ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇನೆ

ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇನೆ

ಜಗಳೂರು, ಮೇ 24- ಸೋಲನ್ನು ಸವಾಲಾಗಿ ಸ್ವೀಕರಿಸಿ, ಮತ್ತೆ ಕಾರ್ಯಕರ್ತ ರೊಂದಿಗೆ ಪಕ್ಷ ಕಟ್ಟುತ್ತೇನೆ. ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಇಂದು ನಡೆದ ಬಿಜೆಪಿ `ಕೃತಜ್ಞತಾ ಸಭೆ’ಯಲ್ಲಿ ಅವರು ಮಾತನಾಡಿದರು.

ಕ್ಷೇತ್ರದ ಶಾಸಕನಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. 3500 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ.  ಭದ್ರಾ ಮೇಲ್ದಂಡೆ ಯೋಜನೆ, 57 ಕೆರೆ ತುಂಬಿಸುವ ಯೋಜನೆ, ಜಲಜೀವನ್ ಮಿಷನ್  ಯೋಜನೆ ಯಂತಹ ಪ್ರಮುಖ ಮೂರು ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಆದರೂ ಅಲ್ಪ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದೇನೆ.

ಜನರ ಈ ತೀರ್ಪನ್ನು ಸ್ವೀಕರಿಸುತ್ತೇನೆ. ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಮತ್ತೆ ಸುತ್ತಾಡಿ ಪಕ್ಷ ಕಟ್ಟುತ್ತೇನೆ. ಮುಂಬರುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಬಾವುಟವನ್ನು ಮತ್ತೆ ಹಾರಿಸುತ್ತೇನೆ ಎಂದರು.

ಸೋಲಿಗೆ ಸಂಬಂಧಿಸಿದಂತೆ ಯಾರಿಗೂ ಟೀಕಿಸಬೇಡಿ. ಶಾಸಕನಾಗಿ ನಾನೇ ತಪ್ಪು ಮಾಡಿದ್ದರೆ ಕ್ಷಮಿಸಿ ಬಿಡಿ. ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿದ ಎಲ್ಲಾ ಕಾರ್ಯ ಕಾರ್ಯಕರ್ತರಿಗೆ ಮತ್ತು ಪಕ್ಷದ ಎಲ್ಲಾ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.  ನನ್ನ ಜೀವ ಇರುವವರೆಗೂ ನಿಮ್ಮ ಜೊತೆಗಿದ್ದು ನ್ಯಾಯಯುತ ಹೋರಾಟ ನಡೆಸುತ್ತೇನೆ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ ಎಂದು ಮಾಜಿ ಶಾಸಕರು ಭಾವುಕರಾದರು.

ನನ್ನ ಅಧಿಕಾರ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಗಲಾಟೆ, ಗದ್ದಲಗಳು ಆಗದಂತೆ ಶಾಂತಿ ಕಾಪಾಡಿದ್ದೇನೆ. ಮುಂದಿನ ದಿನಗಳಲ್ಲೂ ಸಹ ಕ್ಷೇತ್ರದಲ್ಲಿ ಎಲ್ಲರೂ ಶಾಂತಿಯಿಂದ ಸಹಬಾಳ್ವೆ ನಡೆಸುವಂತಾಗಲಿ.  ಆಡಳಿತ ಪಕ್ಷದ ಶಾಸಕರಿಗೆ, ಅವರ ಅಭಿವೃದ್ಧಿ ಕೆಲಸಗಳಿಗೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ. ನಾವು ಆರಂಭಿಸಿರುವ ಮೂರು ಮುಖ್ಯ ಯೋಜನೆಗಳನ್ನು ಪೂರ್ಣಗೊಳಿಸಿದರೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ರಾಮಚಂದ್ರ ತಿಳಿಸಿದರು.

