ಹಣ, ಜಾತಿ ಪ್ರಭಾವಕ್ಕೆ ಮನ್ನಣೆ, ನನ್ನ ಸೋಲಿಗೆ ಕಾರಣ

ಹಣ, ಜಾತಿ ಪ್ರಭಾವಕ್ಕೆ ಮನ್ನಣೆ, ನನ್ನ ಸೋಲಿಗೆ ಕಾರಣ

ಹರಿಹರ, ಮೇ 23- ಮತದಾರರು ಅಭಿವೃದ್ಧಿ ಕೆಲಸ ಮಾಡುವವರ ಕೈ ಹಿಡಿಯದೇ ಹಣ, ಜಾತಿ ಪ್ರಭಾವಕ್ಕೆ ಮನ್ನಣೆ ನೀಡಿದ್ದರಿಂದಲೇ ಈ ಬಾರಿಯ ಚುನಾವಣೆಯಲ್ಲಿ ನಾನು ಸೋಲನುಭವಿಸಬೇಕಾಯಿತು ಎಂದು ಮಾಜಿ ಶಾಸಕರೂ, ಜೆಡಿಎಸ್ ಅಭ್ಯರ್ಥಿಯೂ ಆಗಿದ್ದ ಹೆಚ್.ಎಸ್. ಶಿವಶಂಕರ್ ಬೇಸರ ವ್ಯಕ್ತಪಡಿಸಿದರು.

ನಗರದ ಹೆಚ್.ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ ಇಂದು ನಡೆದ `ಆತ್ಮಾವಲೋಕನ, ಆತ್ಮಶೋಧನಾ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೂರು ತಿಂಗಳ ಕಾಲ ಇಡೀ ತಾಲ್ಲೂಕಿ ನಾದ್ಯಂತ ಪ್ರವಾಸ ಮಾಡಿ ಬಿಜೆಪಿ ಭ್ರಷ್ಟಾಚಾರ, ಬೆಲೆಯೇರಿಕೆ, ಆಡಳಿತ ವೈಫಲ್ಯದ ಬಗ್ಗೆ ಜನರಿಗೆ ತಿಳಿಸುವ ಜೊತೆಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ `ಪಂಚರತ್ನ’ ಯೋಜನೆಯ ವಿಚಾರಗಳನ್ನು ಜನರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ದಾಖಲೆಯ ಮತಗಳನ್ನು ಗಳಿಸುತ್ತೇನೆಂಬ ಆತ್ಮವಿಶ್ವಾಸ ಕೂಡ ನನ್ನಲ್ಲಿತ್ತು. ಆದರೆ ಮತದಾರರು `ಕೈ’ ಹಿಡಿಯಲಿಲ್ಲ ಎಂದರು.

ಜೆಡಿಎಸ್‌ ಪಕ್ಷದ ಕಾರ್ಯಕರ್ತರು, ಮುಖಂಡರು ಸಾಕಷ್ಟು ಪ್ರಚಾರ ಮಾಡಿ ಮತ ದಾರರ ಮನವೊಲಿಸುವ ಪ್ರಯತ್ನ ಮಾಡಿದರೂ ವಿಫಲರಾದರು. ಚುನಾವಣೆಯಲ್ಲಿ ಜಾತಿ, ಹಣ ಹೆಚ್ಚು ಕೆಲಸ ಮಾಡಿದ್ದರಿಂದ ಪ್ರಾಮಾಣಿಕ ಪ್ರಯತ್ನಕ್ಕೆ ಬೆಲೆ ಇಲ್ಲವೆಂಬುದು ಸಾಬೀತಾಯಿತು ಎಂದು ಹೇಳಿದರು.

ಈ ಬಾರಿ ಹೊಂದಾಣಿಕೆ ರಾಜಕೀಯ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲೇ ಬೇಕೆಂದು ಕೆಲವರು ಬಿಜೆಪಿ ಪರ ಕೆಲಸ ಮಾಡಿದ್ದರ ಫಲವಾಗಿ ಬಿಜೆಪಿ ಅಭ್ಯರ್ಥಿ ಹರಿಹರ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ತಿಳಿಸಿದರು.

ಆಗಿರುವ ತಪ್ಪನ್ನು ಸರಿಪಡಿಸಿಕೊಂಡು ಮುಂಬರುವ ಜಿ.ಪಂ., ತಾ.ಪಂ., ಯಾವುದೇ ಚುನಾವಣೆಗಳಿರಲಿ ಸಿದ್ದತೆಗಳನ್ನು ಮಾಡಿಕೊಳ್ಳಲು ಮುಂದಾಗುವೆ. ಕೆಲವರು ನನ್ನ ಜೊತೆಗಿದ್ದು  ಹೇಡಿಗಳ ರೀತಿಯಲ್ಲಿ ವರ್ತನೆ ಮಾಡಿದ್ದು ಬೇಸರ ತಂದಿದೆ ಎಂದು ಹೇಳಿದರು.

ಐದು ಬಾರಿ ಚುನಾವಣೆಗೆ ಸ್ಪರ್ಧಿಸಿರುವ ನಾನು ಒಂದು ಬಾರಿ ಶಾಸಕನಾಗಿ, ಮತ್ತೊಂದು ಅವಧಿಯಲ್ಲಿ ವಿಧಾನಪರಿಷತ್ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಆಡಳಿತ ಅವಧಿಯಲ್ಲಿ 400 ಕೋಟಿ ರೂ. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಬಿಜೆಪಿ ಡಬಲ್ ಇಂಜಿನ್ ಸರ್ಕಾರದಲ್ಲಿ ಶಾಸಕರಾಗಿದ್ದ ರಾಮಪ್ಪ ಅವರಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡಲಿಕ್ಕೆ ಬಿಡಲಿಲ್ಲ ಎಂದರು.

