ದಾವಣಗೆರೆ ನೂತನ ಸಚಿವರಿಗೆ ಅದ್ಧೂರಿ ಸ್ವಾಗತ

ದಾವಣಗೆರೆ ನೂತನ ಸಚಿವರಿಗೆ ಅದ್ಧೂರಿ ಸ್ವಾಗತ

ದಾವಣಗೆರೆ, ಜೂ.3- ಗಣಿ, ಭೂ ವಿಜ್ಞಾನ ಹಾಗೂ ತೋಟಗಾರಿಕೆ ಖಾತೆ ಸಚಿವರು ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರಿ ವಹಿಸಿಕೊಂಡು, ಪ್ರಥಮ ಬಾರಿಗೆ ದಾವಣಗೆರೆಗೆ ಆಗಮಿಸಿದ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಶನಿವಾರ ಅದ್ಧೂರಿ ಸ್ವಾಗತ ಕೋರಲಾಯಿತು.

ಬೆಂಗಳೂರಿನಿಂದ ಸಿರಿಗೆರೆಯ ಶ್ರೀ ತರಳಬಾಳು ಬೃಹನ್ಮಠಕ್ಕೆ ತೆರಳಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದ ಮಲ್ಲಿಕಾರ್ಜುನ್ ಅವರು, ಸಂಜೆ 5.50ರ ವೇಳೆಗೆ ಜಿಲ್ಲಾ ಪಂಚಾಯ್ತಿ ಕಛೇರಿ ಆವರಣಕ್ಕೆ ಆಗಮಿಸಿದರು.

ಸಚಿವರು ಬರುವ ಸುದ್ದಿ ತಿಳಿದು ಅಭಿಮಾನಿಗಳು, ಕಾರ್ಯಕರ್ತರು ಮಧ್ಯಾಹ್ನ 3 ಗಂಟೆ ವೇಳೆಗೆ ಸಾವಿರಾರು ಸಂಖ್ಯೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಂಭಾಗ ಜಮಾಯಿಸಿದ್ದರು. ಸಂಜೆ 5.15ರ ಸುಮಾರಿಗೆ ಜಿಲ್ಲಾ ಪಂಚಾಯ್ತಿ ಮುಂಭಾಗದ ಹೆದ್ದಾರಿ ಮೂಲಕವೇ ಶಾಮನೂರಿಗೆ ತೆರಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮತ್ತೆ ಜಿಲ್ಲಾ ಪಂಚಾಯ್ತಿಗೆ 5.50ಕ್ಕೆ ಆಗಮಿಸಿದರು.

ಸಚಿವರು ಕಾರಿನಲ್ಲಿ ಆಗಮಿಸುತ್ತಿದ್ದಂತೆಯೆ ಅವರಿಗೆ ಹಾರ-ತುರಾಯಿ ಹಾಕಲು ನೂಕು ನುಗ್ಗಲು ಉಂಟಾಯಿತು. ಜನರನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರ ಸಾಹಸ ಪಡಬೇಕಾಯಿತು.

ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳ ಘೋಷಣೆ ಮುಗಿಲು ಮುಟ್ಟಿತ್ತು. ಮಲ್ಲಿಕಾರ್ಜುನ್ ಭಾವಚಿತ್ರದ ಬಾವುಟಗಳ ರಾರಾಜಿಸಿದವು. ಅವರಿಗೆ ಪುಷ್ಪ ವೃಷ್ಠಿ ಮಾಡಿ ಸ್ವಾಗತಿಸಲಾಯಿತು. 

