ರಾಜ್ಯ ರ‍್ಯಾಂಕಿಂಗ್‌ಸಬ್ ಜ್ಯೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬೆಂಗಳೂರಿನ ಶೈನಾ ಚಾಂಪಿಯನ್‌

ರಾಜ್ಯ ರ‍್ಯಾಂಕಿಂಗ್‌ಸಬ್ ಜ್ಯೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬೆಂಗಳೂರಿನ ಶೈನಾ ಚಾಂಪಿಯನ್‌

ದಾವಣಗೆರೆ, ಮೇ 26 – ಬೆಂಗಳೂರಿನ ಶೈನಾ ಮಣಿಮುತ್ತು ರಾಜ್ಯ ರ‍್ಯಾಂಕಿಂಗ್‌ ಸಬ್ ಜ್ಯೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯ 15 ಹಾಗೂ 17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಇಲ್ಲಿನ ನೇತಾಜಿ ಸುಭಾಷ್‌ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಿನ್ನೆ ಶನಿವಾರ ನಡೆದ ಬಾಲಕಿಯರ ರೋಚಕ ಫೈನಲ್ ಹಣಾಹಣಿಯಲ್ಲಿ ಶೈನಾ, ಅಗ್ರ ಶ್ರೇಯಾಂಕಿತೆ ಮೈಸೂರಿನ ದಿಯಾ ಭೀಮಯ್ಯ ವಿರುದ್ಧ 21-19, 21-14 ಗೇಮ್‌ಗಳಿಂದ ಜಯ ಪಡೆದರು.

ಬಾಲಕರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಮೈಸೂರಿನ ಹಾರ್ದಿಕ್ ದಿವ್ಯಾನ್ಶ್‌, ಬೆಂಗಳೂರಿನ 3ನೇ ಶ್ರೇಯಾಂಕಿತ ಇಶಾನ್ ನಾಯ್ಕ 21-17, 21-19 ರಿಂದ ಗೆಲುವು ಸಾಧಿಸಿದರು.

ಬಾಲಕರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಅಮಿತ್‌ರಾಜ್-ಹಾರ್ದಿಕ್ ದಿವ್ಯಾನ್ಶ್‌ ಜೋಡಿ, ಚಿಕ್ಕಮಗಳೂರಿನ ಯದುನಂದನ್-ವಂಶಿ ಜೋಡಿ ವಿರುದ್ಧ 17-21, 21-9, 21-14 ಗೇಮ್‌ಗಳ ಅಂತರದಲ್ಲಿ ಪ್ರಯಾಸದ ಗೆಲುವು ಸಾಧಿಸಿತು. 

ಸಾಯಿ ಪುಷ್ಕರ್‌ಗೆ ಪ್ರಶಸ್ತಿ:

15 ವರ್ಷದೊಳಗಿನ ಬಾಲಕರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಸಾಯಿ ಪುಷ್ಕರ್, ಅಗ್ರ ಶ್ರೇಯಾಂಕಿತ ಮೈಸೂರಿನ ಶ್ಯಾಮ್ ಬಿಂಡಿಗನವಿಲೆ ವಿರುದ್ಧ 21-11, 21-23, 21-18ರಿಂದ ಗೆಲುವಿನ ನಗೆ ಬೀರಿದರು.

ಬಾಲಕಿಯರ ಸಿಂಗಲ್ಸ್ ಫೈನಲ್‌ನಲ್ಲಿ ಬೆಂಗಳೂರಿನ ಶೈನಾ ಮಣಿಮುತ್ತು, ಅಗ್ರ ಶ್ರೇಯಾಂಕಿತೆ ಐಕ್ಯಶೆಟ್ಟಿ ವಿರುದ್ಧ 21-18, 11-5ರಿಂದ ಜಯ ಪಡೆದರು.

ಬಾಲಕರ ಡಬಲ್ಸ್ ಫೈನಲ್‌ನಲ್ಲಿ ಪಿಯೂಷ್ ತ್ರಿಪಾಠಿ-ಶ್ಯಾಮ್ ಬಿಂಡಿಗನವಿಲೆ ಜೋಡಿ, ಬೆಂಗಳೂರಿನ ಹರ್ಷವರ್ಧನ್-ನಿಕೇತನ್ ಹರಿ ಜೋಡಿ ವಿರುದ್ಧ 21-11, 21-14ರಿಂದ ಜಯ ಸಾಧಿಸಿತು.

ಬಾಲಕಿಯರ ಡಬಲ್ಸ್ ಅಂತಿಮ ಹಣಾಹಣಿಯಲ್ಲಿ ನಿಧಿ ಆತ್ಮರಾಮ್-ಸೆಲ್ವಾ ಸಮೃದ್ಧಿ ಜೋಡಿ, ಅವನಿ ಕುಲಕರ್ಣಿ-ತನ್ವಿ ಮನೋತ್ ಜೋಡಿ ಎದುರು 21-12, 21-10ರಿಂದ ಗೆಲುವು ಪಡೆದರು.

ಬಹುಮಾನ ವಿತರಣೆ ಸಮಾರಂಭದಲ್ಲಿ ದಾವಣಗೆರೆ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿ ಯೇಷನ್‌ ಅಧ್ಯಕ್ಷ  ಎಸ್.ಎನ್. ಬಸವರಾಜ್, ಕಾರ್ಯದರ್ಶಿ ಡಿ.ಆರ್. ಗಿರಿರಾಜ್, ಉಪಾಧ್ಯಕ್ಷ ಕೆ. ಹೆಚ್. ಸಿದ್ದೇಶ್ವರ, ಖಜಾಂಚಿ ಇಸ್ಮಾಯಿಲ್ ಮತ್ತು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ ಕಾರ್ಯದರ್ಶಿ ರಾಜೇಶ್, ಶಿವರಾಜ್ ಮಾತೂರ್ ಹಾಗೂ ದಾವಣಗೆರೆ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್‌ ಪದಾಧಿಕಾರಿಗಳಾದ ಬೇತೂರು ಕರಿಬಸಪ್ಪ, ಶಶಿಧರ ಆಚಾರ್, ಎಂ.ಆರ್. ಸ್ವಾಮಿ, ಅಭಿ, ಗಂಗಾಧರ ಮತ್ತಿತರರು ಉಪಸ್ಥಿತರಿದ್ದರು.

error: Content is protected !!