ದಾವಣಗೆರೆ, ಫೆ. 11 – ವಿಶೇಷ ಚೇತನರ ಬದುಕು ಹಸನು ಮಾಡುವ ಹಾಗೂ ಅವರ ಜೀವನ ಮಟ್ಟ ಸುಧಾರಿಸುವ ರೀತಿಯಲ್ಲಿ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದರು.
ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯ್ತಿ ಮತ್ತು ಸ್ಫೂರ್ತಿ ಸಂಸ್ಥೆ, ದಾವಣಗೆರೆ ಇವುಗಳ ಸಂಯುಕ್ತಾ ಶ್ರಯದಲ್ಲಿ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಶೇ.5ರ ಅನುದಾನದಡಿಯಲ್ಲಿ ವಿಶೇಷ ಚೇತನರ ಕಲ್ಯಾಣ ನಿಧಿಯ ಕ್ರಿಯಾ ಯೋಜನೆ ಹಾಗೂ ಅಡೆ – ತಡೆ ರಹಿತ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಿಮೋಫಿಲಿಯಾ ಹಾಗೂ ತಲಸೇಮಿಯ ರೀತಿಯ ಸಮಸ್ಯೆ ಎದುರಿಸುತ್ತಿರುವವರೂ 2016ರ ವಿಶೇಷಚೇತನರ ಕಾಯ್ದೆಯಡಿ ಬರುತ್ತಾರೆ. ಹೀಗಾಗಿ ಅಧಿಕಾರಿಗಳು ಸೌಲಭ್ಯಗಳನ್ನು ಕಲ್ಪಿಸುವಾಗ ಮೂಗಿನ ನೇರಕ್ಕೆ ಯೂಚಿಸದೇ, ಎಲ್ಲ ರೀತಿಯ ವಿಶೇಷಚೇತನರ ಅಗತ್ಯ ಪರಿಗಣಿಸಬೇಕು ಎಂದರು.
ವಿಶೇಷಚೇತನರು ತಂತ್ರಜ್ಞಾನ ಬಳಕೆ ಮಾಡಿಕೊಂಡು ಉತ್ತಮ ಬದುಕು ಕಂಡುಕೊಳ್ಳುವ ವ್ಯವಸ್ಥೆ ರೂಪಿಸಬೇಕು. ಇದಕ್ಕಾಗಿ ಅಧಿಕಾರಿಗಳು ಕಂಕಣಬದ್ಧವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಮೂರ್ತಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ ಮಾತನಾಡಿ, ವಿಶೇಷಚೇತನರು ನೆರವು ಪಡೆಯುವುದು ಅವರ ಹಕ್ಕು. ಇದನ್ನು ಅನುಕಂಪ ಎಂದು ಭಾವಿಸಬೇಕಿಲ್ಲ ಎಂದರು.
ಅಂಧರ ಪುಸ್ತಕದ ಹೊರೆ ಇಳಿಸಿ : ವೀರೇಶ್ ಮನವಿ
ಅಂಧ ವಿದ್ಯಾರ್ಥಿಗಳು ಬ್ರೈಲ್ ಲಿಪಿಯ ಪುಸ್ತಕಗಳನ್ನು ಖರೀದಿಸುವುದು ಹಾಗೂ ಬಳಸುವುದು ಸಮಸ್ಯೆಯಾಗಿದೆ. ಆರ್ಬಿಟ್ ರೀಡರ್ ಎಂಬ ಉಪಕರಣದಲ್ಲಿ ಅಂಧರು ಪುಸ್ತಕಗಳ ಓದುವುದು ಅತ್ಯಂತ ಸುಲಭ. ಇಂತಹ ಉಪಕರಣಗಳನ್ನು ಒದಗಿಸಬೇಕು ಎಂದು ರಾಷ್ಟ್ರೀಯ ದೃಷ್ಟಿ ದೋಷ ಸಂಘದ ಯುವ ಕಾರ್ಯದರ್ಶಿ ವೀರೇಶ್ ಮನವಿ ಮಾಡಿದರು.
