ಕಾರ್ಯಕರ್ತರ ಸಲಹೆಯಂತೆ ರಾಷ್ಟ್ರೀಯ ಪಕ್ಷ ಸೇರಲು ಎಚ್.ಪಿ. ರಾಜೇಶ್ ನಿರ್ಧಾರ
ಜಗಳೂರು, ಫೆ.12- ಸ್ವಾಭಿಮಾನಿ ಕಾರ್ಯ ಕರ್ತರ ಮುಂದಿನ ಭವಿಷ್ಯದ ದೃಷ್ಟಿಯಿಂದ ನಾನು ಯಾವುದಾದರೂ ರಾಷ್ಟ್ರೀಯ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದು ಕಾರ್ಯಕರ್ತರು, ಮುಖಂಡರು ಮತ್ತು ಅಭಿಮಾನಿಗಳ ಸಲಹೆ ಯಂತೆ ಶೀಘ್ರವಾಗಿ ತೀರ್ಮಾನ ಕೈಗೊಳ್ಳುವುದಾಗಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ತಿಳಿಸಿದರು.
ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಸೋಮವಾರ ನಡೆದ ಸ್ವಾಭಿಮಾನಿ ಕಾರ್ಯಕರ್ತರ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
ಹತ್ತು ವರ್ಷ ಪಕ್ಷ ನಿಷ್ಠೆಯಿಂದ ಹಳ್ಳಿ-ಹಳ್ಳಿಗಳನ್ನು ಸುತ್ತಿ ಕೆಲಸ ಮಾಡಿದ್ದೇನೆ. ಆದರೂ ನನಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೈತಪ್ಪಿತು. ಕೆಲವೇ ಮತಗಳ ಅಂತರದಲ್ಲಿ ಸೋಲು ಅನುಭವಿಸಿದೆ. ಆದರೆ ನಾನು ತಾಂತ್ರಿಕವಾಗಿ ಸೋತರೂ ಜನರ ಹೃದಯ ಗೆದ್ದಿದ್ದೇನೆ ಎಂದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನಡೆಸಿದೆ. ಸ್ವಾಭಿಮಾನಿ ಕಾರ್ಯಕರ್ತರ ವ್ಯಾಪಕ ಬೆಂಬಲದಿಂದ ಹೆಚ್ಚು ಮತ ಪಡೆದೆ. ಆದಾಗ್ಯೂ ಕೇವಲ 1250 ಮತಗಳ ಅಂತರದ ಸೋಲಬೇಕಾಯಿತು. ಈ ಸೋಲು ನನಗೆ ಸೋಲು ಎನಿಸಿಲ್ಲ. ಬದಲಾಗಿ ತೃಪ್ತಿ ಇದೆ ಎಂದರು. ಕಷ್ಟಕಾಲದಲ್ಲಿ ಕೈಹಿಡಿದ ಮತದಾರರಿಗೆ ಸದಾ ಚಿರ ಋಣಿ ಎಂದು ಭಾವುಕರಾದರು.
ಎರಡೂ ರಾಷ್ಟ್ರೀಯ ಪಕ್ಷದ ವರಿಷ್ಠರು ಸಂಪರ್ಕದಲ್ಲಿದ್ದಾರೆ: ಕಳೆದ ವಾರ ನಡೆಸಿದ ಪತ್ರಿಕಾ ಗೋಷ್ಠಿಯ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷ ವರಿಷ್ಠರು ನನ್ನನ್ನು ಸಂಪರ್ಕಿಸಿ ಆಹ್ವಾನಿಸಿದ್ದಾರೆ. ಆದರೆ ನಾನು ಏಕಪಕ್ಷೀಯ ನಿರ್ಧಾರ ಕೈಗೊಳ್ಳದೆ, ಯಾವುದೇ ಆಮಿಷಕ್ಕೆ ಒಳಗಾಗದೆ ಸ್ವಾಭಿಮಾನಿ ಕಾರ್ಯಕರ್ತರ ಮಾರ್ಗದರ್ಶನ, ಅಭಿಪ್ರಾಯ ಪಡೆದು ಮುನ್ನಡೆಡೆಯುತ್ತೇನೆ. ಇಂದಿನ ಸಭೆಯ ಅಭಿಪ್ರಾಯ ಕ್ರೋಢೀಕರಿಸಿ ನಂತರ ಮತ್ತೊಂದು ಮಹತ್ವದ ಸಭೆ ನಡೆಸಿ, ಲೋಕಸಭಾ ಚುನಾವಣೆ ವೇಳೆಗೆ ಸೇರ್ಪಡೆಯಾಗುವ ಅಂತಿಮ ತೀರ್ಮಾನ ಕೈಗೊಳ್ಳೋಣ ಎಂದು ರಾಜೇಶ್ ಹೇಳಿದರು.
