ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಿದ ಜಿಲ್ಲಾಧಿಕಾರಿ ವೆಂಕಟೇಶ್
ದಾವಣಗೆರೆ, ಜೂ.21- ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸುವ ಜೊತೆಗೆ ಗ್ರಾಮದಲ್ಲಿ ಶಿಥಿಲಾವಸ್ಥೆ ತಲುಪಿರುವ ಸರ್ಕಾರಿ ಶಾಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ ಸೂಚಿಸಿದರು.
ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಹಿಂದೆ ಸಭೆಯಲ್ಲಿ ಚರ್ಚಿ ಸಲಾಗಿದ್ದ ಜಗಳೂರು ತಾಲ್ಲೂಕು ಮೂಡಲ ಮಾಚಿಕೆರೆ ಗ್ರಾಮದಲ್ಲಿ ಮನೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಪೈಪ್ ಲೈನ್ ವ್ಯವಸ್ಥೆ ಮಾಡಿದ್ದು, ಗಾಮದಲ್ಲಿನ ಮನೆಗಳಿಗೆ ಅಳವಡಿಸಿರುವ ನಲ್ಲಿಗಳಲ್ಲಿ ನೀರಿನ ಜೊತೆ ಚರಂಡಿ ನೀರು ಸಹಾ ಬರುತ್ತಿರುವ ವಿಚಾರವಾಗಿ ಕೆಲವು ಜಾಗಗಳಲ್ಲಿ ಪೈಪ್ ಲೈನ್ ಒಡೆದು ಹೋಗಿರುವುದನ್ನು ಈಗಾಗಲೇ ಗ್ರಾಮ ಪಂಚಾಯಿ ತಿಯಿಂದ ದುರಸ್ತಿಗೊಳಿಸಿ ಕುಡಿಯುವ ನೀರನ್ನು ಸರ ಬರಾಜು ಮಾಡಲಾಗಿರುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರು ತಿಳಿಸಿದರು.
ನಲ್ಲಿಗಳಲ್ಲಿ ನೀರಿನ ಜೊತೆ ಚರಂಡಿ ನೀರು ಇನ್ನೂ ಕೂಡ ನಿವಾರಣೆಯಾಗಿರುವುದಿಲ್ಲ ಎಂಬ ವಿಚಾರವನ್ನು ತಿಳಿಸಿದರು. ಜಿಲ್ಲಾಧಿಕಾರಿ ಮಾತಾನಾಡಿ, ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯ ಅನುದಾನದಲ್ಲಿ ಹೊಸ ಪೈಪ್ ಲೈನ್ ಅಳವಡಿಸುವಂತೆ ಕಾರ್ಯಪಾಲಕ ಇಂಜಿನಿಯರ್ ಗೆ ಸೂಚಿಸಿದರು.
ಜಗಳೂರು ತಾಲ್ಲೂಕಿನ ಕೆರೆಯ ಹಿಂಭಾಗದಲ್ಲಿ ಸುಮಾರು ವರ್ಷಗಳಿಂದ 30 ರಿಂದ 40 ಕೊರಚ ಸಮುದಾಯದ ಕುಟುಂಬಗಳು ವಾಸವಿದ್ದು, ಅತಿಯಾದ ಮಳೆಯ ಕಾರಣ ಗುಡಿಸಲುಗಳು ಹಾಳಾಗಿವೆ, ಪಟ್ಟಣ ಪಂಚಾಯಿತಿಯ ಆದೇಶದ ಮೇರೆಗೆ ಬಸ್ ಸ್ಟ್ಯಾಂಡ್ ಬಳಿ ಇರುವ ಮಳಿಗೆಗಳಲ್ಲಿ ವಾಸಿಸಲು ಅವಕಾಶ ಮಾಡಿಕೊಡಬೇಕು. ಆದರೆ ಇತ್ತೀಚೆಗೆ 53 ಮಳಿಗೆಗಳ ಹರಾಜು ಆದಕಾರಣ ಗುಡಿಸಲುಗಳನ್ನು ಕಳೆದುಕೊಂಡು ಮಳಿಗೆಗಳಲ್ಲಿ ವಾಸವಿದ್ದ ಕುಂಟುಂಬಗಳಿಗೆ ಯಾವುದೇ ರೀತಿಯ ವ್ಯವಸ್ಥೆ ಮಾಡದೇ, ಖಾಲಿ ಮಾಡಲು ಸೂಚಿಸಿರುವ ವಿಚಾರ ಪ್ರಸ್ತಾಪಿಸಿದಾಗ ಜಿಲ್ಲಾಧಿಕಾರಿಗಳು ಕುಟುಂಬಗಳಿಗೆ ಬೇರೆ ಕಡೆ ವಾಸಿಸಲು ಅವಕಾಶ ಕಲ್ಪಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
