ಅಸಡ್ಡೆ ಮಾಡುವ ಅಧಿಕಾರಿಗಳಿಗೆ ಜಾಗವಿಲ್ಲ

ಅಸಡ್ಡೆ ಮಾಡುವ ಅಧಿಕಾರಿಗಳಿಗೆ ಜಾಗವಿಲ್ಲ

ಜನರು ಬಯಸಿರುವ ಬದಲಾವಣೆಗೆ ಸ್ಪಂದಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ದಾವಣಗೆರೆ, ಜೂ.5 – ಜನ ಬದಲಾವಣೆ ಬಯಸಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸದೇ ಉಡಾಫೆ, ಅಸಡ್ಡೆ ಮಾಡುವ ಅಧಿಕಾರಿಗಳಿಗೆ ಜಾಗವಿಲ್ಲ, ಅವರ ಮೇಲೆ ಯಾರದೂ ಮುಲಾಜಿ ಲ್ಲದೇ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. 

ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರಾಗಿದ್ದು, ಜನರ ಆಶೋತ್ತರಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು. 

ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಉತ್ತಮವಾದ ಸಂಬಂಧ ಇಟ್ಟುಕೊಳ್ಳಬೇಕು. ಅವರು ಪ್ರತಿನಿಧಿ, ಅಧಿಕಾರಿಗಳು ಜನ ಸೇವಕರು, ಜನರ ಕಷ್ಟ, ಸುಖಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ಆದರೆ ವಿಳಂಬ ಮಾಡಬಾರದು. ವಿಳಂಬ ಮಾಡುವುದು ಸಹ ಒಂದು ರೀತಿಯ ಭ್ರಷ್ಟಾಚಾರ ಮಾಡಿದಂತೆ ಎಂದು ಹೇಳಿದರು.

ಜಿಲ್ಲಾ ಮಟ್ಟದಲ್ಲಿ ಜನಸ್ನೇಹಿ ಆಡಳಿತ ಇರ ಬೇಕು. ಜನರು ಕಚೇರಿಗಳಿಗೆ ಬಂದಾಗ ಗೌರವಯು ತವಾಗಿ ನಡೆದುಕೊಂಡು, ಕಷ್ಟಗಳಿಗೆ ಪರಿಹಾರ ಮಾಡುವುದಲ್ಲದೇ ಜನರ ಜೊತೆ ಸೌಜನ್ಯ ಯುತವಾಗಿ ನಡೆದುಕೊಳ್ಳಬೇಕು ಎಂದರು.

ಅಧಿಕಾರಿಗಳ ಕ್ಷೇತ್ರ ಭೇಟಿಗೆ ಸೂಚನೆ: ಜಿಲ್ಲಾಧಿಕಾರಿ ತಹಶೀಲ್ದಾರರ ಕಚೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳಿಗೆ, ಆಸ್ಪತ್ರೆಗಳಿಗೆ ಭೇಟಿ ನೀಡ ಬೇಕು. ಇದರಿಂದ ಕೆಳಗಿನ ಅಧಿಕಾರಿಗಳು ಜಾಗೃತ ರಾಗುವರು. ಅಧಿಕಾರಿಗಳು ತಮ್ಮ ಜವಾಬ್ದಾರಿ, ಕರ್ತವ್ಯವನ್ನು ಸಮಾಜದ ಅಭಿವೃದ್ದಿಗಾಗಿ ಮಾಡಬೇಕು. ಮೇಲಾಧಿಕಾರಿಗಳು ಪದೇ ಪದೇ ಭೇಟಿ ನೀಡಿ ಕೆಲಸ ಕಾರ್ಯಗಳ ಪರಿಶೀಲನೆ, ಉಸ್ತುವಾರಿ ಮಾಡಲಿಲ್ಲವೆಂದರೆ ಭ್ರಷ್ಟಾಚಾರ ಕಡಿಮೆಯಾಗುವುದಿಲ್ಲ. ಜಿಲ್ಲಾ ಮಟ್ಟದ ಆಡಳಿತ ಸದಾ ಪಾರದರ್ಶಕವಾಗಿರಬೇಕು ಎಂದರು.

ದೂರುಗಳಿಗೆ ಪ್ರತಿಕ್ರಿಯಿಸಿ: ಪತ್ರಿಕೆಗಳು, ಟಿ.ವಿ.ಗಳಲ್ಲಿ ಮತ್ತು ಸಾರ್ವಜನಿಕರಿಂದ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು. ಅನೇಕ ಅಧಿಕಾರಿಗಳು ಕ್ಷೇತ್ರಗಳಿಗೆ ಹೋಗದೆ ಹವಾನಿಯಂತ್ರಿತ ಕೊಠಡಿಗಳಲ್ಲಿ ಕೂತು ಹೋಗುತ್ತಾರೆ. ಸರ್ಕಾರ ವಾಹನ ಸೇರಿದಂತೆ ಎಲ್ಲಾ ಸೌಲಭ್ಯ ನೀಡಿದ್ದು ಐಷಾರಾಮಿ ಜೀವನ ಮಾಡಲಿ ಎಂದಲ್ಲ, ಜನರ ಕೆಲಸ ಮಾಡಲಿ ಎಂದು, ತಮ್ಮ ಅಧಿಕಾರ ದುರುಪಯೋಗ ಮಾಡಿಕೊಳ್ಳದೇ ಜನರ ಕೆಲಸ ಮಾಡಬೇಕೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಎಂದರು.

ಪೂರ್ವ ಮುಂಗಾರು ನಷ್ಟ ಪರಿಹಾರ: ಪೂರ್ವ ಮುಂಗಾರಿನಲ್ಲಿ ಬಿದ್ದ ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಬೆಳೆಗಳಿಗೆ ಹಾನಿಯಾಗಿದ್ದು, ಇದಕ್ಕೆ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯನ್ವಯ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಲಾಗುತ್ತದೆ ಎಂದರು.

ಜೂನ್ 9 ರಿಂದ ಮುಂಗಾರು ಪ್ರವೇಶ: ಇದೇ ಜೂನ್ 9 ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಪ್ರವೇಶಿಸುವ ಮುನ್ಸೂಚನೆ ಇದ್ದು ಕೃಷಿ ಚಟುವಟಿಕೆಗಳು ಹೆಚ್ಚಾಗಲಿವೆ. ಈ ವೇಳೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಜಂಟಿ ಕೃಷಿ ನಿರ್ದೇಶಕರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಬಿತ್ತನೆ ಬೀಜ, ರಸಗೊಬ್ಬರ, ರಾಸಾಯನಿಕಗಳ ದಾಸ್ತಾನಿನ ಬಗ್ಗೆ ನಿಗಾವಹಿಸಬೇಕು. ಇದೇ ವೇಳೆ ಪ್ರವಾಹ ತಡೆಗೂ ಪೂರ್ವ ಸಿದ್ದತಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿಯವರು ಜಿಲ್ಲೆಯ ಅಂಕಿ-ಅಂಶಗಳ ಕುರಿತು ಸವಿವರವಾದ ಮಾಹಿತಿ ಪ್ರಸ್ತುತಪಡಿಸಿದರು. ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗ, ಜಗಳೂರು ಶಾಸಕ ಡಿ.ದೇವೇಂದ್ರಪ್ಪ, ಹರಿಹರ ಶಾಸಕ ಬಿ.ಪಿ.ಹರೀಶ್, ಹರಪನಹಳ್ಳಿ ಶಾಸಕರಾದ ಲತಾ ಮಲ್ಲಿಕಾರ್ಜುನ್, ಮಹಾನಗರ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣ್.ಕೆ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!