ಬೆಂಬಲ ಬೆಲೆಗೆ ಆಗ್ರಹಿಸಿ, ವಿದ್ಯುಚ್ಛಕ್ತಿ ಖಾಸಗೀಕರಣ ವಿರೋಧಿಸಿ ಕೇಂದ್ರದ ವಿರುದ್ಧ ರೈತರ ಪ್ರತಿಭಟನೆ

ಬೆಂಬಲ ಬೆಲೆಗೆ ಆಗ್ರಹಿಸಿ, ವಿದ್ಯುಚ್ಛಕ್ತಿ ಖಾಸಗೀಕರಣ ವಿರೋಧಿಸಿ ಕೇಂದ್ರದ ವಿರುದ್ಧ ರೈತರ ಪ್ರತಿಭಟನೆ

ದಾವಣಗೆರೆ, ಮಾ. 1 – ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ಜಾರಿ ಮಾಡಬೇಕು ಮತ್ತು ವಿದ್ಯುಚ್ಛಕ್ತಿ ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿ, ರಾಜ್ಯ ರೈತ ಸಂಘ, ಹಸಿರುಸೇನೆ ಹುಚ್ಚವ್ವನಳ್ಳಿ ಮಂಜುನಾಥ್ ಬಣ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಶುಕ್ರವಾರ ನಗರದಲ್ಲಿ ರೈಲು ತಡೆ ಯತ್ನ ನಡೆಸಲಾಯಿತು.

ಜಯದೇವ ವೃತ್ತದಿಂದ ಹೊರಟ ನೂರಾರು ಪ್ರತಿಭಟನಾಕಾರರು ರೈಲು ನಿಲ್ದಾಣದತ್ತ ನಡೆದು ರೈಲು ತಡೆಗೆ ಮುಂದಾದರು. ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪೊಲೀಸರು ಪ್ರತಿಭಟನಾ ನಿರತರನ್ನು ತಡೆದರು. ಈ ವೇಳೆ ರೈತರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ಸ್ಥಳಕ್ಕೆ ಆಗಮಿಸಿದ ರೈಲು ನಿಲ್ದಾಣ ಪ್ರಬಂಧಕರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಲು ರಾಜ್ಯದ ಎಲ್ಲಾ ರೈತರು ದೆಹಲಿಗೆ ಹೋಗಲು ಸಾಧ್ಯವಿಲ್ಲ. ರೈತರ ಪರವಾಗಿ ಕೆಲಸ ಮಾಡಬೇಕಾದ ಸಂಸದರು ನಿದ್ರೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರ ಮೇಲೆ ಗೂಂಡಾಗಿರಿ ಮಾಡುತ್ತಿದೆ. ಸರ್ಕಾರಕ್ಕೆ ರೈತರು ಬಿಸಿ ಮುಟ್ಟಿಸಲು ಈ ರೀತಿಯ ಚಳವಳಿ ನಡೆಸುವುದು ಅನಿವಾರ್ಯವಾಗಿದೆ ಎಂದರು.

ಆಲೂರು ಪರಶುರಾಮ್ ಮಾತನಾಡಿ, ಕೂಡಲೇ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಮಾಡದಿದ್ದರೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಮರಣ ಶಾಸನವನ್ನು ರೈತರು ಬರೆಯಬೇಕಾಗುತ್ತದೆ. ಕೇಂದ್ರ ಸರ್ಕಾರಕ್ಕೆ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಲು ಹೆಚ್ಚಿನ ಕಾಳಜಿ ಇರುತ್ತದೆ. ಆದರೆ ರೈತರ ಸಾಲ ಮನ್ನಾ ವಿಚಾರ, ಸ್ವಾಮಿನಾಥನ್ ವರದಿ ಜಾರಿ, ಬೆಂಬಲ ಬೆಲೆ, ರೈತರಿಗೆ ಪಿಂಚಣಿ ಮೊದಲಾದ ರೈತ ಪರ ಕಾರ್ಯಕ್ರಮಗಳನ್ನು ಜಾರಿಗೆ ತರಲು ಮನಸು ಇಲ್ಲ ಎಂದರು.

ರೈತರು ನ್ಯಾಯ ಕೇಳಿದರೆ ಗೋಲಿಬಾರ್ ಮಾಡುತ್ತಾರೆ. ಇದು ದೇಶದ ರೈತನಿಗೆ ಮಾಡುವ ಅಪಮಾನವಾಗಿದೆ. ರೈತರು ಗುಲಾಮರೂ ಅಲ್ಲ, ಭಿಕ್ಷುಕರೂ ಅಲ್ಲ. ಯಾವುದೇ ರಾಜಕೀಯ ಪಕ್ಷಕ್ಕೆ ಅಧಿಕಾರ ಶಾಶ್ವತ ಅಲ್ಲ. ಕೂಡಲೇ ಸಮಸ್ಯೆ ಬಗೆಹರಿಸಿ ಅನ್ನದಾತನ ಋಣ ತೀರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಟುವಳ್ಳಿ ಪೂಜಾರ ಅಂಜಿನಪ್ಪ ಮಾತನಾಡಿ, ದೆಹಲಿಯಲ್ಲಿ ನಡೆಯುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯ ಹೋರಾಟದ ರೈತರು ಯಾರುೂ ದೇಶದ್ರೋಹಿಗಳಲ್ಲ. 

ದೆಹಲಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಭೂಪಾಲ್‌ನಲ್ಲಿ ತಡೆದು ಪೊಲೀಸರ ಮೂಲಕ ಬಂಧಿಸಿ ಮೂರು ದಿನದ ನಂತರ ವಾಪಸ್ ಕಳಿಸಲಾಗಿದೆ. ದೆಹಲಿಯಲ್ಲಿ ಹೋರಾಟ ಮಾಡುವ ಪಂಜಾಬ್, ಹರಿಯಾಣ ರೈತರನ್ನು ದೇಶ ವಿರೋಧಿಗಳು ಎನ್ನುತ್ತಾರೆ. 

ಇದರ ಅರ್ಥ ಏನು? ರೈತರು ಸಮಸ್ಯೆ ಬಗೆಹರಿಯುವ ತನಕ ಚಳವಳಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದೇವೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ್, ರಾಜಸ್ಥಾನ ರೈತರ ಹೋರಾಟಕ್ಕೆ ನಾವು ಸದಾ ಜೊತೆಯಾಗಿರುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪಾಮೇನಹಳ್ಳಿ ಗೌಡ್ರು ಶೇಖರಪ್ಪ, ಕೋಗಲೂರು ಕುಮಾರ್, ರಾಜನಹಟ್ಟಿ ರಾಜು, ಗೌಡಗೊಂಡನಹಳ್ಳಿ ಸತೀಶ, ಕೋಲ್ಕುಂಟೆ ಬಸವರಾಜ್, ಕುಕ್ಕುವಾಡ ಬಸವರಾಜ್, ಕುರ್ಕಿ ಹನುಮಂತ, ಹೂವಿನ ಮಡು ನಾಗರಾಜ್, ಬುಳ್ಳಾಪುರ ನಾಗರಾಜ್, ಹುಚ್ಚವ್ವನಹಳ್ಳಿ ಪ್ರಕಾಶ್, ಗುಮ್ಮನೂರು ಭೀಮೇಶ್, ರುದ್ರೇಶ್, ಹೊನ್ನೂರು ಮಂಜುನಾಥ್, ಐಗೂರು ಈರಣ್ಣ ಸೇರಿದಂತೆ ನೂರಕ್ಕೂ ಅಧಿಕ ರೈತರು ಭಾಗವಹಿಸಿದ್ದರು.

error: Content is protected !!