ಮಲೇಬೆನ್ನೂರಿನಲ್ಲಿ ರೈತರ ಹೋರಾಟ ತೀವ್ರ

ಮಲೇಬೆನ್ನೂರಿನಲ್ಲಿ ರೈತರ ಹೋರಾಟ ತೀವ್ರ

ಕೊಮಾರನಹಳ್ಳಿ ಬಳಿ ಹೆದ್ದಾರಿ ತಡೆ

ಇಂದು ಮಲೇಬೆನ್ನೂರು ಬಂದ್‌ಗೆ ಕರೆ

ಮಲೇಬೆನ್ನೂರು, ಸೆ. 21- ಭದ್ರಾ ಬಲದಂಡೆ ನಾಲೆಯಲ್ಲಿ ಸತತವಾಗಿ 100 ದಿನ ನೀರು ಹರಿಸುವಂತೆ ಆಗ್ರಹಿಸಿ ಹರಿಹರ ತಾಲ್ಲೂಕಿನ ರೈತರು 3ನೇ ದಿನವಾದ ಗುರುವಾರ ಕೊಮಾರನಹಳ್ಳಿ ಬಳಿ ರಾಜ್ಯ ಹೆದ್ದಾರಿ ತಡೆ ಚಳುವಳಿ ನಡೆಸಿದರು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮಲೇಬೆನ್ನೂರಿನ ನೀರಾವರಿ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ರೈತರು, ನಮ್ಮ ಸಮಸ್ಯೆ ಆಲಿಸಲು ಭದ್ರಾ ಅಧೀಕ್ಷಕ ಇಂಜಿನಿಯರ್ ಅಥವಾ ಡಿಸಿ, ಎಸ್ಪಿ-ಎಸಿ, ತಹಶೀಲ್ದಾರ್ ಯಾರೂ ಸೌಜನ್ಯಕ್ಕೂ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಕಾಲ್ನಡಿಗೆ ಮೂಲಕ ಕೊಮಾರನಹಳ್ಳಿ ಕೆರೆ  ಹೆದ್ದಾರಿಯಲ್ಲಿ ರಸ್ತೆ ತಡೆದು  ಚಳುವಳಿ ಮಾಡಿದರು.

ಈ ವೇಳೆ ಕುಂಬಳೂರಿನ ರೈತ ಸಿದ್ದಪ್ಪ ಎಂಬಾತ ನಾಲೆಯಲ್ಲಿ ನೀರು ಬಂದ್ ಮಾಡಿದ್ದರಿಂದ ಭತ್ತ ಬೆಳೆ ಹಾಳಾಗಿ ಸಂಕಷ್ಟಕ್ಕೆ ಒಳಗಾಗುತ್ತೇನೆಂಬ ಭಯದಿಂದ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆಯೂ ನಡೆಯಿತು.

ತಕ್ಷಣ ಆತನ ಅಕ್ಕ-ಪಕ್ಕದಲ್ಲಿದ್ದ ರೈತರು ಮತ್ತು ಸಿಪಿಐ ಸುರೇಶ್, ಪಿಎಸ್ಐ ಪ್ರಭು ಅವರು ರೈತ ವಿಷ ಕುಡಿಯುವು ದನ್ನು ತಡೆದು ವಿಷದ ಬಾಟಲಿಯನ್ನು ಕಸಿದುಕೊಂಡರು.

ಈ ಘಟನೆಯಿಂದ ಮತ್ತಷ್ಟು ಆಕ್ರೋಶಗೊಂಡ ರೈತರು ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದರು.

ರಸ್ತೆ ತಡೆ ಚಳುವಳಿಯಲ್ಲಿ ಭಾಗವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಕಳೆದ 2-3  ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಇದುವರೆಗೆ ಯಾವ ಅಧಿಕಾರಿಗಳು ಭೇಟಿ ನೀಡದಿರುವುದು ಸರ್ಕಾರದ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸುತ್ತದೆ. ಭದ್ರಾ ನಾಲೆಯಲ್ಲಿ ಸತತವಾಗಿ ನೀರು ಹರಿಸಿ ಇಲ್ಲವೇ ಎಕರೆಗೆ 30 ಸಾವಿರ ರೂ. ಬೆಳೆ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡುವಂತೆ ಒತ್ತಾಯಿಸಿದರು.