ಜಿ.ಪಂ. ಆವರಣಕ್ಕೆ ಆಗಮಿಸಿದ ಎಸ್ಸೆಸ್ಸೆಂ, ಜೆ.ಹೆಚ್. ಪಟೇಲ್ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು. ಈ ವೇಳೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ, ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್, ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ, ಹರಿಹರ ಮಾಜಿ ಶಾಸಕ ಎಸ್.ರಾಮಪ್ಪ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ., ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್‌ ಬಿ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕ, ತಹಶೀಲ್ದಾರ್ ಅಶ್ವತ್ಥ್ ಸೇರಿದಂತೆ, ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

ಮಲ್ಲಿಕಾರ್ಜುನ್ ಅವರ ಮೆರವಣಿಗೆಗೆ ಕುದುರೆಯ ಸಾರೋಟು ತರಿಸಲಾಗಿತ್ತಾದರೂ, ಅವರು ತೆರೆದ ವಾಹನದಲ್ಲಿ ಸಾಗಿದರು. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ಹಾರ ಹಾಕಿ ಸ್ವಾಗತಿಸಿದರು. ಕಾರ್ಯಕರ್ತರು ಕಾಂಗ್ರೆಸ್ ಧ್ವಜದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ಜಿಲ್ಲಾ ಪಂಚಾಯ್ತಿ ಕಚೇರಿ ಮುಂಭಾಗದಿಂದ ಆರಂಭವಾದ ಮೆರವಣಿಗೆ ಹಳೇ ಭಾಗದಲ್ಲೂ ಸಂಚರಿಸಬೇಕಾಗಿತ್ತು. ಆದರೆ ಸಮಯದ ಅಭಾವದಿಂದ ಜಯದೇವ ವೃತ್ತದಲ್ಲಿ ಮೊಟಕುಗೊಳಿಸಿ, ನಂತರ ಕಲ್ಲೇಶ್ವರ ಮಿಲ್ ಆವರಣಕ್ಕೆ ತೆರಳಲಾಯಿತು. ಜಯದೇವ ವೃತ್ತದಲ್ಲಿ ಸಚಿವರು ಜನತೆಯನ್ನುದ್ದೇಶಿಸಿ ಮಾತನಾಡಿದರು.

ಡಾ.ಹೆಚ್.ವಿ. ಅರವಿಂದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.‌ಮಂಜಪ್ಪ, ಮುಖಂಡರುಗಳಾದ ಮಾಲತೇಶ್ ಜಾಧವ್,  ಮುದೇಗೌಡ್ರ ಗಿರೀಶ್, ಗಡಿಗುಡಾಳ್ ಮಂಜುಮಾಥ್, ಬೇತೂರು ಕರಿಬಸಪ್ಪ, ದಿನೇಶ್ ಕೆ.ಶೆಟ್ಟಿ, ಜಿ.ಸಿ. ನಿಂಗಪ್ಪ, ಮಾಗಾನಳ್ಳಿ ಪರಶುರಾಮ್, ಹದಡಿ ಹಾಲಪ್ಪ, ಅಯೂಬ್ ಪೈಲ್ವಾನ್, ಕೆ‌.ಜಿ. ಶಿವಕುಮಾರ್, ಆರನೇಕಲ್ಲು ಮಂಜುನಾಥ್ ಸೇರಿದಂತೆ ಪಾಲಿಕೆ ಸದಸ್ಯರು, ಕಾರ್ಯಕರ್ತರು ಇದ್ದರು.

ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ ಶಾಮನೂರು ಅವರು ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಯುವಕರ ಆಕರ್ಷಿಣಿಯ ಕೇಂದ್ರ ಆಗಿದ್ದರು. ಸಮರ್ಥ ಅವರನ್ನು ಯುವ ಸಮುದಾಯ ಸೇಲ್ಪಿಗೆ ಮುಗಿಬಿದ್ದರಲ್ಲದೇ ಜೈ ಜೈ ಮಲ್ಲಣ್ಣ ಸಾಂಗ್ ಗೆ ಹೆಜ್ಜೆ ಹಾಕಿಸಿದರು.ಕೊನೆಗೆ ಪೊಲೀಸರು ಆಗಮಿಸಿ ಮೆರವಣಿಗೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟರು.

error: Content is protected !!