ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಹರೀಶ್

ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಹರೀಶ್

ಎಸ್ಸೆಸ್‌ ಋಣ ತೀರಿಸಲು ಯಡಿಯೂರಪ್ಪ ಮತ್ತು ಅವರ ಪುತ್ರ ಷಡ್ಯಂತ್ರ

ದಾವಣಗೆರೆ.ಜೂ.9- ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ರಾಜ್ಯ ಬಿಜೆಪಿ ನಾಯಕರ ಷಡ್ಯಂತ್ರವೇ ಕಾರಣ ಎಂದು  ಹರಿಹರ ಶಾಸಕ ಬಿ.ಪಿ.ಹರೀಶ್ ಆರೋಪಿಸಿದ್ದಾರೆ. 

ಬಿಜೆಪಿ ಜಿಲ್ಲಾ ಘಟಕದಿಂದ ಮುಖಂಡರು, ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹಿಂದೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ಕೂಗು ಬಂದಾಗ,  ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಬಲವಾಗಿ ವಿರೋಧಿಸಿ,  ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದರು. ಶಿವಶಂಕರಪ್ಪ ಅವರ ಋಣ ತೀರಿಸಲು ಯಡಿಯೂರಪ್ಪ ಹಾಗೂ ಅವರ ಪುತ್ರ ಷಡ್ಯಂತ್ರ ನಡೆಸಿದ್ದಾರೆ ಎಂದರು.

ಈ ಸತ್ಯ ಹೇಳದಿದ್ದರೆ ಸಿದ್ದೇಶ್ವರ ಅವರಿಗೆ ದ್ರೋಹ ಮಾಡಿದಂತಾಗುತ್ತದೆ. ಸತ್ಯ ಹೇಳಿದರೆ ನನಗೆ ರಾಜಕೀಯವಾಗಿ ತೊಂದರೆ ಮಾಡಬಹುದು. ಆದರೆ ನಾನು ಹೋರಾಟದಿಂದಲೇ ಬೆಳೆದವನು ಇಂತಹದ್ದನ್ನೆಲ್ಲ ಎದುರಿಸಲು ಸಿದ್ದನಿದ್ಧೇನೆ ಎಂದರು.  

ಪಕ್ಷದಿಂದ ಉಚ್ಛಾಟಿತರಾದ ಗುರುಸಿದ್ದನ ಗೌಡ್ರು, ಅವರ ಪುತ್ರ ರವಿಕುಮಾರ್ ಸೇರಿದಂತೆ ಬಂಡಾಯ ಎದ್ದಿದ್ದವರ ಜೊತೆ ವಿಜಯೇಂದ್ರ ಪಕ್ಷದ ಕಚೇರಿಯಲ್ಲಿಯೇ ಸಭೆ ನಡೆಸಿದ್ದರು. ಅದನ್ನು ಸಿದ್ದೇಶ್ವರ ಪ್ರಶ್ನಿಸಿದ್ದಾಗ, ಈಗಾಗಲೇ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದರು. ಈ ವೇಳೆ ವಿಜಯೇಂದ್ರ ದೌರ್ಜನ್ಯದ ರೀತಿ ವರ್ತಿಸಿದರೂ, ಯಡಿಯೂರಪ್ಪ ಮೌನ ವಹಿಸಿದ್ದರು. 

ಬೆಳಿಗ್ಗೆ ಪಕ್ಷಕ್ಕೆ ಸೇರ್ಪಡೆಯಾದವರು ಸಂಜೆ ದೆಹಲಿಗೆ ಹೋಗಿ ಜಿ.ಎಂ.ಸಿದ್ದೇಶ್ವರ ಹೊರಗಿನವರು ಅವರಿಗೆ ಟಿಕೆಟ್ ಕೊಡಬಾರದು ಎಂದು ಪ್ರೆಸ್‍ ಮೀಟ್ ಮಾಡುತ್ತಾರೆ. ಇದರ ಅರ್ಥ ಇವರ ಹಿಂದೆ ವಿಜಯೇಂದ್ರ, ಯಡಿಯೂರಪ್ಪ ಇದ್ದಾರೆ ಎಂದು ಅರ್ಥ ಅಲ್ವಾ? ಎಂದು ಹರೀಶ್ ಪ್ರಶ್ನಿಸಿದರು.

ಹೀಗೆ ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ? ಪಕ್ಷಕ್ಕಾಗಿ ದುಡಿದ ನಿಷ್ಟಾವಂತ ಕಾರ್ಯಕರ್ತರ ಕತೆ ಏನು?  ಇದು ಕೇವಲ ಗಾಯತ್ರಿ ಸಿದ್ದೇಶ್ವರ ಅವರ ಪ್ರಶ್ನೆ ಅಲ್ಲ. ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ದಾವಣಗೆರೆಯಿಂದ ಅವಕಾಶ ಸಿಗಲಿಲ್ಲ ಎನ್ನುವ ನೋವಿದೆ ಎಂದರು.

ಮಾಡಾಳು ಮಲ್ಲಿಕಾರ್ಜುನ್ ನನಗೆ ಕರೆ ಮಾಡಿ ನಿನ್ನ ಹುಚ್ಚು ಬಿಡುಸ್ತೀನಿ ಎಂದಿದ್ದರು. ರಾಜ್ಯದಲ್ಲಿ ಅನೇಕ ಹಗರಣ ಮಾಡಿದ ಹಲವಾರು ಶಾಸಕರ ಪೈಕಿ ಅವರ ತಂದೆಯೂ ಒಬ್ಬರು ಎಂಬುದನ್ನು ಮಲ್ಲಿಕಾರ್ಜುನ್ ಮರೆತಿದ್ದಾರೆ ಎಂದರು.

error: Content is protected !!