ಭದ್ರಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ರೈತರ ಪರವಾಗಿದ್ದು, ನಾಲೆಯಲ್ಲಿ ಸತತವಾಗಿ ನೀರು ಹರಿಸುವಂತೆ ನೀರಾವರಿ ಸಚಿವರ ಮೇಲೆ ಒತ್ತಡ ಹಾಕಿದ್ದಾರೆ.  ನಾಲೆಯಲ್ಲಿ ಸತತವಾಗಿ ನೀರು ಹರಿಸುವ ವಿಶ್ವಾಸವಿದ್ದು, ಇನ್ನೆರಡು ದಿನ ಸಮಾಧಾನದಿಂದ ಇದ್ದು, ಶಾಂತಿಯಿಂದ ಪ್ರತಿಭಟನೆ ಮಾಡೋಣ ಎಂದು ದ್ಯಾವಪ್ಪ ರೆಡ್ಡಿ ರೈತರಲ್ಲಿ ಮನವಿ ಮಾಡಿದರು.

ಅಷ್ಟೊತ್ತಿಗಾಗಲೇ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ ಎಂದು ಪೊಲೀಸರು ಮಾಡಿದ ಮನವಿಗೆ ಸ್ಪಂದಿಸಿದ ರೈತರು ಹೆದ್ದಾರಿ ತಡೆ ಚಳುವಳಿ ಕೈ ಬಿಟ್ಟು, ನೀರಾವರಿ ಕಛೇರಿ ಆವರಣಕ್ಕೆ ಬಂದು ಧರಣಿ ಕುಳಿತರು.

ಹೆದ್ದಾರಿ ತಡೆ ವಿಷಯ ತಿಳಿದ ಭದ್ರಾ ಅಧೀಕ್ಷಕ ಇಂಜಿನಿಯರ್ ಸುಜಾತ, ದಾವಣಗೆರೆ ಉಪವಿಭಾಗಾಧಿಕಾರಿ ದುರ್ಗಾಶ್ರೀ, ಗ್ರಾಮಾಂತರ ಡಿವೈಎಸ್ಪಿ ಬಸವರಾಜ್, ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರು ನೀರಾವರಿ ಕಛೇರಿಗೆ ಆಗಮಿಸಿದಾಗ ರೈತರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. 

ನಂತರ ರೈತರನ್ನು ಸಮಾಧಾನಪಡಿಸಿದ ವೀರೇಶ್, ದ್ಯಾವಪ್ಪ ರೆಡ್ಡಿ ಅವರು ಭದ್ರಾ ಅಧೀಕ್ಷಕ ಇಂಜಿನಿಯರ್ ಸುಜಾತ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು.

ಈ ಮುಂಗಾರಿನಲ್ಲಿ ಈ ನಮ್ಮ ಡ್ಯಾಂ ವಿಪರೀತ ವೈಫಲ್ಯ ಕಂಡಿದೆ. 2003ರಲ್ಲಿ ಇದೇ ರೀತಿ ಪರಿಸ್ಥಿತಿ ಉಂಟಾಗಿತ್ತು. ಆಗ ನಾವು ಆಫ್ ಅಂಡ್‌ ಆನ್ ಪದ್ಧತಿ ಜಾರಿಗೊಳಿಸಿದ್ದೆವು. ಈಗಿನ ಪರಿಸ್ಥಿತಿಯಲ್ಲಿ ಆಫ್-ಆನ್ ಅಥವಾ ನಾಲೆಯಲ್ಲಿ ನೀರಿನ ಹರಿವು ಕಡಿಮೆ ಮಾಡಿ ನೀರು ಹರಿಸುವ ಆಯ್ಕೆ ನಮ್ಮ ಮುಂದಿವೆ. ಈ ಬಗ್ಗೆ ನೀರಾವರಿ ಸಚಿವರಿಗೆ ವರದಿ ಸಲ್ಲಿಸಿ ದ್ದೇವೆ. ಅವರ ತೀರ್ಮಾನದಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಭದ್ರಾ ಎಸ್ಇ ಸುಜಾತ ಸ್ಪಷ್ಟಪಡಿಸಿದರು.

ಉಪವಿಭಾಗಾಧಿಕಾರಿ ದುರ್ಗಾಶ್ರೀ ಮಾತನಾಡಿ, ರೈತರ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ. ನಿಮ್ಮ ಪರವಾಗಿ ನಾವು ಸರ್ಕಾರಕ್ಕೆ ವರದಿ ನೀಡಿದ್ದೇವೆ. ಸರ್ಕಾರದ ತೀರ್ಮಾನ ಬರುವವರೆಗೆ ತಾಳ್ಮೆಯಿಂದ ಇರಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಆ ಕೆಲಸವನ್ನು ಮಾಡುತ್ತೇವೆ. ರೈತರು ಧೈರ್ಯದಿಂದಿರಬೇಕೆಂದು ಶ್ರೀನಿವಾಸ್ ಹೇಳಿದರು.

