ಪರಿಸರ ನಾಶ ನಿಂತ ಟೊಂಗೆಗೆ ಕೊಡಲಿಯಂತೆ

ಪರಿಸರ ನಾಶ ನಿಂತ ಟೊಂಗೆಗೆ ಕೊಡಲಿಯಂತೆ

ಬಿ.ಐ.ಇ.ಟಿ.ಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಕಾಪಶಿ

ದಾವಣಗೆರೆ, ಜೂ. 5 – ಮಾಲಿನ್ಯದಿಂದ ಭೂಮಿಯನ್ನು ನಾಶ ಮಾಡುವುದು ಎಂದರೆ, ನಾವು ನಿಂತ ಟೊಂಗೆಗೆ ಕೊಡಲಿ ಹಾಕಿದಂತೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಎಚ್ಚರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಶಿಕ್ಷಣ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್‌ಗಳ ಸಂಯುಕ್ತಾಶ್ರಯದಲ್ಲಿ ನಗರದ ಬಿ.ಐ.ಇ.ಟಿ. ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಮಾಲಿನ್ಯದಿಂದ ಜೀವವೈವಿಧ್ಯಗಳು ನಾಶವಾಗುತ್ತಿವೆ. ಇದೊಂದು ರೀತಿ ಸಂಪತ್ತಿನ ನಷ್ಟದಂತೆ. ಬೇರೆ ಸಂತತಿ ಇಲ್ಲದಿದ್ದರೆ ಮಾನವರಿಗೂ ಸಂದಿಗ್ಧ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಿದರು.

ಪರಿಸರ ರಕ್ಷಣೆಗಾಗಿ ವಸ್ತುಗಳ ಬಳಕೆ ಕಡಿಮೆ ಮಾಡಬೇಕು. ಮರುಬಳಕೆಗೆ ಉತ್ತೇಜನ ನೀಡಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಲು ಸಾಧ್ಯ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಮೂರ್ತಿ ಮಹಾವೀರ ಎಂ. ಕರಣ್ಣ ಮಾತನಾಡಿ, ಪ್ಲಾಸ್ಟಿಕ್ ನಿಯಂತ್ರಣಕ್ಕಾಗಿ ಆದೇಶ ಹೊರಡಿಸಿದರೂ ಸಹ ಅದರ ಬಳಕೆ ಹೆಚ್ಚಾಗುತ್ತಿದೆ. ಸರ್ಕಾರದ ಜೊತೆ ಜನರೂ ಕೈ ಜೋಡಿಸಿ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಬೇಕು ಎಂದರು.

ಡಿಡಿಪಿಐ ಜಿ.ಆರ್. ತಿಪ್ಪೇಶಪ್ಪ ಮಾತನಾಡಿ, ಪರಿಸರ ಜಾಗೃತಿಗಾಗಿ 600 ವಿದ್ಯಾರ್ಥಿಗಳು ಇಂದು ಜಾಥಾ ನಡೆಸಿದ್ದಾರೆ. ಇದರ ಜೊತೆಗೆ ವಿದ್ಯಾರ್ಥಿಗಳು ಪರಿಸರ ರಕ್ಷಣೆಗೆ ದೃಢ ನಿರ್ಧಾರ ತಳೆಯಬೇಕಿದೆ. ಪರಿಸರ ರಕ್ಷಣೆಗೆ ಅಳಿಲು ಸೇವೆ ಸಲ್ಲಿಸುವುದೇ ಸಮಾಜ ಸೇವೆ ಎಂದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಹೆಚ್. ಲಕ್ಷ್ಮಿಕಾಂತ್ ಮಾತನಾಡಿ, ಭೂಮಿಯ ಮೇಲ್ಮೈ ಮಣ್ಣು ಅತ್ಯಮೂಲ್ಯ. ಆದರೆ, ಈ ಮಣ್ಣನ್ನು ಹೆದ್ದಾರಿ, ವಿಮಾನ ನಿಲ್ದಾಣ, ರೈಲ್ವೆ, ಇಟ್ಟಿಗೆ ಮತ್ತಿತರೆ ಉದ್ದೇಶಗಳಿಗೆ ಪೋಲು ಮಾಡಲಾಗುತ್ತಿದೆ. ಇದನ್ನು ತಪ್ಪಿಸಲು ಕ್ರಮದ ಅಗತ್ಯವಿದೆ ಎಂದರು.

ಜಿಲ್ಲಾ ವಕೀಲರ ಒಕ್ಕೂಟದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಮಾತನಾಡಿ, ಪ್ರತಿ ವರ್ಷ ವಿಶ್ವದಲ್ಲಿ 43 ಕೋಟಿ ಟನ್‌ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಶೇ.46ರಷ್ಟು ಭೂಮಿ ಸೇರುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿವಾರಣೆಗೆ ಆದ್ಯತೆ ನೀಡಬೇಕಿದೆ ಎಂದರು.

ಬಿ.ಐ.ಇ.ಟಿ. ಪ್ರಾಂಶುಪಾಲ ಹೆಚ್.ಬಿ. ಅರವಿಂದ ಅವರು ಪ್ಲಾಸ್ಟಿಕ್ ಮಾಲಿನ್ಯ ಪರಿಹಾರದ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಬಿಐಇಟಿ ನಿರ್ದೇಶಕ ಡಾ. ವೈ. ವೃಷಭೇಂದ್ರಪ್ಪ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಸ್ ಸುರೇಶ ಮತ್ತಿತರರು ಉಪಸ್ಥಿತರಿದ್ದರು.

ಕೆ.ಸಿ. ಶಿಲ್ಪ ನಿರೂಪಿಸಿದರೆ, ಶಿಲ್ಪ ಹಿರೇಮಠ್ ಪ್ರಾರ್ಥಿಸಿದರು. ಬಿ.ವಿ. ರಮ್ಯ ಸ್ವಾಗತಿಸಿದರು.

error: Content is protected !!