ಸೋಲಿಗೆ ಯಾರನ್ನು ನಿಂದಿಸಿದರೂ ಪ್ರಯೋಜನವಿಲ್ಲ

ಸೋಲಿಗೆ ಯಾರನ್ನು ನಿಂದಿಸಿದರೂ ಪ್ರಯೋಜನವಿಲ್ಲ

ಬಿಜೆಪಿ ಮುಖಂಡರು-ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ

ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಬಹಿರಂಗವಾಗಿಯೇ ಬಂಡಾಯ ಎದ್ದಿದ್ದ ಬಿಜೆಪಿ ಮುಖಂಡರ ಗೈರು ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು

ದಾವಣಗೆರೆ, ಜೂ.9- ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿಗಾಗಿ ಯಾರನ್ನೂ ನಿಂದನೆ ಮಾಡಿ ದರೂ ಪ್ರಯೋಜನವಿಲ್ಲ. ಮೊದಲು ನಾವು ಗಟ್ಟಿಯಾಗಬೇಕಿದೆ ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಜಿಲ್ಲಾ ಬಿಜೆಪಿ ಘಟಕದಿಂದ ನಗರದ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಶ್ರಮಿಸಿದ ಮುಖಂಡರು, ಕಾರ್ಯಕರ್ತರಿಗೆ ಇಂದು ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಕುಟುಂಬ ಆರು ಬಾರಿ ಗೆದ್ದಿದೆ. ಎರಡು ಬಾರಿ ಸೋತಿದ್ದೇವೆ. ಸೋಲು-ಗೆಲುವು ಇದ್ದದ್ದೇ. ಎದೆಗುಂದುವ ಅಗತ್ಯವಿಲ್ಲ ಎಂದು ಹೇಳಿದರು.

ಜೀವ ಇರುವವರೆಗೂ ನಿಮ್ಮನ್ನು ಮರೆಯುವುದಿಲ್ಲ ಎಂದು ಕಾರ್ಯಕರ್ತರಿಗೆ ಹೇಳಿದ ಸಿದ್ದೇಶ್ವರ, ವಾರಕ್ಕೆ ಎರಡು ಬಾರಿ ದಾವಣಗೆರೆಗೆ ಬಂದು ಕಷ್ಟ-ಸುಖದಲ್ಲಿ ಭಾಗಿಯಾಗುತ್ತೇನೆ. ಕ್ಷೇತ್ರದ ಬಗ್ಗೆ ಈಗ ಮೊದಲಿಗಿಂತ ಹೆಚ್ಚು ಒತ್ತು ಕೊಡುತ್ತೇನೆ. ಇನ್ನೂ ಹೆಚ್ಚು ಕೆಲಸ ಮಾಡುತ್ತೇನೆ. ಈ ಬಗ್ಗೆ ಅನುಮಾನ  ಬೇಡ ಎಂದರು.

ನಾನು ಚುನಾವಣೆಗೆ ಸ್ಪರ್ಧಿಸಲು ರೆಡಿ ಇದ್ದೆ. ಆದರೆ ಆರೋಗ್ಯ ಮುಖ್ಯ. ಹೀಗಾಗಿ ಸ್ಪರ್ಧಿಸಲಿಲ್ಲ. ಈಗ ನಾನು ಸ್ಪರ್ಧಿಸಿದ್ದರೆ ಚೆನ್ನಾಗಿತ್ತು ಎನಿಸುತ್ತಿದೆ. ಆದರೆ ಈ ಬಾರಿಯ ಸೋಲು ಜನರು ನೀಡಿರುವ ತೀರ್ಪು. ಅದನ್ನು ಒಪ್ಪಿಕೊಳ್ಳ ಲೇಬೇಕು. ಆರು ಲಕ್ಷಕ್ಕೂ ಹೆಚ್ಚು ಮತ ಪಡೆಯುವುದು ಹುಡುಗಾಟಿಕೆಯಲ್ಲ. ನಾವು ಸೋತರೂ ಗೆದ್ದಿದ್ದೇವೆ ಎಂದರು. 

ಸೋಲಿಗಾಗಿ ಬಹಳ ಜನರು ಕಣ್ಣೀರಿಟ್ಟಿದ್ದಾರೆ. ಅದರಿಂದ ನಮಗೂ ವ್ಯಥೆಯಾಗುತ್ತದೆ. ಇದರ ನಡುವೆ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗುತ್ತಿರುವುದು ಖುಷಿ ತಂದಿದೆ. ಮುಂದಿನ ಪಿಕ್ಚರ್ ಮೋದಿ ತೋರಿಸಲಿದ್ದಾರೆ ಎಂದರು.

ಬಿಜೆಪಿ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಬಿಸಿಲು, ಮಳೆ, ಹಸಿವು ಲೆಕ್ಕಿಸದೇ ಚುನಾವಣಾ ವೇಳೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಅರ್ಥದ ಹಿನ್ನೆಲೆಯಲ್ಲಿಯೇ ನಾವು ಯುಗಾದಿ ಹಬ್ಬದಂದು  ಬೇವು-ಬೆಲ್ಲ ಸೇವಿಸುತ್ತೇವೆ. ಇಷ್ಟು ದಿನ ಬೆಲ್ಲ ಸವಿದಿದ್ದೇವೆ. ಈಗ ನಮ್ಮ ಪಾಲಿಗೆ ಬೇವು ಬಂದಿದೆ. ಆದರೆ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗುತ್ತಿರುವ ಸಂತೋಷವೂ ಇದೆ ಎಂದು ಹೇಳಿದರು.