ಅಂತಿಮವಾಗಿ ಮಾತನಾಡಿದ ರೈತ ಮುಖಂಡ ಮುದೇಗೌಡ್ರ ತಿಪ್ಪೇಶ್,  ಶುಕ್ರವಾರ ಮಲೇಬೆನ್ನೂರು ಬಂದ್‌ಗೆ ಕರೆ ನೀಡಿದ್ದು, ಪಟ್ಟಣದ ಜನತೆ ಸಹಕರಿಸುವಂತೆ ಕೋರಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಎಂ. ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಿಗಳಿ ಆನಂದಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಭಾನುವಳ್ಳಿ ಗುತ್ಯೆಪ್ಪ, ಮುಖಂಡ ಸುರೇಶ್ ಹಾದಿಮನಿ, ಐರಣಿ ಅಣ್ಣಪ್ಪ, ರೈತ ಸಂಘದ ಸಿರಿಗೆರೆ ಪಾಲಾಕ್ಷಪ್ಪ, ಹಾಳೂರು ನಾಗರಾಜ್, ಭಾನುವಳ್ಳಿ ಕೊಟ್ರೇಶ್, ಪ್ರಕಾಶ್, ನಂದಿತಾವರೆ ಮುರುಗೇಂದ್ರಯ್ಯ, ಎಳೆಹೊಳೆ ಕುಮಾರ್, ಎಂ. ಕರಿಬಸಯ್ಯ, ಬಿ. ವೀರಯ್ಯ, ಎಂ.ಜಿ. ಗಜಾನನ ಮೆಹರ್ವಾಡೆ, ಕೆ.ಜಿ. ಮಂಜುನಾಥ್, ಬೆಣ್ಣೆಹಳ್ಳಿ ಸಿದ್ದೇಶ್, ಹುಳ್ಳಳ್ಳಿ ಸಿದ್ದೇಶ್, ತಳಸದ ಬಸವರಾಜ್, ಚಿಟ್ಟಕ್ಕಿ ನಾಗರಾಜ್, ಪಿ.ಹೆಚ್. ಶಿವಕುಮಾರ್, ಬಿ. ಚಂದ್ರಪ್ಪ, ಹೊಸಳ್ಳಿ ಕರಿಬಸಪ್ಪ, ಕುಂಬಳೂರಿನ ಎ.ಎನ್. ಆಂಜನೇಯ, ನಾಗೋಳ್ ಕಲ್ಲೇಶ್, ಕೆ. ಆಂಜನೇಯ, ಮಾಗಾನಹಳ್ಳಿ ವಾಸು, ಕೆ. ಕಾಮರಾಜ್, ನಿಟ್ಟೂರಿನ ಕೆ. ಸಂಜೀವಮೂರ್ತಿ, ಬಿ.ಜಿ. ಧನಂಜಯ, ಎಸ್.ಜಿ. ಹನುಮೇಶ್, ಜಿಗಳಿಯ ಬಿಳಸನೂರು ಚಂದ್ರಪ್ಪ, ಜಿ.ಪಿ. ಮಂಜುನಾಥ್, ಕೆ.ಎಸ್. ನಂದ್ಯಪ್ಪ, ಡಿ.ಆರ್. ಮಧುಸೂದನ್, ಬೆಣ್ಣೇರ ನಂದ್ಯಪ್ಪ, ಸಲ್ಲಳ್ಳಿ ಮಹಾಂತೇಶ್, ವಿನಾಯಕ ನಗರ ಕ್ಯಾಂಪಿನ ಶ್ರೀನಿವಾಸ್, ರಾಮಕೃಷ್ಣಪ್ಪ, ಸುಬ್ಬಣ್ಣ, ಹರಿಕೃಷ್ಣ, ಭುವನ್, ಕೊಕ್ಕನೂರಿನ ದಾಸರ ನಾಗರಾಜ್, ಹೆಚ್. ನಾಗರಾಜ್, ದಾಸರ ಸುರೇಶ್, ಜಿ. ಬೇವಿನಹಳ್ಳಿಯ ಕುಬೇರಗೌಡ, ಹೆಚ್.ಬಿ. ನಾಗರಾಜ್, ಗೋಣಿಗೆರೆ ನಂದಿಗೌಡ ಸೇರಿದಂತೆ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಉಪ ತಹಶೀಲ್ದಾರ್ ಆರ್. ರವಿ, ಎಇಇ ಧನಂಜಯ, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ ಈ ವೇಳೆ ಹಾಜರಿದ್ದರು. ವರ್ತಕರಾದ ಚಿಟ್ಟಕ್ಕಿ ರಮೇಶ್, ಚಿಟ್ಟಕ್ಕಿ ನಾಗರಾಜ್ ಸಹೋದರರು ಪ್ರತಿಭಟನಾ ನಿರತ ರೈತರಿಗೆ ಹಾಗೂ ಪೊಲೀಸರಿಗೆ ಊಟದ ವ್ಯವಸ್ಥೆ ಮಾಡಿದ್ದರು.

error: Content is protected !!