ಹರಿಹರ ನಗರದಲ್ಲಿರುವ ಡಿ.ಆರ್.ಎಂ ಶಾಲೆಯ ಕಾಂಪೌಂಡ್ ಶಿಥಿಲ ಸ್ಥಿತಿಯಲ್ಲಿದ್ದು ದುರಸ್ತಿ ಮಾಡುವ ವಿಚಾರವಾಗಿ ಹರಿಹರ ನಗರಸಭೆ ಇವರು ನಗರದಲ್ಲಿರುವ ಡಿ.ಆರ್.ಎಂ. ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗಿ ಈ ಶಾಲೆಗೆ ಹೊಸದಾಗಿ ಕಾಂಪೌಂಡ್ ನಿರ್ಮಾಣಕ್ಕೆ ಅಂದಾಜು 15 ಲಕ್ಷಗಳು ಅವಶ್ಯಕತೆ ಇದ್ದು, ಹರಿಹರ ನಗರಸಭೆಯಿಂದ ನಿರ್ಮಾಣ ಮಾಡಲು ಅನುದಾನದ ಕೊರತೆ ಇರುವುದರಿಂದ ಸರ್ಕಾರಕ್ಕೆ ಅನುದಾನ ಬಿಡುಗಡೆಗಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ದಾವಣಗೆರೆ ಜಿಲ್ಲೆಯ ಜಗಳೂರು ಬಸ್ ಸ್ಟಾಂಡ್, ಎ.ಪಿ.ಎಂ.ಸಿ ಹಾಗೂ ಗೋಶಾಲೆ ಬಳಿ ಎಸ್.ಸಿ, ಎಸ್.ಟಿ ಸಮುದಾಯದವರು ಗುಡಿಸಲುಗಳಲ್ಲಿ ವಾಸವಿದ್ದು ಅವರಿಗೆ ಶೌಚಾಲಯ ನಿರ್ಮಿಸಿಕೊಡವ ವಿಷಯವನ್ನು ತಿಳಿಸಿದಾಗ ಜಿಲ್ಲಾಧಿಕಾರಿಗಳು ಶೌಚಾಲಯ ಅಥವಾ ಸುಲಭ ಶೌಚಾಲಯಗಳನ್ನು ನಿರ್ಮಿಸಿ ಕೊಡಲು ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಇವರಿಗೆ ಸೂಚಿಸಿದರು.
ಹರಿಹರ ನಗರಸಭೆಯಿಂದ ವಿವಿಧ ಕಾಮಗಾರಿಗಳಿಗೆ ಇ-ಪ್ರಕ್ಯೂರ್‌ಮೆಂಟ್ ಕರೆಯಲಾಗಿದ್ದು ಉದ್ದೇಶ ಪೂರ್ವಕವಾಗಿ ಟೆಂಡರ್ ನಲ್ಲಿ ಪರಿಶಿಷ್ಟ ಜಾತಿ,ಪ. ಪಂಗಡದವರಿಗೆ ಮೀಸಲಿಟ್ಟಿದ್ದ ಟೆಂಡರ್ ಗಳನ್ನು ರದ್ದು ಮಾಡಿರುತ್ತಾರೆಂದು ಪ್ರಸ್ತಾಪಿಸಿದಾಗ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ತಾಂತ್ರಿಕ ತೊಂದರೆಗಳನ್ನು ಹೊರತುಪಡಿಸಿ ಯಾವುದೇ ದುರುದ್ದೇಶದಿಂದ ಪ.ಜಾ, ಪ.ಪಂಗಳಿಗೆ ಮೀಸಲಿಟ್ಟ ಟೆಂಡರ್ ಗಳನ್ನು ರದ್ದು ಪಡಿಸಲಾಗಿರುವುದಿಲ್ಲ ಎಂದು ಪೌರಾಯುಕ್ತರು ವರದಿ ನೀಡಿರುತ್ತಾರೆ ಎಂದರು.
ಹಾಸ್ಟೆಲ್ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಎಲ್ಲಾ ಇಲಾಖೆಗಳಿಂದ ಹೆಚ್ಚು ಹಾಸ್ಟೆಲ್‌ಗಳಿಗೆ ನಿವೇಶನ ಮಂಜೂರು ಮಾಡಬೇಕೆಂದರು. ಸಮಾಜದ ಬದಲಾವಣೆಗೆ ಶಿಕ್ಷಣ ಪ್ರಮುಖವಾಗಿದ್ದು ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ, ಪ.ಪಂಗಡದ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶಕ್ಕೆ ಬಂದಾಗ ನಿರಾಕರಣೆ ಮಾಡದೇ ಪ್ರವೇಶ ಕಲ್ಪಿಸಲಾಗಿದೆ. ಪ್ರತಿ ಗ್ರಾಮದಲ್ಲಿಯು ಸ್ಮಶಾನ ಇದ್ದು ಇದನ್ನು ಅಭಿವೃದ್ದಿ ಮಾಡುವ ಮೂಲಕ ಲ್ಯಾಂಡ್ ಬೀಟ್ ಮಾಡಲಾಗುತ್ತದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೆ.ನಾಗರಾಜ, ಡಿಡಿಪಿಐ ಕೊಟ್ರೇಶ್, ಪರಿಶಿಷ್ಟ ವರ್ಗ ಗಳ ಅಧಿಕಾರಿ ಬೇಬಿ ಸುನೀತಾ ಹಾಗೂ ಕಿರುವಾಡಿ ಮಂಜುನಾಥ, ಬಾಬಣ್ಣ ಉಪಸ್ಥಿತರಿದ್ದರು.