೆ. ಬಸವ ಗುರು ಕೃಪೆ, ಡಾ.ಚನ್ನಬಸವ ಪಟ್ಟದ್ದೇವರು ಮಾರ್ಗದರ್ಶನದಲ್ಲಿ ಬಸವ, ಮಠದ ಸಂಸ್ಕೃತಿ ಕಡೆ ಬಂದಿರುವೆ ಎಂದು ಹೇಳಿದರು.
ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಡಾ.ಗೀತಾ ಈಶ್ವರ ಖಂಡ್ರೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಡಾ. ಶಿವಾನಂದ ಸ್ವಾಮೀಜಿ ಹುಲಸೂರು, ಪೂಜ್ಯ ಡಾ. ಗಂಗಾಂಬಿಕೆ ಅಕ್ಕ, ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ, ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂಗಮೇಶ್ವರ ಗೌಡರು ಅಧ್ಯಕ್ಷತೆ ವಹಿಸಿದ್ದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಆಶಯ ನುಡಿ, ಕರ್ನಾಟಕ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ್ ಅಭಿನಂದನಾ ನುಡಿ ಭಾಷಣ ಮಾಡಿದರು. ಬೀದರ್ ವಿವಿ ಕುಲಪತಿ ಪ್ರೊ.ಬಿ.ಎಸ್. ಬಿರಾದಾರ್, ಕಸಾಪ ದಾವಣಗೆರೆ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಡಾ.ಎಚ್.ಎಸ್. ಮಂಜುನಾಥ ಕುರ್ಕಿ, ಪ್ರಮುಖರಾದ ಬಿ.ಜಿ. ಶೆಟಕಾರ, ಸೋಮಶೇಖರ ಪಾಟೀಲ್ ಗಾದಗಿ, ರಾಜೇಂದ್ರಕುಮಾರ ಗಂದಗೆ, ಶರಣಪ್ಪ ಮಿಠಾರೆ, ಬಸವರಾಜ ಧನ್ನೂರ, ಜಯರಾಜ ಖಂಡ್ರೆ, ಬಸವರಾಜ ಬುಳ್ಳಾ, ಎಂ.ಎಸ್. ಮನೋಹರ, ಶ್ರೀಕಾಂತ ಸ್ವಾಮಿ, ಶಿವಶಂಕರ ಟೋಕರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.