ಸಾಮಾನ್ಯವಾಗಿ 300 ಪುಟಗಳಿರುವ ಪುಸ್ತಕಗ ಳನ್ನು ಬ್ರೈಲ್ ರೂಪದಲ್ಲಿ ಮುದ್ರಿಸಿದಾಗ ಸಂಪುಟಗಳೇ ಆಗುತ್ತವೆ. ದಪ್ಪ ಕಾಗದದಲ್ಲೇ ಮುದ್ರಣ ಮಾಡಬೇಕು. ಇದರಿಂದಾಗಿ ಬ್ರೈಲ್ ಪುಸ್ತಕಗಳು ಅಂಧ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತವೆ. ಇದರ ಬದಲು ಆರ್ಬಿಟ್ ರೀಡರ್ ಉಪಕರಣ ನೀಡಿದರೆ, ಅಧ್ಯಯನಕ್ಕೆ ಅನುಕೂಲವಾಗುತ್ತದೆ ಎಂದರು.
ವಿಶೇಷ ಚೇತನರ ಕುರಿತ ಕ್ರಿಯಾ ಯೋಜನೆ ರೂಪಿಸುವಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಕಂಡು ಬರುತ್ತದೆ. ಮಾರ್ಚ್ ಹತ್ತಿರ ಬಂದಾಗ ಯೋಜನೆ ರೂಪಿಸುವ ಬದಲು, ಆರ್ಥಿಕ ವರ್ಷದ ಆರಂಭದಲ್ಲೇ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.
ಕೆಲವು ವಿಶೇಷಚೇತನರು ತಮ್ಮ ಹಕ್ಕುಗಳ ದುರ್ಬಳಕೆ ಮಾಡಿಕೊಳ್ಳುವುದೂ ಕಂಡು ಬಂದಿದೆ. ಸರ್ಕಾರ ನಿಯಮಗಳಲ್ಲಿ ಅವಕಾಶವಿಲ್ಲದಿದ್ದರೂ ಇಂಥದೇ ನೆರವು ಬೇಕೆಂಬ ದೂರುಗಳನ್ನು ದಾಖಲಿಸುತ್ತಿದ್ದಾರೆ. ಇಂತಹ ಪ್ರವೃತ್ತಿ ಬಿಡಬೇಕು ಎಂದೂ ಅವರು ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯ್ತಿ ಯೋಜನಾ ಅಧಿಕಾರಿ ಕೆ. ಮಲ್ಲಾನಾಯ್ಕ ಮಾತನಾಡಿ, ಅನುದಾನದಲ್ಲಿ ವಿಶೇಷ ಚೇತನರ ಅನುದಾನ ಶೇ.5ಕ್ಕೆ ಸೀಮಿತವಲ್ಲ. ಅದಕ್ಕೂ ಹೆಚ್ಚಿನ ಅನುದಾನ ನೀಡಲು ಕಾಯ್ದೆಯಲ್ಲಿ ಅವಕಾಶ ಇದೆ ಎಂದರು.
ವಿಶೇಷಚೇತನರಿಗೆ ಕೇವಲ ವಾಹನ ನೀಡುವುದಕ್ಕೆ ಆದ್ಯತೆ ನೀಡಬಾರದು. ಅವರ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ಉಪಕರಣಗಳನ್ನು ನೀಡಬೇಕು. ಮಾರ್ಚ್ ವೇಳೆಗೆ ಅವಧಿ ಮೀರುವ ಅನುದಾನಗಳನ್ನು ಮೊದಲು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ವೇದಿಕೆಯ ಮೇಲೆ ವಿಶೇಷಚೇತನರ ಇಲಾಖೆ ಮಾಜಿ ರಾಜ್ಯ ಆಯುಕ್ತ ರಾಜಣ್ಣ, ವಿಶೇಷಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣಾಧಿಕಾರಿ ಕೆ. ಪ್ರಕಾಶ್, ಸ್ಫೂರ್ತಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಕೆ.ಬಿ. ರೂಪಾನಾಯ್ಕ, ಪಾಲಿಕೆ ಉಪ ಆಯುಕ್ತೆ ನಳಿನ್ ಮತ್ತಿತರರು ಉಪಸ್ಥಿತರಿದ್ದರು.