ನಾವು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಗಳನ್ನು ಹಳ್ಳಿಗಳಲ್ಲಿ ಮನೆಮನೆಗೆ ಪ್ರಚಾರಪಡಿಸುವಾಗ ಹಾಲಿ ಶಾಸಕರು ಅವರು ಟಿಕೇಟ್ ಲಾಭಿಗಾಗಿ ಬೆಂಗಳೂರಿಗೆ ಪದೇ ಪದೇ ತೆರಳುತ್ತಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ಏನಿದೆ? ಎಂದು ರಾಜೇಶ್ ಇದೇ ವೇಲೆ ಪ್ರಶ್ನಿಸಿದರು.
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಎಲ್ಲಾ ನಿರೀಕ್ಷೆಯಿತ್ತು. ಆಗ ಸ್ವಾಭಿಮಾನಿ ಪಕ್ಷದಿಂದ ನಾನು ಸ್ಪರ್ಧಿಸಿದ್ದರ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕಾರಣವಾಯಿತು. ಅದನ್ನು ಮರೆತು ಶಾಸಕರು ತೆಂಗಿನಮರ ಗುರುತಿಗೆ ಮತ ಚಲಾಯಿಸಿದವರನ್ನು ತಾತ್ಸಾರ ಮಾಡುವುದು ಸರಿಯಲ್ಲ ಎಂದರು.
ಬಿಜೆಪಿ ಪಕ್ಷ ಸೇರ್ಪಡೆಗೆ ವ್ಯಾಪಕ ಕೂಗು: ಟಿಕೇಟ್ ತಪ್ಪಿಸಿದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಬಿಜೆಪಿ ಸೇರ್ಪಡೆಯಾಗಬೇಕು ಎಂಬ ಅಭಿಪ್ರಾಯಗಳು ಸಭೆಯಲ್ಲಿ ವ್ಯಾಪಕವಾಗಿ ವ್ಯಕ್ತವಾದವು. ಉಳಿದಂತೆ ಕೆಲ ಮುಖಂಡರುಗಳು ಯಾವುದೇ ಪಕ್ಷಕ್ಕೆ ಸೇರ್ಪಡೆಯಾದರೂ ತಮ್ಮ ನಿರ್ಧಾರಕ್ಕೆ ನಾವು ಬದ್ದರಾಗಿರುತ್ತೇವೆ. ಆದರೆ ತಮ್ಮ ಸ್ಥಾನ ಭದ್ರಪಡಿಸಿಕೊಂಡು ಸೇರ್ಪಡೆಗೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖಂಡರಾದ ಯು.ಜಿ. ಶಿವಕುಮಾರ್, ಎನ್.ಎಸ್.ರಾಜಣ್ಣ, ಬೇವಿನಹಳ್ಳಿ ಯಶವಂತಗೌಡ , ಬಾಬುರೆಡ್ಡಿ, ಗಡಿಗುಡಾಳ್ ಸುರೇಶ್, ಮೊಬೈಲ್ ಮಂಜುನಾಥ್, ತಿಪ್ಪೇಸ್ವಾಮಿಗೌಡ, ಸಲಾಂ ಸಾಬ್, ಭೈರೇಶ್, ರಾಜಶೇಖಗೌಡ, ಮಹಾಂತೇಶ್ ನಾಯ್ಕ, ತಳವಾರ ಮಂಜಣ್ಣ, ವಕೀಲ ಮರೇನಹಳ್ಳಿ ಬಸವರಾಜ್, ಕರಿಬಸಪ್ಪ, ನಾಗರಾಜ್, ಪುರುಷೋತ್ತಮನಾಯ್ಕ, ಹೇಮಣ್ಣ, ನಾಗರಾಜ್, ಸೂರಲಿಂಗಪ್ಪ, ಬಿ.ಲೋಕೇಶ್, ರೇವಣ್ಣ, ಶ್ರೀನಿವಾಸ್, ಗಿಡ್ಡಪ್ಪ, ತಿಪ್ಪೇಸ್ವಾಮಿ, ಬಸಣ್ಣ, ಓಬಳೇಶ್, ವೆಂಕಟೇಶ್, ದೇವರಾಜ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.