ನಾನು ಅಧಿಕಾರಕ್ಕಾಗಿ ಆಸೆಪಟ್ಟವಳಲ್ಲ. ಆದಾಗ್ಯೂ ಪಕ್ಷದ ಮುಖಂಡರು ಸೇವೆಗೆ ಅವಕಾಶ ಕಲ್ಪಿಸಿದ್ದರಿಂದ ಸ್ಪರ್ಧೆಗೆ ಒಪ್ಪಿಕೊಂಡೆ. ಸೋಲಿನಿಂದ ನಿಮಗೆ ಸಂಕಟವಾಗಿದೆ. ಅದರಿಂದ ನಮಗೂ ಸಂಕಟವಾಗುತ್ತದೆ ಮುಂದಿನ ಚುನಾವಣೆಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡೋಣ. ಪಕ್ಷದಲ್ಲಿ ಆಗಿರುವ ಒಡಕನ್ನು ತಿದ್ದುವ ಕೆಲಸ ಮಾಡೋಣ ಎಂದರು.

ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಜಿ.ಎಂ. ಸಿದ್ದೇಶ್ವರ ಹೊರಗಿನವರಲ್ಲ. ಜಿ.ಮಲ್ಲಿಕಾರ್ಜುನಪ್ಪ ಅವರು ಸ್ಪರ್ಧಿಸಿದ್ದಾಗ ಭೀಮಸಮುದ್ರ ದಾವಣಗೆರೆ ಕ್ಷೇತ್ರಕ್ಕೆ ಸೇರಿತ್ತು.  ಸಂಸದರಾಗಿ ಅವರ ಮನೆತನ ಪೂರ್ಣ ದಾವಣಗೆರೆಯಲ್ಲಿಯೇ ರಾಜಕೀಯ ಹಾಗೂ ವ್ಯವಹಾರ ನಡೆಸಿತ್ತು ಎಂದರು. ಪಕ್ಷದ ಬುನಾದಿಯಾಗಿ ಕೆಲಸ ಮಾಡಿದ ಮನೆತನದ ಬಗ್ಗೆ ಅಪಸ್ಪರ ಎತ್ತುವುದು ಸರಿಯಲ್ಲ ಎಂದರು.

ಕಳೆದ ಒಂದೂವರೆ ತಿಂಗಳ ಹಿಂದೆ ಮೈನಿಂಗ್ ಸಚಿವರ ಅವ್ಯವಹಾರ ಕುರಿತು ಆರೋಪಿಸಿದರೆ ಸರ್ಕಾರ ಯಾವುದೇ ತನಿಖೆ ನಡೆಸಲಿಲ್ಲ. ಜಿಲ್ಲಾಧಿಕಾರಿಗಳೂ ಸುಮ್ಮನಿದ್ದರು ಎಂದು ಹರೀಶ್ ಆರೋಪಿಸಿದರು. ಮುಂದಿನ ದಿನಗಳಲ್ಲೂ ಎಸ್.ಎಸ್. ಮನೆತನದ ಭ್ರಷ್ಟಾಚಾರದ ಬಗ್ಗೆ ಹೋರಾಟ ನಡೆಸೋಣ. ಜೊತೆಗೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎದೆಗುಂದದೆ ಗೆದ್ದು ನಮ್ಮ ಶಕ್ತಿ ತೋರಿಸೋಣ ಎಂದು ಕರೆ ನೀಡಿದರು.

ಹರಿಹರ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಬಿಜೆಪಿ ಅಭ್ಯರ್ಥಿಯ ಸೋಲಿನಿಂದ ಬಿಜೆಪಿ ಕಾರ್ಯಕರ್ತರಿಗಿಂತಲೂ ನಮಗೆ ಹೆಚ್ಚು ನೋವಾಗಿದೆ. ಆದರೆ ಈ ಸೋಲು ಸಿದ್ದೇಶ್ವರ ಅವರನ್ನು ಗಟ್ಟಿಗೊಳಿಸಲಿದೆ ಎಂದು ಹೇಳಿದರು.

ಬಿಜೆಪಿ ಸೋತಿದ್ದು ಕಾಂಗ್ರೆಸ್‌ನಿಂದ ಅಲ್ಲ, ಬಿಜೆಪಿಯ ಕೆಲವರಿಂದ ಆದ ಮೋಸದಿಂದ ಸೋಲುಂಟಾಗಿದೆ. ನಿಮಗೆ ಮೋಸ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ದಾವಣಗೆರೆಯಲ್ಲಿ ಸಂಸದರಾಗುವ ತಾಕತ್ತು ಸಿದ್ದೇಶ್ವರ್ ಕುಟುಂಬಕ್ಕೆ ಬಿಟ್ಟರೆ ಬೇರೆ ಯಾರಿಗೂ ಇಲ್ಲ. ಒಂದು ವೇಳೆ ಇದ್ದರೆ ಅದು ನನಗೆ ಮಾತ್ರ ಎಂದೂ ಸಹ ಶಿವಶಂಕರ್ ಹೇಳಿದರು.

