ರೈತರ ಮುಖದಲ್ಲಿ ಮಂದಹಾಸ: ಬಿತ್ತನೆ ಚುರುಕು

ರೈತರ ಮುಖದಲ್ಲಿ ಮಂದಹಾಸ: ಬಿತ್ತನೆ ಚುರುಕು

ಜಗಳೂರು ತಾಲ್ಲೂಕಿನಲ್ಲಿ ಮುಂಗಾರು ಮಳೆ ಉತ್ತಮ

ಜಗಳೂರು, ಜೂ.10- ಕಳೆದ ಸಾಲಿನಲ್ಲಿ ಮಳೆ ಕೊರತೆಯಿಂದ ಬರ ಅನುಭವಿಸಿದ್ದ ತಾಲ್ಲೂಕಿನ ರೈತರ ಮುಖದಲ್ಲಿ, ಈ ವರ್ಷ ಮಂದಹಾಸ ಮೂಡಿದೆ. ಕಾರಣ ಮುಂಗಾರು ಮಳೆ ಅಧಿಕ ಪ್ರಮಾಣದಲ್ಲಿ ಜಗಳೂರು ತಾಲೂಕಿನಲ್ಲಿ ಸುರಿದಿದೆ.

ತಾಲ್ಲೂಕಿನ ಈವರೆಗಿನ ವಾಡಿಕೆ ಮಳೆ 122.3ಮಿ.ಮೀ. ವಾಸ್ತವಿಕವಾಗಿ ಬಂದಿರುವ ಮಳೆ ಪ್ರಮಾಣ 187.4ಮಿ.ಮೀ. ಅಂದರೆ ಶೇ.54 ರಷ್ಟು ಅಧಿಕ ಮಳೆಯಾಗಿದೆ. ಬಿತ್ತನೆ ಕಾರ್ಯ ಚುರುಕುಗೊಂಡಿದೆ.

ಕಳೆದ ಹಲವು ದಿನಗಳಿಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆ ಯಾಗುತ್ತಿದೆ. ಕೆಲವು ಪಪ್ಪಾಯಿ, ಅಡಿಕೆ, ಬಾಳೆ ತೋಟಗಳಲ್ಲಿ ನೀರು ನಿಂತು ಬೆಳಿಗ್ಗೆ ಹಾನಿಯಾಗಿದ್ದರೆ, ಇನ್ನೂ ಕೆಲವು ಕಡೆ ಜಮೀನಿನಲ್ಲಿ ನೀರು ನಿಂತು ಬಿತ್ತನೆಗೆ ತೊಂದರೆ ಆಗಿದೆ.

 ಕಳೆದ ವರ್ಷ ಹಿಂಗಾರು ಮತ್ತು ಮುಂಗಾರು ಮಳೆಯ ಕೊರತೆಯಿಂದಾಗಿ ತಾಲ್ಲೂಕಿನ ಬಹುತೇಕ ಕೆರೆ, ಗೋಕಟ್ಟೆ, ಚೆಕ್ ಡ್ಯಾಮ್ ಗಳು ಸಂಪೂರ್ಣವಾಗಿ ಒಣಗಿ ಹೋಗಿದ್ದವು. ಆದರೆ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆಯ ಆರಂಭದಲ್ಲಿಯೇ ತಾಲ್ಲೂಕಿನ ಬಹುತೇಕ ಕೆರೆಗಳಿಗೆ ಮತ್ತು ಗೋಕಟ್ಟೆಗಳಲ್ಲಿ ನೀರು ತುಂಬಿದೆ.

  ಕಳೆದ ಎರಡು ವರ್ಷಗಳಿಂದ ಖಾಲಿ ಇದ್ದ ಗಡಿಮಾಕುಂಟೆ ಕೆರೆಗೆ ಆರಂಭದಲ್ಲಿ ಎಂಟು ಅಡಿ  ನೀರು ಸಂಗ್ರಹವಾಗಿದ್ದು, ಈ ಭಾಗದ ರೈತರಲ್ಲಿ ಸಂತಸ ಮೂಡಿದೆ. ಉಳಿದಂತೆ ಗುರುಸಿದ್ದಾಪುರ, ಕ್ಯಾಸೇನಹಳ್ಳಿ, ಗೌರಿಪುರ, ಕೆಳಗೋಟೆ  ಮುಂತಾದ ಕೆರೆಗಳಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹ ವಾಗಿದೆ. ಗೋಕಟ್ಟೆಗಳು ತುಂಬಿಹರಿಯುತ್ತಿವೆ.

 ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಮೆಕ್ಕೆಜೋಳ ಇದುವರೆಗೂ 23,000 ಹೆಕ್ಟೆರ್ ಬಿತ್ತನೆಯಾಗಿದೆ. ಉಳಿದಂತೆ ತೊಗರಿ 2300, ಹತ್ತಿ 2100 ಮತ್ತು ರಾಗಿ 850 ಹೆಕ್ಟೆರ್ ಬಿತ್ತನೆಯಾಗಿದೆ. ಬಿಳಿಚೋಡು ಹೋಬಳಿ ಮತ್ತು ಸೊಕ್ಕೆ ಹೋಬಳಿಯಲ್ಲಿ ಹೆಚ್ಚಿನ ಕ್ಷೇತ್ರ ಬಿತ್ತನೆಯಾಗಿದ್ದು, ಕಸಬಾ ಹೋಬಳಿವ್ಯಾಪ್ತಿಯ ಹಳ್ಳಿಗಳಲ್ಲಿ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಸಮರ್ಪಕವಾಗಿದ್ದು, ಇದುವರೆಗೆ ಮೆಕ್ಕೆಜೋಳ 856 ಕ್ವಿಂಟಲ್ ತೊಗರಿ 105 ಕ್ವಿಂಟಲ್ ಹಾಗೂ ಸೂರ್ಯಕಾಂತಿ 450 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಮಾಹಿತಿ ನೀಡಿದ್ದಾರೆ.

ರೈತರು ಬಿತ್ತನೆ ಬೀಜ ಹಾಗೂ ಕೀಟನಾಶಕ ಮತ್ತು ಗೊಬ್ಬರವನ್ನು ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕು ಮತ್ತು ಸಂಬಂಧಿಸಿದ ಖರೀದಿ ರಸೀದಿಯನ್ನು ಪಡೆದು ಇಟ್ಟುಕೊಂಡಿರಬೇಕು ಎಂದು ಸಲಹೆ ನೀಡಿದ್ದಾರೆ. ನ್ಯಾನೋ ಯೂರಿಯ, ಡಿಎಪಿ ರಸಗೊಬ್ಬರ ಮಾರುಕಟ್ಟೆಗೆ ಬಂದಿರುತ್ತದೆ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು  ತಿಳಿಸಿದ್ದಾರೆ.


– ಬಿ.ಪಿ.ಸುಭಾನ್

error: Content is protected !!