ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸನ್ನದ್ಧ

ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸನ್ನದ್ಧ

2.46 ಲಕ್ಷ ಹೆ.ಬಿತ್ತನೆ ಗುರಿ, ಬೀಜ, ಗೊಬ್ಬರಕ್ಕೆ ಕೊರತೆ ಇಲ್ಲ : ಶ್ರೀನಿವಾಸ್ ಚಿಂತಾಲ್

ದಾವಣಗೆರೆ, ಮೇ 23- ಮುಂಗಾರು ಪೂರ್ವ ಮಳೆ ಭೂಮಿಯನ್ನು ತಂಪಾಗಿಸಿದ್ದು, ಭೂಮಿ ಹದಗೊಳಿಸಲು ರೈತರು ಸಿದ್ಧತೆ ನಡೆಸಲಾರಂಭಿಸಿ ದ್ದಾರೆ. ಇತ್ತ ಕೃಷಿ ಇಲಾಖೆಯೂ ಸನ್ನದ್ಧವಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಕಡಿಮೆಯಾಗಿದೆಯಾದರೂ, ಮುಂಗಾ ರು ಮಳೆಯ ಮೇಲೆ ಅನ್ನದಾತನ ಭರವಸೆ ಇದೆ.

ಮುಂಗಾರು ಜೂನ್ 7ಕ್ಕೆ ಕೇರಳಕ್ಕೆ ಆಗಮಿಸಲಿದ್ದು, 9ರ ನಂತರ ರಾಜ್ಯಕ್ಕೆ ಕಾಲಿಡುವ ಸೂಚನೆ ಇದೆ ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ.

ಮುಂಗಾರು ಹಂಗಾಮಿಗೆ ಜಿಲ್ಲೆಗೆ 2.46 ಹೆಕ್ಟೇರ್ ಗುರಿ ಹೊಂದಿದ್ದೇವೆ. ಸುಮಾರು 41  ಸಾವಿರ ಕ್ವಿಂಟಾಲ್ ಬಿತ್ತನೆ ಬೀಜದ ಅಗತ್ಯವಿದ್ದು, ಎಲ್ಲಾ ದಾಸ್ತಾನು ಇದೆ. ಮೇ ತಿಂಗಳಿಗೆ 24 ಸಾವಿರ ಟನ್  ರಸಗೊಬ್ಬರ ಬೇಕಿದ್ದು, ಈಗಾಗಲೇ 37 ಸಾವಿರ ಟನ್ ದಾಸ್ತಾನು ಹೊಂದಲಾಗಿದ್ದು, ಬೀಜ -ಗೊಬ್ಬರಕ್ಕೆ ಜಿಲ್ಲೆಯಲ್ಲಿ ಕೊರತೆ ಇಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಶ್ರೀನಿವಾಸ್ ಚಿಂತಾಲ್ ಹೇಳಿದ್ದಾರೆ.

ನಾಟಿ ಪದ್ಧತಿಯಲ್ಲಿ ತೊಗರಿ ಬೆಳೆಯುವುದು ಕಳೆದ ವರ್ಷ ಯಶಸ್ವಿಯಾಗಿ ಒಳ್ಳೆಯ ಇಳುವರಿ ಬಂದಿತ್ತು. ಈ ಬಾರಿಯೂ ಅದಕ್ಕೆ ಒತ್ತು ನೀಡಲಾಗುವುದು.

ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ಬೆಳೆಯಲ್ಪಡುವ ಮೆಕ್ಕೆಜೋಳ ಬೆಳೆಯಲ್ಲಿ ಮುಳ್ಳು ಸಜ್ಜೆಯಿಂದಾಗಿ ಇಳುವರಿ ಕುಂಠಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ತಳಿಯ ಬದಲು ಸೋಯಾ ಅವರೆ ಬೆಳೆಯುವಂತೆ ಉತ್ತೇಜಿಸಲಾಗುತ್ತಿದೆ. ತೊಗರಿಯನ್ನು ಅಂತರ ಬೆಳೆಯಾಗಿ ಬೆಳೆಯಲು ಉತ್ತೇಜನ ನೀಡಲಾಗುವುದು.  ಶೇಂಗಾದಲ್ಲಿ ಹೆಚ್ಚು ಇಳುವರಿ ನೀಡಬಲ್ಲ  ಹೊಸ ತಳಿಗಳನ್ನು ಪರಿಚಯಿಸುವ ಉದ್ದೇಶ ಹೊಂದಿದ್ದೇವೆ ಎಂದು ಡಾ.ಚಿಂತಾಲ್ ಹೇಳಿದರು.

2.46  ಲಕ್ಷ ಹೆಕ್ಟೇರ್ ಗುರಿ: ನೀರಾವರಿ ಪ್ರದೇಶದಲ್ಲಿ 86,147 ಹೆಕ್ಟೇರ್ ಹಾಗೂ ಖುಷ್ಕಿ ಭೂಮಿಯಲ್ಲಿ 1,59,936 ಹೆಕ್ಟೇರ್ ಪ್ರದೇಶ ಸೇರಿ ಒಟ್ಟಾರೆ ಜಿಲ್ಲೆಯಲ್ಲಿ 2,46,083 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಮುಖ್ಯವಾಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯಲ್ಪಡುವ ಮೆಕ್ಕೆಜೋಳಕ್ಕೆ 1,26,108 ಹೆಕ್ಟೇರ್ ಹಾಗೂ ಭತ್ತಕ್ಕೆ 65,847 ಹೆಕ್ಟೇರ್ ಗುರಿ ಇದೆ. ಉಳಿದಂತೆ ಜೋಳ ,2400 ಹೆಕ್ಟೇರ್, ರಾಗಿ 7,295, ಸಜ್ಜೆ 580 ಹೆಕ್ಟೇರ್ ಗುರಿ ಹೊಂದಲಾಗಿದೆ.

ತೊಗರಿ 13,500 ಹೆಕ್ಟೇರ್, ಅವರೆ, ಹಲಸಂದೆ, ಹೆಸರು ಸೇರಿದಂತೆ ದ್ವಿದಳ ಧಾನ್ಯಗಳಿಗೆ 16,309 ಹೆಕ್ಟೇರ್ ಗುರಿ ಹೊಂದಲಾಗಿದೆ.

ಶೇಂಗಾ 13,770 ಹೆಕ್ಟೇರ್, ಸೂರ್ಯಕಾಂತಿ  2,190 ಹೆಕ್ಟೇರ್, ಹತ್ತಿ 6,887 ಹೆಕ್ಟೇರ್, ಕಬ್ಬು 2,546 ಹೆಕ್ಟೇರ್ ಗುರಿ ಹೊಂದಲಾಗಿದೆ.

error: Content is protected !!