ಜಗಳೂರು ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಮಾತನಾಡಿ, ಜಗಳೂರಲ್ಲಿ ಹೆಚ್ಚು ಲೀಡ್ ಕೊಡಲು ಸಾಧ್ಯವಾಗದೇ ಇರುವುದಕ್ಕೆ ವಿಷಾದವಿದೆ. ಕ್ಷೇತ್ರದಲ್ಲೂ ಸೋಲಿನ ಆತ್ಮಾವಲೋಕನ ಸಭೆ ನಡೆಸಲಿದ್ದೇವೆ. ಮುಂದಿನ ಚುನಾವಣೆಗಳನ್ನು ಸಿದ್ದೇಶ್ವರ ಅವರ ನೇತೃತ್ವದಲ್ಲಿಯೇ ಎದುರಿಸೋಣ ಎಂದರು.

ಮತ್ತೋರ್ವ ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಸೋಲಿಗಾಗಿ ಎದೆಗುಂದುವುದು ಬೇಡ.  ಮುಂದಿನ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಿಸೋಣ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಚಿತ್ರದುರ್ಗದಲ್ಲಿ ಎಲ್ಲಿಂದಲೋ ಬಂದು ಗೆಲ್ಲುತ್ತಾರೆ. ಆದರೆ ಇಲ್ಲಿಯೇ ಭೀಮಸಮುದ್ರದಿಂದ ಬಂದವರನ್ನು ವಿರೋಧಿಸುತ್ತಾರೆಂದರೆ ಏನು ಹೇಳಬೇಕು?. ಟಿಕೆಟ್ ಬಗ್ಗೆ ಅಪಸ್ಪರ ತೆಗೆದವರೇ ಸೋಲಿಗೆ ಕಾರಣ ಎಂದರು.

ಪ್ರಭಾ ಮಲ್ಲಿಕಾರ್ಜುನ್ ಅವರು ದ್ವೇಷದ ಮಾರುಕಟ್ಟೆ ಮುಚ್ಚಲಾಗಿತೆ ಪ್ರೀತಿಯ ಬಾಗಿಲು ತೆರೆದಿದ್ದೇವೆ ಎಂದು ಜಾಹೀರಾತು ನೀಡಿದ್ದಾರೆ. ಬಿಜೆಪಿ ಯವರೊಂದಿಗೆ ಸಖ್ಯ ಬೆಳೆಸಿದ್ದ ಕಾರಣ ಅವರ ಸಂಸ್ಥೆಯವರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಇದು ದ್ವೇಷವಲ್ಲದೆ ಮತ್ತೇನು? ಎಂದು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಭ್ಯರ್ಥಿ ಪರ ಬಹಿರಂಗ ಸಭೆ, ರೋಡ್‌ ಶೋಗಳನ್ನು ನಡೆಸಿದ್ದರು. ಜೊತಗೆ ಜಿಲ್ಲೆಯ ಎಲ್ಲಾ ಕಾರ್ಯಕರ್ತರು, ಮುಖಂಡರು ಚುನಾಯಿತ ಪ್ರತಿನಿಧಿಗಳು ಹಗಲಿರುಳ ಕ್ರಮದಿಂದಾಗಿ 6 ಲಕ್ಷ ಕ್ಕೂ ಹೆಚ್ಚು ಮತಗಳನ್ನು ಬಿಜೆಪಿ ಪಡೆದಿದೆ ಎಂದು ಹೇಳಿದರು.

ಮುಖಂಡರುಗಳಾದ ಜಿ.ಎಸ್. ಅನಿತ್ ಕುಮಾರ್, ಚಿದಾನಂದಪ್ಪ, ರಾಜನಹಳ್ಳಿ ಶಿವಕುಮಾರ್, ಕೆ.ಪ್ರಸನ್ನಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ಎಸ್.ಟಿ. ವೀರೇಶ್, ಸಂಗನಗೌಡ್ರು, ಚಂದ್ರಶೇಖರ್ ಪೂಜಾರಿ, ಜಯಪ್ರಕಾಶ್, ಉಮಾ ಪ್ರಕಾಶ್, ಶಿವ ಪ್ರಕಾಶ್, ಶಿವನಳ್ಳಿ ರಮೇಶ್, ಯಶೋಧ ಯಗ್ಗಪ್ಪ ಇತರರು ಈ ಸಂದರ್ಭದಲ್ಲಿದ್ದರು. ಮಂಜುಳ ಇಟಗಿ ಹಾಗೂ ಕಮಲಮ್ಮ ಪ್ರಾರ್ಥಿಸಿದರು. ಧನಂಜಯ ಕಡ್ಲೇಬಾಳು ಸ್ವಾಗತಿಸಿದರು.

error: Content is protected !!