ಡೆಂಗ್ಯೂ ಕಾಯಿಲೆ ಬಗ್ಗೆ ಭಯ ಬೇಡ, ಜಾಗೃತಿ ವಹಿಸಿ

ಡೆಂಗ್ಯೂ ಕಾಯಿಲೆ ಬಗ್ಗೆ ಭಯ ಬೇಡ, ಜಾಗೃತಿ ವಹಿಸಿ

ಮಲೇಬೆನ್ನೂರಿನ ಡೆಂಗ್ಯೂ ಜಾಗೃತಿ ಸಭೆಯಲ್ಲಿ ಟಿಹೆಚ್ಓ ಡಾ. ಖಾದರ್

ಮಲೇಬೆನ್ನೂರು, ಜು.10- ಡೆಂಗ್ಯೂ ಕಾಯಿಲೆ ಬಗ್ಗೆ ಭಯಬೇಡ. ಆದರೆ, ಜಾಗೃತಿ ಬಹಳ ಮುಖ್ಯ ಎಂದು ಟಿಹೆಚ್ಓ ಡಾ. ಅಬ್ದುಲ್ ಖಾದರ್ ಹೇಳಿದರು.

ಪಟ್ಟಣದ ಪುರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಡಯೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ತಡೆಗಟ್ಟುವ ಕುರಿತು ಇಂದು ಹಮ್ಮಿಕೊಂಡಿದ್ದ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಳೆಗಾಲ ಬಂದಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಎಲ್ಲರೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನೀರು ಸಂಗ್ರಹ ಮಾಡುವ ತೊಟ್ಟಿ, ಡ್ರಮ್ ಇತ್ಯಾದಿಗಳನ್ನು ಹಾಗಾಗ ಸ್ವಚ್ಛ ಮಾಡಬೇಕು. ನೀರು ಇದ್ದಾಗ ಮುಚ್ಚಬೇಕು. ಪುರಸಭೆಯಿಂದ ಪಟ್ಟಣದಲ್ಲಿ ಫಾಗಿಂಗ್ ಮಾಡಿಸಬೇಕೆಂದು ಡಾ. ಖಾದರ್ ತಿಳಿಸಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ಅವರು, ಪಟ್ಟಣದಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ ಕುರಿತು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿ, ಈಗಾಗಲೇ 2ನೇ ಹಂತದ ಫಾಗಿಂಗ್ ಮಾಡಲಾಗಿದೆ. ಡೆಂಗ್ಯೂ ಕುರಿತು ಕರಪತ್ರಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ ಎಂದರು.

ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ ಮಾತನಾಡಿ, ಡೆಂಗ್ಯೂ ಉಲ್ಬಣಗೊಳ್ಳುತ್ತಿದ್ದು, ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಡೆಂಗ್ಯೂ ಜ್ವರ ಕೋವಿಡ್‌ಗಿಂತ ಅಪಾಯಕಾರಿಯಾಗಿದ್ದು, ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಹಾಗಾಗಿ ಯಾವುದೇ ಜ್ವರ ಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆದುಕೊಳ್ಳಿ ಮತ್ತು 3-4 ದಿನಗಳ ನಂತರವೂ ಜ್ವರ ಇದ್ದರೆ, ರಕ್ತ ಪರೀಕ್ಷೆ ಮಾಡಿಸಿ ಎಂದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಲಕ್ಷ್ಮಿದೇವಿ ಮಾತನಾಡಿ, ಡೆಂಗ್ಯೂ, ಚಿಕನ್ ಗುನ್ಯಾ ರೋಗಗಳ ಲಕ್ಷಣಗಳನ್ನು ತಿಳಿಸಿ, ಯಾವ ಸೊಳ್ಳೆಯಲ್ಲಿ ವೈರಸ್ ಇದೆ ಎಂದು ಗುರುತಿಸಲು ಆಗಲ್ಲ. ಹಾಗಾಗಿ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಸೊಳ್ಳೆ ಕಚ್ಚದಂತೆ ನೋಡಿಕೊಳ್ಳಿ ಎಂದರು.

ಡೆಂಗ್ಯೂ ಸೊಳ್ಳೆ ಶುದ್ಧ ನೀರಿನಲ್ಲಿ ಬೆಳೆದರೆ, ಮಲೇರಿಯಾ ಸೊಳ್ಳೆ ಕೊಳಚೆ ನೀರಿನಲ್ಲಿ ಬೆಳೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸ್ವಚ್ಛತೆಗೆ ಒತ್ತು ನೀಡಬೇಕು. ಡೆಂಗ್ಯೂ ಜ್ವರ ಹರಡುವ ಕಾಯಿಲೆ ಆಗಿರುವುದರಿಂದ ಅದನ್ನು ಆರಂಭದಲ್ಲೇ ಗುಣಪಡಿಸಿಕೊಳ್ಳಬೇಕು. 

ಜ್ವರ ಬಂದರೆ ರಕ್ತ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಮನೆಯಲ್ಲಿ ವಾರಕ್ಕೆ ಒಂದು ದಿನ ಡ್ರೈಡೇ ಮಾಡಿ, ಮನೆಯಲ್ಲಿ ಸಂಗ್ರಹಿಸುವ ಎಲ್ಲಾ ನೀರನ್ನು ಸ್ವಚ್ಛ ಮಾಡಿ, ಪುನಃ ನೀರನ್ನು ತುಂಬಿಸಿಕೊಳ್ಳಿ ಎಂದು ಡಾ. ಲಕ್ಷ್ಮಿದೇವಿ ಹೇಳಿದರು.

ಉಪತಹಶೀಲ್ದಾರ್ ಆರ್.ರವಿ ಮಾತನಾಡಿ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಮುದಾಯ ಸಹಭಾಗಿತ್ವ ಮುಖ್ಯ ಎಂದರು.

ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ನಯಾಜ್, ಸಾಬೀರ್ ಅಲಿ, ಬಿ.ವೀರಯ್ಯ, ಭೋವಿ ಕುಮಾರ್, ಯುಸೂಫ್ ಮತ್ತಿತರರು ಮಾತನಾಡಿ, ಡೆಂಗ್ಯೂ ತಡೆಗಟ್ಟಲು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಪುರಸಭೆ ಸದಸ್ಯರಾದ ಬಿ.ಮಂಜುನಾಥ್, ಷಾ ಅಬ್ರಾರ್, ಬೆಣ್ಣೆಹಳ್ಳಿ ಸಿದ್ದೇಶ್, ಭೋವಿ ಶಿವು, ಟಿ.ಹನುಮಂತಪ್ಪ, ಶಬ್ಬೀರ್ ಖಾನ್, ಎ.ಆರೀಫ್ ಅಲಿ, ಬುಡ್ಡವರ್ ರಫೀಕ್ ಸಾಬ್, ಬಸವರಾಜ್ ದೊಡ್ಮನಿ, ಕೆ.ಪಿ.ಗಂಗಾಧರ್, ಚಮನ್ ಷಾ, ಎಂ.ಬಿ.ರುಸ್ತುಂ, ಪುರಸಭೆ ಅಧಿಕಾರಿಗಳಾದ ದಿನಕರ್, ನವೀನ್, ಶಿವರಾಜ್ ಮತ್ತಿತರರು ಸಭೆಯಲ್ಲಿದ್ದರು.

error: Content is protected !!