ದೂರದೃಷ್ಟಿಯಿಲ್ಲದವರನ್ನು ತಿರಸ್ಕರಿಸಿ

ದೂರದೃಷ್ಟಿಯಿಲ್ಲದವರನ್ನು ತಿರಸ್ಕರಿಸಿ

ನಾವು ಮುಂದಿನ ದಿನಗಳಲ್ಲಿ ಕೇಂದ್ರದಿಂದ ನಾಲ್ಕೈದು ಕೈಗಾರಿಕೆಗಳನ್ನು ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಆರಂಭಿಸಲು ಚಿಂತನೆ ನಡೆಸಿದ್ದು, ನಮ್ಮ ಜನಕ್ಕೆ ನಾವು ಉದ್ಯೋಗ ನೀಡುತ್ತೇವೆ.

– ಡಾ. ಪ್ರಭಾ ಮಲ್ಲಿಕಾರ್ಜುನ್, ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ

ದಾವಣಗೆರೆ, ಏ.19-  ಬರೀ ಸುಳ್ಳು ಆಶ್ವಾಸನೆ ಕೊಡುತ್ತಾ ಮತದಾರರನ್ನು ವಂಚಿಸಿರುವ ದಾವಣಗೆರೆ ಬಿಜೆಪಿ ಸಂಸದರನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸುವುದರ ಜೊತೆಗೆ ನನಗೂ ಒಂದು ಅವಕಾಶ ನೀಡಬೇಕು ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮನವಿ ಮಾಡಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 42ನೇ ವಾರ್ಡ್‌ನ ಸಿದ್ದವೀರಪ್ಪ ಬಡಾ ವಣೆಯಲ್ಲಿ ಇಂದು ಚುನಾವಣಾ ಪ್ರಚಾರ ನಡೆಸಿ, ಮತದಾರರನ್ನುದ್ದೇಶಿಸಿ ಅವರು ಮಾತನಾಡಿದರು

ಕಳೆದ 25 ವರ್ಷಗಳಿಂದ ನಮ್ಮನ್ನು ಪ್ರತಿನಿಧಿಸುವವರು, ದಾವಣಗೆರೆಯಲ್ಲಾಗಲೀ, ದಾವಣಗೆರೆ ಜಿಲ್ಲೆಯಲ್ಲಾಗಲೀ ಯಾವುದೇ ಕೈಗಾರಿಕೆಯನ್ನು ತರದೇ ಇರುವುದರಿಂದ ಇಲ್ಲಿನ ಜನತೆ ಬೆಂಗಳೂರು, ಮುಂಬೈನಂತಹ ಬೇರೆ-ಬೇರೆ  ನಗರಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಹಾಗಾಗಿ ದೂರ ದೃಷ್ಟಿಯಿಲ್ಲದವರನ್ನು ತಿರಸ್ಕರಿಸಿ ಎಂದರು.

ಕೈಗಾರಿಕೆಗಳ ಜೊತೆಗೆ ಐಟಿ, ಬಿಟಿ ಕಂಪನಿಗಳೂ ದಾವಣಗೆರೆಯಲ್ಲಿ ಸ್ಥಾಪನೆಯಾಗಿ ನಮ್ಮ ಯುವಕ-ಯುವತಿಯರಿಗೆ ಉದ್ಯೋಗಾ ವಕಾಶ ದೊರೆಯಬೇಕಾಗಿದೆ. ಇಂತಹ ಯಾವ ಕೆಲಸವನ್ನೂ ಮಾಡದೇ  ಸುಳ್ಳು ಆಶ್ವಾಸನೆ ಕೊಡುತ್ತಾ ಮತದಾರರನ್ನು ವಂಚಿಸುತ್ತಿದ್ದಾರೆ.  

ಕ್ಷೇತ್ರದಲ್ಲಿ ನಮ್ಮ ಪಕ್ಷದವರೇ ಆದ ಏಳು ಜನ ಶಾಸಕರಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ. ನನ್ನನ್ನೂ ಈ ಬಾರಿ ಲೋಕಸಭೆಗೆ ಆಯ್ಕೆ ಮಾಡಿದರೆ ನಾವೆಲ್ಲರೂ ಒಟ್ಟಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಪ್ರಭಾ ಹೇಳಿದರು.

ನಗರಕ್ಕೆ ಜಲಸಿರಿಯಂತಹ ದಿನನಿತ್ಯ ನೀರು ಸರಬರಾಜು  ಮಾಡುವ ಯೋಜನೆಗೆ  ದಾವಣಗೆರೆ ನಗರ ಪ್ರಥಮ ಹಂತದಲ್ಲೇ ಆಯ್ಕೆಯಾಗುವಲ್ಲಿ ಮತ್ತು ಸ್ಮಾರ್ಟ್ ಸಿಟಿ ಯೋಜನೆಗೆ ಸೇರ್ಪಡೆ ಯಾಗುವಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳೇ ಕಾರಣವಾಗಿದ್ದು, ಹಾಗಾಗಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ರಾಜ್ಯ ಮತ್ತು ದೇಶದ ಅಭಿವೃದ್ಧಿ ಸಾಧ್ಯ ಎಂದರು. 

ದೂಡಾ ಮಾಜಿ ಅಧ್ಯಕ್ಷ  ಶಾಮನೂರು ಜಿ.ಹೆಚ್. ರಾಮಚಂದ್ರಪ್ಪ,   ಪಾಲಿಕೆ ಮಾಜಿ ಸದಸ್ಯರಾದ ಜಿ.ಬಿ. ಲಿಂಗರಾಜ್, ಶ್ರೀಮತಿ ವಿಜಯ ಲಿಂಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಕೆ.ಜಿ ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ  ಶಾಮನೂರು ಟಿ. ಬಸವರಾಜ್, ಡಾ. ಟಿ.ಜಿ. ರವಿಕುಮಾರ್  ಸೇರಿದಂತೆ  ಇತರರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು.

error: Content is protected !!