ಬಿಎಸ್‌ಸಿಯಿಂದ ಗ್ರಾಹಕರಿಗೆ ಒಂದು ಸಾವಿರ ಸಸಿಗಳ ವಿತರಣೆ

ಬಿಎಸ್‌ಸಿಯಿಂದ ಗ್ರಾಹಕರಿಗೆ ಒಂದು ಸಾವಿರ ಸಸಿಗಳ ವಿತರಣೆ

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪರಿಸರವನ್ನು ಸಂರಕ್ಷಿಸಬೇಕು

– ಮಂಜುನಾಥ ಗಡಿಗುಡಾಳ್, ಸದಸ್ಯರು, ಮಹಾನಗರ ಪಾಲಿಕೆ

ದಾವಣಗೆರೆ, ಜೂ. 5 – ನಗರದ ಎಂಸಿಸಿ ಬಿ ಬ್ಲಾಕ್‌ನ ಬಿ.ಎಸ್. ಚನ್ನಬಸಪ್ಪ ಎಕ್ಸ್‌ಕ್ಲ್ಯೂಸಿವ್ ಅಂಗಡಿಯಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಒಂದು ಸಾವಿರ ಸಸಿಗಳನ್ನು ಗ್ರಾಹಕರಿಗೆ ಜವಳಿ ಉದ್ಯಮಿ ಬಿ. ಸಿ. ಉಮಾಪತಿ ಅವರ ನೇತೃತ್ವದಲ್ಲಿ ವಿತರಿಸಲಾಯಿತು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಹಾಗೂ ಹಾಲಿ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು, ಇತ್ತೀಚಿನ ದಿನಗಳಲ್ಲಿ ವಾತಾವರಣ ಕಲುಷಿತಗೊಳ್ಳುತ್ತಿದೆ. ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದರು. 

ವರ್ಷಕ್ಕೆ ಹತ್ತು ಗಿಡಗಳನ್ನು ನೆಟ್ಟರೆ 10 ವರ್ಷಕ್ಕೆ ನೂರು ಗಿಡಗಳನ್ನು ನೆಟ್ಟಂತಾಗುತ್ತದೆ. ಇದರಿಂದಾಗಿ ಒಳ್ಳೆಯ ಗಾಳಿ, ವಾತಾವರಣ ನಮಗೆಲ್ಲರಿಗೂ ಸಿಗುತ್ತದೆ. ಪರಿಸರ ಉಳಿದರೆ ನಾವು ಉಳಿದಂತೆ. ಹಸಿರೇ ಉಸಿರು ಎನ್ನುವ ಮಾತು ಚಾಲ್ತಿಯಲ್ಲಿದೆ. ಎಲ್ಲರೂ ಪರಿಸರ ಉಳಿಸಿ, ಬೆಳೆಸುವ ಕೆಲಸ ಮಾಡಬೇಕಿದೆ. ಅದೇ ರೀತಿಯಲ್ಲಿ ಗಿಡಗಳನ್ನು ನೆಟ್ಟರೆ ಸಾಲದು ಪೋಷಿಸಿ, ಬೆಳೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು. 

ಗಿಡ, ಮರ ಉಳಿದರೆ ನಾಡು ಉಳಿದಂತೆ. ಗಿಡ, ಮರಗಳನ್ನು ಪೋಷಿಸಿದರೆ ನಾಡಿಗೆ ಕೊಡುಗೆ ನೀಡಿದಂತಾಗುತ್ತದೆ. ಮರಗಳು ತುಂಬಾನೇ ಮುಖ್ಯ. 

ಸ್ವಚ್ಛವಾದ ಗಾಳಿ ಬೇಕಾದರೆ ಕಾಡು ಉಳಿಯಬೇಕು. ನಗರ ಪ್ರದೇಶಗಳು ಕಾಂಕ್ರೀಟೀಕರಣವಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಗಿಡ, ಮರ ಉಳಿಸಲು ಪಣ ತೊಡೋಣ ಎಂದು ಕರೆ ನೀಡಿದರು. 

1972 ರಲ್ಲಿ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ಕೊಟ್ಟರೂ ಅಧಿಕೃತವಾಗಿ 1974ರಿಂದ ಆಚರಿಸಲಾಗುತ್ತಿದೆ. ವಿಶ್ವದ 150 ದೇಶಗಳು ಸಹ ಪರಿಸರ ದಿನಾಚರಣೆ ಆಚರಿಸುತ್ತವೆ. ಅದರಲ್ಲಿ ಭಾರತ ದೇಶವೂ ಸಹ ಒಂದು. ನಾವೆಲ್ಲರೂ ಇಂದಿನಿಂದ ಸಂಕಲ್ಪ ಮಾಡೋಣ. ಪರಿಸರ ಉಳಿಸಿ, ಬೆಳೆಸುವ ಜೊತೆಗೆ ಕಾಪಾಡುತ್ತೇವೆ ಎಂದು ನಿರ್ಧರಿಸೋಣ. ಪರಿಸರ ಕುರಿತಂತೆ ಯಾರೂ ನಿರ್ಲಕ್ಷ್ಯ ವಹಿಸಬಾರದು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸ್ವಚ್ಛವಾದ ಗಾಳಿ ಬೇಕು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಬಿ.ಎಸ್. ಚನ್ನಬಸಪ್ಪ ಎಕ್ಸ್‌ಕ್ಲ್ಯೂಸಿವ್ ಶಾಪ್‌ನ ಸಿಬ್ಬಂದಿ ಪಾಲ್ಗೊಂಡಿದ್ದರು. ಸುಮಾರು 1 ಸಾವಿರ ಮಂದಿಗೆ ಗಿಡ ನೀಡುವ ಜೊತೆಗೆ ಉಳಿಸಿ, ಬೆಳೆಸೋಣ ಎಂಬ ಸಂಕಲ್ಪವನ್ನು ಹೇಳಿಕೊಡಲಾಯಿತು.

error: Content is protected !!