ಕನ್ನಡಕ್ಕೆ ಬೇಕು ವಿಭಿನ್ನ ಆಯಾಮದ ಲಿಪಿ ರಚನೆ

ಕನ್ನಡಕ್ಕೆ ಬೇಕು ವಿಭಿನ್ನ ಆಯಾಮದ ಲಿಪಿ ರಚನೆ

ದೃಶ್ಯಕಲಾ ವಿವಿಯಲ್ಲಿ `ಅಕ್ಷರ ಸಿಂಗಾರೋತ್ಸವ’, ಅಕ್ಷರ ಕಲಾಕೃತಿಗಳ ಆಕರ್ಷಕ ಪ್ರದರ್ಶನ..!

ಕಲಾ ವಿದ್ಯಾರ್ಥಿಗಳು ಎಲ್ಲ ರೂಪದ ಕಲೆಗಳಿಗೆ ಪ್ರಾಶಸ್ತ್ಯ ನೀಡುವ ಜತೆಗೆ ಯಶಸ್ವಿ ಕಲಾವಿದರಾಗಬೇಕು.

– ಪ.ಸ. ಕುಮಾರ್‌, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ


ದಾವಣಗೆರೆ, ಜೂ.16- ಕನ್ನಡದ ಲಿಪಿಯನ್ನು ಬೇರೆ-ಬೇರೆ ಆಯಾಮಗಳ ಮೂಡಿಸುವುದು ವಿಶೇಷ ಕಲೆಯಾಗಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ. ಕುಮಾರ್‌ ಹೇಳಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ `ಅಕ್ಷರ ಸಿಂಗಾರೋತ್ಸವ’ದಲ್ಲಿ `ಕನ್ನಡ ಅಕ್ಷರ ಕಲಾಕೃತಿಗಳ ಪ್ರದರ್ಶಿಸಿ, ಅಕ್ಷರ ಮೂಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಕ್ಕೆ ಗ್ರಾಫಿಕಲ್‌ ಕ್ಯಾರಕ್ಟರ್‌ ತರಲು 40 ವರ್ಷಗಳ ಹಿಂದೆಯೇ ಪ್ರಯತ್ನ ಮಾಡಲಾಗಿದೆ. ಆದರೆ ಇಂದಿನವರಲ್ಲಿ ಕನ್ನಡಾಕ್ಷರ ಕಲಾಕೃತಿಗಳಲ್ಲಿ ಹೊಸತನದ ಕಾಳಜಿ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಕ್ಷರಗಳ ವಿನ್ಯಾಸದಲ್ಲಿ ಹಿರಿಯ ಕಲಾವಿದ ರಮೇಶ್ ಅವರು ಪದಗಳಲ್ಲಿ ಭಾವ ತುಂಬುವಂತಹ ಹೊಸತನ ಸೃಷ್ಟಿಸಿದ್ದರು ಹಾಗೂ ಕನ್ನಡ ಪತ್ರಿಕಾ ರಂಗದಲ್ಲಿ ಅಕ್ಷರಗಳ ಮೂಲ ಪಾತ್ರ ಬದಲಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಕಲಾಕೃತಿ ಅಕ್ಷರಗಳ ಚರಿತ್ರೆ ಉಳಿಸಲು ಅಕಾಡೆಮಿಯ ಪಾತ್ರ ಬಹುಮುಖ್ಯ. ಆದ್ದರಿಂದ ಇಂತಹ ಕಲೆಯ ಜೀವಂತಿಕೆಗಾಗಿ ಕಲೆಯ ಕುರಿತಾದ ದೃಶ್ಯ ಸುರುಳಿಗಳನ್ನು ಅಕಾಡೆೆಮಿಗಳಿಗೆ ಕೊಡುಗೆ ನೀಡಬೇಕಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ ಮುರಿಗೇಂದ್ರಪ್ಪ ಮಾತನಾಡಿ, ದೃಶ್ಯ ಕಲಾ ಮಹಾವಿದ್ಯಾಲಯಕ್ಕೆ ಒಳ್ಳೆಯ ಇತಿಹಾಸವಿದೆ. ಆದ್ದರಿಂದ ವಿದ್ಯಾರ್ಥಿಗಳು ಜವಾಬ್ದಾರಿಯಿಂದ ಕಲಾ ಮಾಧ್ಯಮವನ್ನು ಉಳಿಸಿ ಎಂದು ಹೇಳಿದರು.

ಕಲೆ ಯಾರಿಗೂ ಒಲಿಯುವುದಿಲ್ಲ. ಆದ್ದರಿಂದ ಕಲಿತ ವಿದ್ಯೆಯನ್ನು ಮತ್ತೊಬ್ಬರಿಗೆ ಹೇಳಿ ಕೊಡುವ ಪರಿಪಾಠ ಬೆಳೆಸಿಕೊಳ್ಳುವಂತೆ ಕಲಾ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.

ಕಾಲೇಜಿನ ಪ್ರಾಚಾರ್ಯ ಡಾ. ಜಯರಾಜ್‌ ಎಂ. ಚಿಕ್ಕಪಾಟೀಲ್‌ ಪ್ರಾಸ್ತಾವಿಕ ಮಾತನಾಡಿ, ಅಕ್ಷರ ಕೇವಲ ಸಂಕೇತವಲ್ಲ ಭಾವಾರ್ಥ ನೀಡುತ್ತದೆ ಎಂದ ಅವರು, 1970ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕನ್ನಡ ಅಕ್ಷರಗಳಲ್ಲಿ ಮುದ್ರಣ ಪುಸ್ತಕ ಸಿಕ್ಕಿತ್ತು ಎಂದು ಹೇಳಿದರು. ಕನ್ನಡದಲ್ಲಿ ಅಕ್ಷರಗಳ ಇತಿಹಾಸ ಅಭೂತಪೂರ್ವವಾಗಿದೆ. ಈ ಭಾಷೆಯಲ್ಲಿ ಮೊದಲಿಗೆ ಚಿತ್ರಲಿಪಿ ಹಾಗೂ ಭಾವಲಿಪಿ ರಚನೆಯಾದವು ಎಂದು ತಿಳಿಸಿದರು.

ಈ ವೇಳೆ ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಕುಮಾರ್‌ ಪಿ. ವಲ್ಲೇಪುರೆ, ಹಿರಿಯ ಪತ್ರಕರ್ತ ಬಾ.ಮ ಬಸವರಾಜಯ್ಯ, ದತ್ತಾತ್ರೇಯ ಎನ್‌. ಭಟ್‌, ಹಿರಿಯ ಕಲಾವಿದ ಮಹಾಲಿಂಗಪ್ಪ ಮತ್ತು ಕಲಾವಿದರು ಇದ್ದರು. ಟಿ.ಬಿ. ಕೋಡಿಹಳ್ಳಿ ಸ್ವಾಗತಿಸಿದರು. ಶಾರದಾ ಪ್ರಾರ್ಥನೆ ಮಾಡಿದರು.

error: Content is protected !!