ಪಕ್ಷದ ಹಿರಿಯ ಮಾಜಿ ಶಾಸಕರೊಬ್ಬರು ಹರಿಹರ, ಹೊನ್ನಾಳಿಯಲ್ಲಿ ಬಿಜೆಪಿಗೆ ಬೆಂಬಲಿಸಿದರು. ಆದರೆ ನಮ್ಮ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಿದರು ಇದು ಸರಿಯೇ? ಎಂದು ರಾಮಚಂದ್ರ ಕಾರ್ಯಕರ್ತರಿಗೆ ಪ್ರಶ್ನಿಸಿದರು. ನಾನು ಏನು ಅವರಿಗೆ ಅನ್ಯಾಯ ಮಾಡಿದ್ದೆ ? ಇದರಿಂದ ತುಂಬಾ ನನಗೆ ನೋವಾಗಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್. ನಾಗರಾಜ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಸುಳ್ಳು ಗ್ಯಾರಂಟಿ ಭರವಸೆಗಳು ಮತ್ತು ನಮ್ಮ ಸರ್ಕಾರ ಜಾರಿಗೊಳಿಸಿದ ಒಳ ಮೀಸಲಾತಿ ಪರಿಣಾಮದಿಂದಾಗಿ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ.  ನಮ್ಮ ಪಕ್ಷದ ಮುಖಂಡರೇ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಿ ಪಕ್ಷಕ್ಕೆ ದ್ರೋಹ ಮಾಡಿದರು ಎಂದು ವಿಷಾದ ವ್ಯಕ್ತಪಡಿಸಿದರು.

ಬೇವಿನಹಳ್ಳಿ ಕೆಂಚನಗೌಡ್ರು ಮಾತನಾಡಿ, ಪಕ್ಷದ ಸೋಲಿನ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೆಲವೇ ಮುಂದಿರುವ ಮುಖಂಡರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಫಲಾನುಭವಿಗಳಿಗೆ ತಲುಪಿಸದೆ ವಿಫಲರಾದರು. ಇದರಲ್ಲಿ ಶಾಸಕರ ತಪ್ಪೇನೂ ಇಲ್ಲ. ಮುಖಂಡರದ್ದೇ ತಪ್ಪು ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್ ಮಾತನಾಡಿ, ಶಾಸಕರು ನಿಗಮ ಮಂಡಳಿಯ ಅಧ್ಯಕ್ಷರಾಗಿ ಕ್ಷೇತ್ರದ ಸಾವಿರಾರು ಜನರಿಗೆ ಅನೇಕ ಸೌಲಭ್ಯಗಳನ್ನು ನೀಡಿ ದರು. ಆದರೂ ಮತದಾರರು ಕೈ ಹಿಡಿಯಲಿಲ್ಲ. ಅಲ್ಪ ಮತದ ಸೋಲು ತುಂಬಾ ನೋವುಂಟು ಮಾಡಿದೆ ಎಂದರು.

 ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಮುಖಂಡರ ಮತ್ತು ಪಕ್ಷದ ಪದಾಧಿಕಾರಿಗಳು ಪಕ್ಷದಿಂದ ಉಚ್ಚಾಟಿಸಲು ಜಿಲ್ಲಾ ಸಮಿತಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ. ನಾಗಪ್ಪ, ತಾ.ಪಂ. ಮಾಜಿ ಉಪಾಧ್ಯಕ್ಷ ಸಿದ್ದೇಶ್, ಜಿ.ಪಂ. ಮಾಜಿ ಸದಸ್ಯ ಎಸ್.ಕೆ ಮಂಜುನಾಥ್, ಮುಖಂಡರಾದ ಬಿಸ್ತುವಳ್ಳಿ ಬಾಬು, ವಿಶ್ವನಾಥಯ್ಯ, ಬಿ.ಸಿದ್ದಪ್ಪ, ಜೆ.ವಿ. ನಾಗರಾಜ್ ಮತ್ತಿತರರು ಮಾತನಾಡಿದರು.

error: Content is protected !!