ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿಸಬೇಡಿ : ಬಾಮ

ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿಸಬೇಡಿ : ಬಾಮ

ದಾವಣಗೆರೆ, ಸೆ. 13- ದಾವಣಗೆರೆ ಉತ್ತರ ವಲಯದ ಆನೆಕೊಂಡ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ  ಉದ್ಘಾಟನಾ ಕಾರ್ಯಕ್ರಮವು 21 ನೇ ವಾರ್ಡ್ ಸರ್ಕಾರಿ ಪ್ರೌಢಶಾಲೆ ಬಸಾಪುರದ ಬಯಲು ರಂಗಮಂದಿರದಲ್ಲಿ  ನೆರವೇರಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಾಹಿತಿಗಳು, ಪತ್ರಕರ್ತರು, ರಂಗಕರ್ಮಿ ಬಾ.ಮ. ಬಸವರಾಜಯ್ಯ ನೆರವೇರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಬಾಮ, ಶಿಕ್ಷಕ ವರ್ಗದವರು ವಿದ್ಯಾರ್ಥಿ ಸಮುದಾಯ ವನ್ನು ಕೇವಲ ಪರೀಕ್ಷೆಗಳಲ್ಲಿ ಹೆಚ್ಚು  ಅಂಕ ಗಳಿಸುವ ಯಂತ್ರಗಳನ್ನಾಗಿ ಮಾಡಬಾರದು.  ಅವರಲ್ಲಿ ಸಾಹಿತ್ಯ, ಸಾಂಸ್ಕೃತಿಕವಾಗಿ ಆಸಕ್ತಿ ಕೆರಳಿಸುವ ಮೂಲಕ  ಅವರಲ್ಲಿನ ಪ್ರತಿಭೆಯನ್ನು ಅನಾವರಣಗೊಳ್ಳುವಂತೆ ಮಾಡಬೇಕು. ಪ್ರತೀ ಶನಿವಾರಕ್ಕೊಮ್ಮೆ ಇಂತಹ ಚಟುವಟಿಕೆಗಳಿಗೆ  ಶಾಲಾ-ಕಾಲೇಜುಗಳಲ್ಲಿ ಒತ್ತುಕೊಡಬೇಕು ಎಂದು ಮನವಿ ಮಾಡಿದರು.

ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಶಿವಲೀಲಾ ಕೊಟ್ರಯ್ಯ, ಎಸ್‌ಡಿಎಂಸಿ ಅಧ್ಯಕ್ಷ  ವಾಮದೇವಯ್ಯ, ಶಿಕ್ಷಣ ಪ್ರೇಮಿ ಹಾಗೂ ದಾನಿ ನಾಗೇಂದ್ರಚಾರ್ ಸೇರಿದಂತೆ, ಈ ಭಾಗದ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಮಲತಾ  ವಹಿಸಿದ್ದರು. ಆನೆಕೊಂಡ ಪ್ರಾಥಮಿಕ, ಪ್ರೌಢಶಾಲೆಗಳ ಮುಖ್ಯ ಶಿಕ್ಷಕರುಗಳು, ಶಿಕ್ಷಕರು, ತೀರ್ಪುಗಾರರು ಭಾಗವಹಿಸಿದ್ದರು. ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಶೇರ್ ಅಲಿ  ಸಮಾರಂಭದಲ್ಲಿ ಭಾಗವಹಿಸಿ, ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಿದರು.

ಶಿಕ್ಷಕಿ ಪುಷ್ಪವತಿ ಪ್ರಾರ್ಥಿಸಿದರು. ಶಿಕ್ಷಕರುಗಳಾದ ಸಿದ್ದಪ್ಪ ಸ್ವಾಗತಿಸಿದರು.  ನಾಗರಾಜ್ ವಂದಿಸಿದರು. ರವೀಂದ್ರ ಮತ್ತು ಮುಬಾರಕ್ ಅಲಿ ನಿರೂಪಿಸಿದರು.

error: Content is protected !!