ಹತ್ತು ವರ್ಷಗಳ ನಂತರ ಬಿ.ಪಿ.ಹರೀಶ್ ಮತ್ತೆ ಶಾಸಕರಾಗಿದ್ದಾರೆ. ನೆನೆಗುದಿಯಲ್ಲಿರುವ ಭೈರನಪಾದ ಯೋಜನೆಯನ್ನು ಅಭಿವೃದ್ಧಿಪಡಿಸಿ ಅವರ ಶಕ್ತಿ ತೋರಿಸಲಿ.  ಬಿಜೆಪಿ ಆಪರೇಷನ್ ಕಮಲ, ಭ್ರಷ್ಟಾಚಾರ, ದೇವರು ಮತ್ತು ಧರ್ಮದ ಹೆಸರಿನಲ್ಲಿ ಬಿತ್ತಿದ ಕೋಮುಭಾವನೆ, ರೈತ ವಿರೋಧಿ ನೀತಿ, ಬೆಲೆಯೇರಿಕೆ ಬಿಜೆಪಿ ಹೀನಾಯ ಸೋಲಿಗೆ ಕಾರಣವಾದವು ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಂತಾಯಿತು ಎಂದು ಹೇಳಿದರು.

ತಾ.ಪಂ. ಮಾಜಿ ಸದಸ್ಯ ಕೊಟ್ರೇಶ್ ಸಿರಿಗೆರೆ ಮಾತನಾಡಿ, ಎರಡೂ ರಾಷ್ಟ್ರೀಯ ಪಕ್ಷಗಳು ಹಣದ ಹೊಳೆಯನ್ನು ಹರಿಸಿದ್ದರ ಪರಿಣಾಮ ಮತ್ತು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಎಂಬ ಭರವಸೆಯಿಂದಾಗಿ ಸಾಮಾನ್ಯ ಮತದಾರರು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಕ್ಷೇತ್ರದಲ್ಲಿ ಕಳೆದ ಆರು ತಿಂಗಳಿಂದ ಸತತ ಹೋರಾಟ ಮಾಡಿಕೊಂಡು ಬಂದರೂ ಸೋಲು ಅನುಭವಿಸಬೇಕಾಯಿತು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ಪರಮೇಶ್ವರ ಗೌಡ್ರು, ಮಂಜುನಾಥ ಕಾಳೇರ್, ಜಿಗಳಿ ರಂಗಪ್ಪ, ಆರ್.ಸಿ. ಜಾವಿದ್, ಗೋವಿಂದಪ್ಪ ಸಾವಜ್ಜಿ ಸೇರಿದಂತೆ ಮುಖಂಡರು ಮಾತನಾಡಿದರು.

ಮುಖಂಡರಾದ ಹೆಚ್.ಎಸ್. ಅರವಿಂದ್, ಟಿ. ಮುಕುಂದ, ಮಿಟ್ಲಕಟ್ಟೆ ಚಂದ್ರಪ್ಪ, ರೆಹಮಾನ್ ಖಾನ್,  ಮದ್ದಿ ಮನ್ಸೂರ್, ಹಬೀಬ್ ವುಲ್ಲಾ, ಉಷಾ ಮಂಜುನಾಥ್, ಅಂಗಡಿ ಮಂಜುನಾಥ, ಬಿ. ಅಲ್ತಾಫ್, ಶಿಲಾಕುಮಾರಿ, ಗಂಗನಹರಸಿ ನಾಗೇಂದ್ರಪ್ಪ, ವಿನಯ ಚಂದ್ರಪ್ಪ, ಬೇವಿನಹಳ್ಳಿ ಮಲ್ಲಿಕಾರ್ಜುನ, ಬಸಟೆಪ್ಪ, ನಾಗರಾಜ್ ಮೆಹರ್ವಾಡೆ, ಅಸ್ರಾಖಾನ್, ಹೊನ್ನಮ್ಮ ಕೊಂಡಜ್ಜಿ, ಡಿ.ಯು. ಸಂಗಮೇಶ್, ಜಿಯಾವುಲ್ಲಾ, ಬಿ.ಎಂ. ಹಾಲಸ್ವಾಮಿ, ಮಲ್ಲನಾಯಕನಹಳ್ಳಿ ಚಂದ್ರು, ಅಮರಾವತಿ ನಾಗರಾಜ್, ಅಡಕಿ ಕುಮಾರ್, ಮುರುಗೇಶಪ್ಪ ಹಿಂಡಸಘಟ್ಟ, ಬಸವರಾಜ್ ಹೊಸಳ್ಳಿ ಮಲೇಬೆನ್ನೂರು, ಮಹದೇವಪ್ಪ, ಅಂಬರೀಶ್, ಲೋಕೇಶ್ ಬೇವಿನಹಳ್ಳಿ, ಓಂಕಾರಪ್ಪ ದಾವಣಗೆರೆ, ಶಂಕ್ರಪ್ಪ ದಾವಣಗೆರೆ, ಅಡಿವೇಶ್ ಹುಗ್ಗಿ, ಲಕ್ಷ್ಮೀ ರಾಜಚಾರ್, ಮಹೇಶ್ ಬನ್ನಿಕೋಡು ಮತ್ತಿತರರು ಭಾಗವಹಿಸಿದ್ದರು.